ಕರಾವಳಿ

ಕೋಟದಲ್ಲಿ ಸ್ನೇಹಿತರಿಬ್ಬರ ಮರ್ಡರ್ ಕೇಸ್: ಆರೋಪಿಗಳಿಗಾಗಿ ಮುಂದುವರಿದ ಶೋಧ

Pinterest LinkedIn Tumblr

ಕುಂದಾಪುರ: ಕೋಟ ಆಪ್ತ ಮಿತ್ರರ ಕೊಲೆ ನಡೆದ ನಾಲ್ಕು ದಿನ ಕಳೆದಿದ್ದು, ಆಪಾದಿತರ ಸುಳಿವು ಇನ್ನೂ ಲಭ್ಯವಾಗಿಲ್ಲ.  ಭರತ್ ಶ್ರೀಯಾನ್ ಹಾಗೂ ಯತೀಶ್ ಕಾಂಚನ್ ಅವರ ಸ್ನೇಹಿತ ಲೋಹಿತ್ ಪೂಜಾರಿ ಮನೆ ಎದುರು ಕೊಚ್ಚಿ ಕೊಲೆ ಮಾಡಿದ ನಂತರ ರೌಡಿ ಶೀಟರ್ ಹರೀಶ್ ರೆಡ್ಡಿ ಸಹಚರರು ನಾಪತ್ತೆಯಾಗಿದ್ದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ ನಿಂಬರ್ಗಿ ಉಡುಪಿ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತನಿಖಾ ಪೊಲೀಸ್ ತಂಡ ರಚಿಸಿದ್ದು, ತಂಡ ಶಿವಮೊಗ್ಗ, ತುಮಕೂರು, ಆಂಧ್ರ, ಚೆನ್ನೈ ಮುಂತಾದ ಕಡೆ ಮಾಹಿತಿ ಕಲೆ ಹಾಕಲು ತೆರಳಿದ್ದು, ಕೊಲೆಗಾರರ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ.

ಹರೀಶ್ ರೆಡ್ಡಿ ಈ ಹಿಂದೆ ಕೊಲೆ, ಆಸಿಡ್ ಹಾಕಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗುತ್ತಿದ್ದು, ಉಡುಪಿ ಪರಿಸರದಲ್ಲಿ ಒಂದು ಕೊಲೆ ಹಾಗೂ ಸಾಸ್ತಾನ ಓರ್ವ ವ್ಯಕ್ತಿಮೇಲೆ ಆಸಿಡ್ ಹಾಕಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ಆರೋಪವಿದೆ. ಅಲ್ಲದೇ ಕೊಲ್ಲೂರಿನ ದರೋಡೆ ಪ್ರಕರಣದಲ್ಲಿಯೂ ಪ್ರಮುಖ ರೂವಾರಿಯಾಗಿದ್ದ. ಹರೀಶ್ ರೆಡ್ಡಿ ಸಹೋದರರಲ್ಲದೆ ಇನ್ನಿತರರು ಸೇರಿ ಕೊಲೆ ನಡೆದ ದಿನದಿಂದ ಒಟ್ಟು ಏಳು ಜನ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹರೀಶ್ ರೆಡ್ಡಿ ಮನೆ ಮಣೂರಿನಲ್ಲಿದ್ದರೂ, ಹರೀಶ್ ರೆಡ್ಡಿ ಹಾಗೂ ರಾಜಶೇಖರ ರೆಡ್ಡಿ ಉಡುಪಿಯಲ್ಲೇ ಹೆಚ್ಚು ಇರುತ್ತಿದ್ದು, ಚಂದ್ರಶೇಖರ ರೆಡ್ಡಿ ಮನೆಯಲ್ಲಿ ಇರುತ್ತಿದ್ದ.

ಕೊಲೆಗಾರರ ಸುಳಿವು ಲಭ್ಯವಾಗುತ್ತಿದ್ದು, ಸದ್ಯದಲ್ಲಿ ಕೊಲೆಗಾರರ ಬಂಧಿಸುವ ಭರವಸೆ ಪೊಲೀಸರು ವ್ಯಕ್ತ ಪಡಿಸಿದ್ದಾರೆ.

Comments are closed.