ಕರಾವಳಿ

ಟಾಯ್ಲೆಟ್ ಪಿಟ್ ನಿರ್ಮಾಣದ ತಕರಾರು: ಆಪ್ತ ಮಿತ್ರರಿಬ್ಬರ ಮೇಲೆ ತಲವಾರು ಬೀಸಿದ ಹಂತಕರು

Pinterest LinkedIn Tumblr

ಕುಂದಾಪುರ: ಶೌಚಾಲಯ ಗುಂಡಿ ತೆಗೆಯುವ ವಿಚಾರದಲ್ಲಿ ರೌಡಿ ಶೀಟರ್ ಜೊತೆಗೆ ನಡೆದ ತಕರಾರಿನಲ್ಲಿ ಗೆಳೆಯನ ಪ್ರಾಣ ಉಳಿಸಲು ಹೋದ ಇನ್ನಿಬ್ಬರು ಗೆಳೆಯರು ಜೀವವನ್ನೇ ಕಳೆದುಕೊಂಡಿದ್ದಾರೆ. ಶನಿವಾರ ತಡರಾತ್ರಿ ಉಡುಪಿ ಜಿಲ್ಲೆಯ ಕೋಟ ಸಮೀಪ ಶನಿವಾರ ತಡರಾತ್ರಿ ನಡೆದ ತಲವಾರು ದಾಳಿಯಲ್ಲಿ ಕಾರ್ತಟ್ಟು ಸಮೀಪದ ಚಿತ್ರಪಾಡಿ ನಿವಾಸಿ ಯತೀಶ್ ಕಾಂಚನ್ (26) ಹಾಗೂ ಕೋಟ ಬಾರಿಕೆರೆ ನಿವಾಸಿ ಭರತ್ ಶ್ರಿಯಾನ್ (25) ಬರ್ಬರ ಕೊಲೆಯಾಗಿದ್ದು ಈ ಘಟನೆ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.

ಮಣೂರು ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಭರತ್ ಹಾಗೂ ಯತೀಶ್ ಗೆಳೆಯ ಲೋಹಿತ್ ಮನೆಯಿದ್ದು ಅಲ್ಲಿಗೆ ಸಮೀಪದಲಿಯೇ ರೌಡಿಶೀಟರ್ ಹರೀಶ್ ರೆಡ್ಡಿ ಎಂಬಾತನ ಮನೆ ಹಿಂಭಾಗದಲ್ಲಿ ಇನ್ನೊಂದು ಮನೆ ಖರೀಧಿ ಮಾಡಿದ್ದರು. ಹರೀಶ್ ರೆಡ್ಡಿ ಮನೆ ಹಿಂಭಾಗ ಇನ್ನೊಂದು ಕಟ್ಟಡ ನಿರ್ಮಿಸಿ ಅಲ್ಲಿ ಟಾಯ್ಲೆಟ್ ಪಿಟ್ ತೆರೆಯಲು ಮುಂದಾದಾಗ ಇದಕ್ಕೆ ಲೋಹಿತ್ ಆಕ್ಷೇಪ ವ್ಯಕ್ತಪಡಿಸಿ ಬಾವಿಗೆ ಇದರಿಂದ ಸಮಸ್ಯೆಯಾಗುವುದೆಂದು ತಿಳಿಸಿದ್ದರು. ಇದರಿಂದಾಗಿ ಲೋಹಿತ್ ಹಾಗೂ ಹರೀಶ್ ರೆಡ್ಡಿ ಜೊತೆಗೆ ಮನಸ್ತಾಪ ನಡೆದಿದ್ದು ಒಂದೆರಡು ಬಾರಿ ಮಾತುಕತೆಯೂ ನಡೆದಿತ್ತೆನ್ನಲಾಗಿದೆ.

