ಉಡುಪಿ: ಭಾರತದ ನೌಕಾ ಸೇನೆಗೆ ಸಂಬಂಧಪಟ್ಟ ಹಡಗುಗಳ ನಂಬರ್‌ಗಳ ಗೌಪ್ಯ ಪಟ್ಟಿ, ಇತರ ಗೌಪ್ಯ ಮಾಹಿತಿಯನ್ನು ವಾಟ್ಸಪ್ ಮೂಲಕ ಅನಧಿಕೃತವಾಗಿ ಶೇರ್ ಮಾಡಿ, ಅಕ್ರಮ ಲಾಭ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಉತ್ತರ ಪ್ರದೇಶದ ರೋಹಿತ್ (29), ಸಂತ್ರಿ (37) ಯನ್ನು ಮಲ್ಪೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

(ಬಂಧಿತ ಆರೋಪಿಗಳು)
ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್, ಮಲ್ಪೆ ಇದು ಕೇಂದ್ರ ಸರ್ಕಾರ ಸ್ವಾಮ್ಯದ ಬಂದರು ಹಡಗು ಮತ್ತು ಜಲಸಾರಿಗೆ ಇಲಾಖೆಯ ಅಡಿಯಲ್ಲಿರುವ ಬರುವ ಒಂದು ಸಂಸ್ಥೆಯಾಗಿರುತ್ತದೆ. ಈ ಸಂಸ್ಥೆಯಿಂದ ಎಂ.ಎಸ್. ಸುಷ್ಮಾ ಮರೈನ್ ಪ್ರೈವೆಟ್ ಲಿಮಿಟೆಡ್ ಎಂಬ ಸಂಸ್ಥೆಯ ಸಬ್‌ಕಂಟ್ರಾಕ್ಟ್ ಹೊಂದಿದ್ದು, ಈ ಸಂಸ್ಥೆಯಲ್ಲಿ ಉತ್ತರಪ್ರದೇಶ ರಾಜ್ಯದ ರೋಹಿತ್ ಎಂಬಾತನು ಇನ್ಸುಲೇಟರ್ ಆಗಿ ಕೆಲಸ ಮಾಡಿಕೊಂಡಿದ್ದಾನೆ.
ಈತ ಈ ಹಿಂದೆ ಕೇರಳ ರಾಜ್ಯದ ಕೊಚ್ಚಿಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಕೇರಳದ ಕೊಚ್ಚಿನ್ ಶಿಪ್‌ಯಾರ್ಡ್ ನಲ್ಲಿ ಭಾರತದ ನೌಕಾ ಸೇನೆಗೆ ಸಂಬಂಧಪಟ್ಟ ಹಡಗುಗಳನ್ನು ನಿರ್ಮಾಣ ಮಾಡುತ್ತಿದ್ದ. ರೋಹಿತ್ ಕೇರಳದಲ್ಲಿ ಕೆಲಸ ಮಾಡುವಾಗ ಭಾರತದ ನೌಕಾಸೇನೆಗೆ ಸಂಬಂಧಪಟ್ಟ ಹಡಗುಗಳ ನಂಬರ್ ಗಳ ಗೌಪ್ಯ ಪಟ್ಟಿ, ಇತರ ಗೌಪ್ಯ ಮಾಹಿತಿಯನ್ನು ವಾಟ್ಸಪ್ ಮೂಲಕ ಅನಧಿಕೃತವಾಗಿ ಶೇರ್ ಮಾಡಿ, ಅಕ್ರಮ ಲಾಭ ಪಡೆದಿದ್ದ. ನಂತರ ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ಗೆ ಬಂದ ನಂತರವೂ ಆತ ಕೊಚ್ಚಿಯಲ್ಲಿರುವ ಆತನ ಸ್ನೇಹಿತನಿಂದ ಮಾಹಿತಿ ಪಡೆದು, ವಾಟ್ಸಪ್ ಮೂಲಕ ಅನಧಿಕೃತ ವ್ಯಕ್ತಿಗೆ ಶೇರ್ ಮಾಡಿ, ಭಾರತದ ಸಾರ್ವಭೌಮತೆ, ಏಕತೆ ಮತ್ತು ಅಖಂಡತೆಗೆ ಅಪಾಯವನ್ನುಂಟು ಮಾಡುವ ಮತ್ತು ಆಂತರಿಕ ಭದ್ರತೆಗೆ ಧಕ್ಕೆ ತರುವ ಕೆಲಸ ಮಾಡಿದ್ದ. ಈ ಬಗ್ಗೆ ಸಿಇಓ, ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್, ಮಲ್ಪೆ ಇವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಈ ಪ್ರಕರಣದ ತನಿಖೆಯನ್ನು ಕೈಗೊಂಡ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಹರ್ಷ ಪ್ರಿಯಂವದಾ ಐಪಿಎಸ್ ಅವರ ನೇತೃತ್ವದ ಮಲ್ಪೆ ಪೊಲೀಸ್ ಉಪನಿರೀಕ್ಷಕ ಅನೀಲ್ ಕುಮಾರ್ ಡಿ, ಎಎಸ್‌ಐ ಹರೀಶ್, ಪಿಸಿ ರವಿ ಜಾಧವ್ ಮತ್ತು ತಂಡ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ಡಿ.7 ವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.
Comments are closed.