ಕರಾವಳಿ

ಕೋಟದಲ್ಲಿ ಅವಳಿ ಕೊಲೆ ಪ್ರಕರಣ: ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಬಂದ್, ಪ್ರತಿಭಟನೆ (Video)

Pinterest LinkedIn Tumblr

ಉಡುಪಿ: ಶೌಚಾಲಯ ಫಿಟ್ ವಿಚಾರದಲ್ಲಿ ಕಳೆದ ಶನಿವಾರ ಕೋಟ ಸಮೀಪದ ಮಣೂರು ಚಿಕ್ಕನಕೆರೆಯ ಬಳಿ ನಡೆದ ಅಮಾಯಕ ಯುವಕರಿಬ್ಬರ ಅವಳಿ ಕೊಲೆಯ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಕೋಟದಲ್ಲಿ ಬಂದ್ ನಡೆಯಿತು. 25ಕ್ಕೂ ಹೆಚ್ಚು ಸಂಘಟನೆಗಳು, ಮಹಿಳೆಯರು ಸೇರಿದಂತೆ ವಿವಿಧ ಜಾತಿ ಧರ್ಮದವರು ಈ ಹೋರಾಟದಲ್ಲಿ ಭಾಗವಹಿಸಿದರು.

ಘಟನೆ ನಡೆದ ವಾರ ಕಳೆದರು ಆರೋಪಿಗಳ ಬಂಧನವಾಗದಿರುವುದರಿಂದ ಸಾರ್ವಜನಿಕ ವಲಯದಲ್ಲಿ ಭಯದ ವಾತವರಣ ಸೃಷ್ಟಿಯಾಗಿದೆ. ಆದಷ್ಟು ಶೀಘ್ರ ಆರೋಪಿಗಳನ್ನು ಬಂಸಬೇಕು.ಈ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯ ಗಲ್ಲುಶಿಕ್ಷೆಯಂತಹ ಕಠಿಣ ಶಿಕ್ಷೆ ನೀಡಬೇಕು. ಆರೋಪಿತ ಕುಟುಂಬವನ್ನೇ ಇಲ್ಲಿಂದ ಸ್ಥಳಾಂತರಿಸಬೇಕು ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕಪಡಿಸಿದರು. ಈ ಘಟನೆ ಉಡುಪಿ ಜಿಲ್ಲೆಯ ಪೊಲೀಸ್ ವ್ಯವಸ್ಥೆಗೂ ಕಪ್ಪು ಚುಕ್ಕೆಯಾಗಿದೆ. ಪೊಲೀಸ್ ವ್ಯವಸ್ಥೆ ಆರೋಪಿಗಳು ಯಾವುದೇ ಕಾರಣಕ್ಕೆ ತಪ್ಪಿಸಿಕೊಳ್ಳದಂತೆ ಕ್ರಮಕೈಗೊಳ್ಳುಬೇಕು. ಶೀಘ್ರ ಆರೋಪಿಗಳ ಬಂಧಿಸಿ ಅವರಿಗೆ ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಹಿಂದೆಂದೂ ಇಂತಹ ಘಟನೆ ನಡೆದಿಲ್ಲ. ಈ ಘಟನೆ ನಮ್ಮ ಊರಿಗೆ ಕಪ್ಪು ಚುಕ್ಕೆಯಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ಅಮಾಯಕ ಯುವಕರನ್ನು ಬಲಿಪಡೆದ ಈ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಫೆ. ೬ರೊಳಗೆ ಪ್ರಕರಣದ ಆರೋಪಿಗಳ ಬಂಧನವಾಗದಿದ್ದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ ಎಂದರು.

ಪ್ರತಿಭಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಲಕ್ಷ್ಮಣ ನಿಂಬರ್ಗಿ ಆಗಮಿಸಿ ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಈಗಾಗಲೇ ನಾಲ್ಕು ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆಬೀಸಿದ್ದೇವೆ. ತಪ್ಪಿತಸ್ಥರು ಯಾರೊಬ್ಬರನ್ನು ಈ ಪ್ರಕರಣದಲ್ಲಿ ಬಿಡೋದಿಲ್ಲ. ನಿಸ್ಪಕ್ಷಪಾತ ತನಿಖೆ ನಡೆಯುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಹಣ ಸಂಗ್ರಹ ಕಾರ್ಯವೂ ನಡೆಯಿತು. ಕೊಲೆಯಾದ ಅವಳಿ ಕುಟುಂಬಕ್ಕೆ ವಿವಿಧ ಸಂಘಟನೆಗಳ ಮುಖಂಡರು ಮೃತ ಯುವಕರ ಮನೆಗೆ ಸಹಕಾರ ನೀಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಇಂಟೆಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ, ಉಡುಪಿ ಜಿಲ್ಲಾ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಸತೀಶ್ ಪೂಜಾರಿ, ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ, ಸಾಮಾಜಿಕ ಹೋರಾಟಗಾರ ದಿನೇಶ್ ಗಾಣಿಗ ಕೋಟ,ಕುಂದಾಪುರ ಪುರಸಭೆಯ ಮಾಜಿ ಉಪಾಧ್ಯಕ್ಷ ರಾಜೇಶ ಕಾವೇರಿ,ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್, ಲಿಯಾಕತ್ ಸಾಹೇಬ್,ಭಗತ್ ಸಿಂಗ್ ಕ್ರಾಂತಿಕಾರಿ ಬಳಗದ ಧನಂಜಯ್ ಕುಂದಾಪುರ, ಮೊಗವೀರ ಯುವ ಸಂಘಟನೆಯ ಎಂ.ಎಸ್. ಸಂಜೀವ, ಶಿವರಾಮ ಕೆ.ಎಂ. ಮುಂತಾದವರು ಮಾತನಾಡಿದರು.

ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್, ತಾ.ಪಂ. ಸದಸ್ಯೆ ಲಲಿತಾ ಪೂಜಾರಿ, ನ್ಯಾಯವಾದಿ ಶ್ಯಾಮ್ ಸುಂದರ್ ನಾಯರಿ, ಸಾಸ್ತಾನ ವಿಟ್ಠಲ ಪೂಜಾರಿ, ಕೋಡಿ ಕನ್ಯಾಣ ಜಯಂತ್ ಅಮೀನ್, ಮೊಗವೀರ ಯುವ ಸಂಘಟನೆಯ ಚಂದ್ರ ಮೆಂಡನ್, ಕೋಟ ಗ್ರಾ.ಪಂ. ಅಧ್ಯಕ್ಷೆ ವನಿತಾ ಶ್ರೀದರ್ ಆಚಾರ್ಯ, ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ರಘು ತಿಂಗಳಾಯ, ಸ್ಥಳೀಯರಾದ ವಿವೇಕ ಸುವರ್ಣ,ಸಂದೀಪ್ ಕೋಡಿ, ಬಸವ ಮರಕಾಲ ಕಲ್ಲುಗದ್ದೆ,ಎಂ. ಸುಬ್ರಾಯ ಆಚಾರ್ಯ,ಪ್ರಸಾದ್ ಮಣೂರು,ಲೋಹಿತ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು. ಪ್ರಶಾಂತ್ ಶೆಟ್ಟಿ ಸಾಸ್ತಾನ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ ಡಿವೈ‌ಎಸ್‌ಪಿ ಜೈಶಂಕರ್, ಕುಂದಾಪುರ ಡಿವೈ‌ಎಸ್‌ಪಿ ದಿನೇಶ್, ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್, ಕೋಟ ಠಾಣಾಕಾರಿ ನರಸಿಂಹ ಶೆಟ್ಟಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ: 

ಕೋಟದಲ್ಲಿ ತಲವಾರು ದಾಳಿ: ಕ್ಷುಲ್ಲಕ ಕಾರಣಕ್ಕೆ ಹರಿಯಿತು ಇಬ್ಬರ ನೆತ್ತರು (Updated)

ಆಪ್ತಮಿತ್ರರಿಬ್ಬರ ಬರ್ಬರ ಕೊಲೆ ಪ್ರಕರಣ: ಕೋಟ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ (Video)

ಟಾಯ್ಲೆಟ್ ಪಿಟ್ ನಿರ್ಮಾಣದ ತಕರಾರು: ಆಪ್ತ ಮಿತ್ರರಿಬ್ಬರ ಮೇಲೆ ತಲವಾರು ಬೀಸಿದ ಹಂತಕರು

ಕೋಟ ಆಪ್ತಮಿತ್ರರನ್ನು ಕೊಂದ ಕೊಲೆಗಾರರ ಪತ್ತೆಗೆ ಚುರುಕುಗೊಂಡ ತನಿಖೆ

ಕೋಟದಲ್ಲಿ ಸ್ನೇಹಿತರಿಬ್ಬರ ಮರ್ಡರ್ ಕೇಸ್: ಆರೋಪಿಗಳಿಗಾಗಿ ಮುಂದುವರಿದ ಶೋಧ

ಕೋಟ ಅವಳಿ ಕೊಲೆ: ಹರೀಶ್ ರೆಡ್ಡಿ ಸಹಚರರು ಇನ್ನೂ ಭೂಗತ!

ಇನ್ನೂ ಪತ್ತೆಯಾಗದ ಕೊಲೆಗಾರರು; ನ್ಯಾಯಕ್ಕಾಗಿ ಆಗ್ರಹಿಸಿ ಫೆ.3ಕ್ಕೆ ಕೋಟ ಬಂದ್

Comments are closed.