ಕರಾವಳಿ

ಕೊಲ್ಲೂರು-ಹೆಮ್ಮಾಡಿ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಕಂದಮ್ಮನನ್ನು ಹೈವೇ ಪಟ್ರೋಲ್ ವಾಹನದಲ್ಲೇ ಆಸ್ಪತ್ರೆಗೆ ಕರೆದೊಯ್ದು ಪೊಲೀಸರ ಮಾನವೀಯತೆ

Pinterest LinkedIn Tumblr

ಕುಂದಾಪುರ: ತಾಲೂಕಿನ ಹೆಮ್ಮಾಡಿ-ಕೊಲ್ಲೂರು ಮುಖ್ಯ ರಸ್ತೆಯ ಜಾಡಿ ಎಂಬಲ್ಲಿ ಬುಧವಾರ ಮಧ್ಯಾಹ್ನ ನಡೆದ ಕಾರು-ಬೈಕ್ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡ ಮೂರು ವರ್ಷದ ಮಗುವನ್ನು  ಪೊಲೀಸ್ ಇಲಾಖೆ ವಾಹನದಲ್ಲಿ ತುರ್ತಾಗಿ ಕುಂದಾಪುರ ಆಸ್ಪತ್ರೆಗೆ ದಾಖಲಿಸಿ ಪೊಲೀಸ್ ಇಲಾಖೆಯ ಹೈವೇ ಪಟ್ರೋಲ್ ವಾಹನದ ಚಾಲಕ ರಾಮ ಹಾಗೂ ಸಿಬ್ಬಂದಿ ಕಿರಣ್ ಬಿ. ಪಾಟೀಲ್ ಮಾನವೀಯತೆ ಮೆರೆದಿದ್ದಾರೆ‌.

ಘಟನೆ ವಿವರ: ಹೆಮ್ಮಾಡಿಯಿಂದ ಕೊಲ್ಲೂರು ಕಡೆ ಸಾಗುವ ಕಾರು ಹಾಗೂ ನೆಂಪು ಕಡೆಯಿಂದ ಕುಂದಾಪುರಕ್ಕೆ ತೆರಳುತ್ತಿದ್ದ ದಂಪತಿ ಹಾಗೂ ಪುಟ್ಟ ಮಗುವಿದ್ದ ಬೈಕ್ ನಡುವೆ ಮುಖಾಮುಖಿ ಅಪಘಾತವು ಕೊಲ್ಲೂರು-ಹೆಮ್ಮಾಡಿ ಮುಖ್ಯರಸ್ತೆಯ ಜಾಡಿ ಎಂಬಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದಿದೆ. ಅನತಿ ದೂರದಲ್ಲಿ ಗಸ್ತಿನಲ್ಲಿದ್ದ ಹೈವೇ ಪಟ್ರೋಲ್ ವಾಹನ ಸ್ಥಳಕ್ಕೆ ದೌಡಾಯಿಸಿದ್ದು ಬೈಕ್‌ನಿಂದ ಬಿದ್ದವರನ್ನು ಪ್ರಾಥಮಿಕವಾಗಿ ಉಪಚರಿಸಿ ಗಂಭೀರ ಗಾಯಗೊಂಡಿದ್ದ 3 ವರ್ಷದ ಹೆಣ್ಣು ಮಗುವನ್ನು ಇಲಾಖಾ ವಾಹನದಲ್ಲಿ ಕುಂದಾಪುರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ದಂಪತಿಯನ್ನು ಸ್ಥಳೀಯ ವಾಹನದವರು ಆಸ್ಪತ್ರೆಗೆ ಕರೆದೊಯ್ದಿದ್ದು ಮೂವರಿಗೆ ಕುಂದಾಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಪೊಲೀಸರ ತುರ್ತು ಸ್ಪಂದನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

Comments are closed.