ಅಂದು ರಾತ್ರಿ ಆಗಿದ್ದೇನು?
ಶನಿವಾರ ರಾತ್ರಿ 11 ಗಂಟೆ ಬಳಿಕ ಲೋಹಿತ್ ಮನೆ ಸಮೀಪ ಒಂದಷ್ಟು ಮಂದಿ ದುಷ್ಕರ್ಮಿಗಳ ಗುಂಪು ಠಳಾಯಿಸಲು ಆರಂಭಿಸಿದ್ದು ಇದರಿಂದ ಲೋಹಿತ್ ಹಾಗೂ ಕುಟುಂಬ ಕಂಗಾಲಾಗಿತ್ತು. ಬೈಕ್ ಮೂಲಕ ಬಂದು ಬೆದರಿಸುತ್ತಿದ್ದ ಗುಂಪನ್ನು ಕಂಡು ಬೆದರಿದ ಲೋಹಿತ್ ತನ್ನ ಸ್ನೇಹಿತರಾದ ಯತೀಶ್ ಹಾಗೂ ಭರತನಿಗೆ ಕರೆ ಮಾಡಿ ಮನೆ ಸಮೀಪ ಬರುವಂತೆ ವಿನಂತಿಸಿದ್ದ. ಅದರಂತೆಯೇ ಭರತ್ ಆಟೋ ರಿಕ್ಷಾದಲ್ಲಿ ಯತೀಶ್ ಮತ್ತು ಭರತ್ ಲೋಹಿತ್ ಮನೆಗೆ ಆಗಮಿಸಿದ್ದು ಅವರ ಮೇಲೆ ಹರೀಶ್ ರೆಡ್ಡಿ ಸಹಚರರು ತಲವಾರು ದಾಳಿ ನಡೆಸಿದ್ದಾರೆ. ಮನಸ್ಸೋಇಚ್ಚೆ ತಲವಾರು ದಾಳಿಯಿಂದ ಮಾರಣಾಂತಿಕವಾಗಿ ಗಾಯಗೊಂಡ ಯತೀಶ್ ಕಾಂಚನ್ ಸ್ಥಳದಲ್ಲೇ ಮೃತಪಟ್ಟಿದ್ದು ಗಂಭೀರವಾಗಿ ಗಾಯಗೊಂಡ ಭರತ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದರು.

ಸ್ನೇಹಕ್ಕಾಗಿಯೇ ಮಿಡಿಯುತ್ತಿದ್ದವರು…
ಬಿ.ಕಾಂ ಪದವೀದರ ಯತೀಶ್ ಕಾಂಚನ್ ಬಾಲ್ಯದಲ್ಲಿಯೇ ತಂದೆತಾಯಿಯನ್ನು ಕಳೆದುಕೊಂಡಿದ್ದು ಸಹೋದರನ ಜೊತೆ ತನ್ನ ದೊಡ್ಡಮ್ಮ ಮತ್ತು ಚಿಕ್ಕಮ್ಮನ ಜೊತೆ ಚಿತ್ರಪಾಡಿಯಲ್ಲಿ ನೆಲೆಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿಯವರ ಆಪ್ತ ಸಹಾಯಕರಾಗಿದ್ದರು. ಎಲ್ಲರೊಡನೆ ಉತ್ತಮ ಬಾಂದವ್ಯವನ್ನಿಟ್ಟುಕೊಂಡಿದ್ದ ಯತೀಶ್ ಜನಾನುರಾಗಿಯಾಗಿದ್ದರು. ಕಳೆದ ಕೆಲ ತಿಂಗಳುಗಳಿಂದ ಬೆಂಗಳುರಿನಲ್ಲಿ ನೆಲೆಸಿದ್ದ ಯತೀಶ್ ಕಳೆದ ವಾರ ಮನೆಯಲ್ಲಿ ನಡೆದ ಶುಭಕಾರ್ಯ ನಿಮಿತ್ತ ಊರಿಗೆ ಬಂದಿದ್ದರು. ಇನ್ನು ಭರತ್ ಶ್ರಿಯಾನ್ ರಾಮಣ್ಣ ಹಾಗೂ ಪಾರ್ವತಮ್ಮ ದಂಪತಿಗಳ ಇಬ್ಬರು ಪುತ್ರರಲ್ಲಿ ಓರ್ವ. ಕೋಟದಲ್ಲಿ ರಿಕ್ಷಾ ಚಾಲಕರಾಗಿದ್ದು ಇವರು ಬಿಬಿಎಂ ವ್ಯಾಸಂಗ ಮಾಡಿದ್ದರು. ಕಲ್ಮಾಡಿ ಯುವಕ ಮಂಡಲದ ಅಧ್ಯಕ್ಷರೂ ಆಗಿದ್ದರು. ಇಬ್ಬರು ಕೂಡ ಆತ್ಮೀಯ ಸ್ನೇಹಿತರಾಗಿದ್ದು ಸದಾ ಸ್ನೇಹಕ್ಕಾಗಿ ಪ್ರಾಣ ಕೊಡುವಷ್ಟು ಆತ್ಮೀಯತೆ ಇವರಿಬ್ಬರಲ್ಲಿತ್ತು. ಅಂತೆಯೇ ಸಾವಿನಲ್ಲೂ ತಾವ್ಬ್ಬರೂ ಒಂದಾಗಿ ಹೋದರು ಎಂದು ಅವರನ್ನು ಹತ್ತಿರದಿಂದ ಕಂಡ ಗೆಳೆಯರು ನುಡಿಯುತ್ತಾರೆ.

