ಕುಂದಾಪುರ: ಶಾಲೆ ಮುಗಿಸಿ ಬಂದು ಮನೆ ಸಮೀಪದಲ್ಲಿ ಆಟವಾಡುತ್ತಿದ್ದ ಬಾಲಕನೋರ್ವ ಸಂಜೆ ಬಳಿಕ ನಾಪತ್ತೆಯಾಗಿದ್ದು ಕೆಲ ಕಾಲ ಆತಂಕ ಸೃಷ್ಟಿಯಾಗಿದ್ದು ಗಂಗೊಳ್ಳಿ ಪೊಲೀಸರು ಹಾಗೂ ಸ್ಥಳೀಯರ ಸತತ ಹುಡುಕಾಟದ ಬಳಿಕ ರಾತ್ರಿ 12.40 ರ ಸುಮಾರಿಗೆ ಮನೆ ಸಮೀಪದ ಎತ್ತರ ಪ್ರದೇಶದ ಕಲ್ಲಿನ ಪೊಠರೆಯೊಳಗೆ ಕುಳಿತಿದ್ದ ಬಾಲಕನನ್ನು ಪಿಎಸ್ಐ ಪವನ್ ನಾಯಕ್ ಪತ್ತೆ ಮಾಡಿದ್ದಾರೆ. ಈ ಘಟನೆ ಗುಜ್ಜಾಡಿ ಬೆಣ್ಗೆರೆ ಎಂಬಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

ಘಟನೆ ವಿವರ: ಸ್ಥಳೀಯ ಸರಕಾರಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ 10 ವರ್ಷದ ಬಾಲಕ ಸಂಜೆ ಶಾಲೆ ಮುಗಿದ ಬಳಿಕ ಮನೆಗೆ ಬಂದು ಮಕ್ಕಳೊಂದಿಗೆ ಆಟವಾಡಿಕೊಂಡಿದ್ದ. ಸಂಜೆಯಾದರೂ ಮನೆಗೆ ಬಾರದಿದ್ದಾಗ ಮನೆಯವರಲ್ಲಿ ಆತಂಕ ಹೆಚ್ಚಿದೆ. ಅವರು ಸಹಿತ ಸ್ಥಳೀಯ ನೂರಾರು ಮಂದಿ ಅಲ್ಲಿಲ್ಲಿ ಹುಡುಕಾಡಿದ್ದಾರೆ. ನಂತರ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ವಿವಿದೆಡೆ ಹುಡುಕಾಟ ನಡೆಸಿದ್ದಾರೆ. ತಡರಾತ್ರಿ 12.40 ರ ಸುಮಾರಿಗೆ ಎತ್ತರದ ಕಲ್ಲುಪೊಟರೆಯೊಳಕ್ಕೆ ಬಾಲಕನಿರುವುದು ಠಾಣಾಧಿಕಾರಿ ಪವನ್ ನಾಯಕ್ ಅವರಿಗೆ ಕಂಡಿದ್ದು ಆತನನ್ನು ರಕ್ಷಿಸಿ ಮನೆಯವರಿಗೆ ಹಸ್ತಾಂತರಿಸಿದರು.
ಗಂಗೊಳ್ಳಿ ಪೊಲೀಸ್ ಠಾಣೆ ಸಿಬ್ಬಂದಿಗಳು ಹಾಗೂ ಸ್ಥಳೀಯರು ಬಾಲಕನ ಪತ್ತೆ ಕಾರ್ಯದಲ್ಲಿ ಸಹಕಾರ ನೀಡಿದ್ದರು.
Comments are closed.