ಮನೆಮಗನನ್ನು ಕಳೆದುಕೊಂಡೆವು..
ಮನೆಗೆ ಆಸರೆಯಾಗಿದ್ದು ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದ. ನನ್ನ ಮಗನನ್ನು ಕೊಂದ ಆ ಪಾಪಿಗಳಿಗೆ ದೇವರು ತಕ್ಕ ಶಿಕ್ಷೆ ನೀಡುತ್ತಾನೆ. ಎಲ್ಲರನ್ನೂ ಹೀಗೆ ದ್ವೇಷ ಸಾಧಿಸಿ ಕೊಲ್ಲುವುದಾರೆ ಹೇಗೆ? ಎಲ್ಲರಿಗೂ ಸಂಸಾರವಿರುತ್ತದೆಯೆಂಬುದು ತಿಳಿಯದ ಕ್ರೂರಿಗಳಿಗೆ ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆಯಾಗಬೇಕು. ನಮಗೆ ನ್ಯಾಯ ಬೇಕು ಎಂದು ಯತೀಶ್ ಅವರ ದೊಡ್ಡಮ್ಮ ಕಣ್ಣೀರಿಡುತ್ತಾ ಮಾಧ್ಯಮದ ಮುಂದೆ ಅವಲತ್ತುಕೊಂಡರು.

ಭರತ್ ಶ್ರಿಯಾನ್ ಮನೆಯಲ್ಲು ಆಕ್ರಂಧನ ಮುಗಿಲು ಮುಟ್ಟಿದೆ. ಮೌನ, ಕಣ್ಣಿರು ಬಿಟ್ಟರೇ ಯಾರೊಬ್ಬರು ಮಾತನಾಡುತ್ತಿಲ್ಲ. ಸದ್ಯ ಇಬ್ಬರ ಶವವನ್ನು ಮಣಿಪಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಹುಟ್ಟೂರಿಗೆ ತರಲಾಗುತ್ತದೆ.

ಕೊಲೆ ಮಾಡಿ ತಲೆಮರೆಸಿಕೊಂಡ ಹರೀಶ್ ರೆಡ್ಡಿ ಹಾಗೂ ಸಹಚರರ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Related News-

ಆಪ್ತಮಿತ್ರರಿಬ್ಬರ ಬರ್ಬರ ಕೊಲೆ ಪ್ರಕರಣ: ಕೋಟ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ (Video)

ಕೋಟದಲ್ಲಿ ತಲವಾರು ದಾಳಿ: ಕ್ಷುಲ್ಲಕ ಕಾರಣಕ್ಕೆ ಹರಿಯಿತು ಇಬ್ಬರ ನೆತ್ತರು (Updated)

Comments are closed.