ಕರಾವಳಿ

ಅರೆಬರೆಗೊಂಡ ಬೀಜಾಡಿ ಸರ್ವಿಸ್ ರಸ್ತೆ: ಡಿಸಿ ಬರ್ತಾರೆಂದು ಕಾದು ಸುಸ್ತಾದ ಜನತೆ! (Video)

Pinterest LinkedIn Tumblr

ಉಡುಪಿ: ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಬಗ್ಗೆ ನೇರವಾಗಿ ಜಿಲ್ಲಾಧಿಕಾರಿಗಳ ಬಳಿ ಸಮಸ್ಯೆ ಹೇಳಿಕೊಳ್ಳಬಹುದೆಂದು ಮಾಹಿತಿಯಿದ್ದ ಹಿನ್ನಲೇ ಮೂರ್ನಾಲ್ಕು ಗಂಟೆ ಹೊತ್ತು ಡಿಸಿ ಬರುವಿಕೆಗಾಗಿ ಜನರು ಕಾದು ಸುಸ್ತಾದ ಘಟನೆ ಮಂಗಳವಾರ ಸಂಜೆ ಬೀಜಾಡಿ ಬಳಿ ನಡೆದಿದೆ.

ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರ ಕಚೇರಿಯಿಂದ ಹೆದ್ದಾರಿಗೆ ಸಂಬಂಧಪಟ್ಟ ಪಂಚಾಯಿತಿಗಳಿಗೆ ಸಂದೇಶವೊಂದು ಬಂದಿದ್ದು ಸಂದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಎಲ್ಲೆಲ್ಲಿ ಸಮಸ್ಯೆಗಳಿವೆ ಅಲ್ಲಲ್ಲಿನ ಸಾರ್ವಜನಿಕರು ಸಮಸ್ಯೆಗಳ ಪಟ್ಟಿ ಮಾಡಿ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಲಾಗಿತ್ತು. ಅದರಂತೆ ಬೀಜಾಡಿ ಸರ್ವಿಸ್ ರೋಡ್ ಕಳೆದ ನವೆಂಬರ್ ನಲ್ಲಿ ಅಗೆದು ಹಾಕಿ ಹೋದ ನವಯುಗ ಕಂಪನಿ ಮತ್ತೆ ಈ ಕಡೆ ಬಾರದೇ ಇದ್ದುದನ್ನು ಕಂಡು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು.

ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳು ಆಗಮಿಸುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಒಂದಷ್ಟು ಮಂದಿ ಸಾರ್ವಜನಿಕರು, ಬೀಜಾಡಿ ಸರ್ವಿಸ್ ರಸ್ತೆ ಹೋರಾಟ ಸಮಿತಿಯ ಸದಸ್ಯರು ಬೀಜಾಡಿಯ ಯೂಟರ್ನ್ ನಲ್ಲಿ ನಿಂತು ಸಂಜೆ ನಾಲ್ಕು ಗಂಟೆಯಿಂದ ಕಾಯುತ್ತಿದ್ದರು. ಸಂಜೆ ಹೊತ್ತಿಗೆ ಜಿಲ್ಲಾಧಿಕಾರಿಗಳು ಆಗಮಿಸುವುದಿಲ್ಲ ಬದಲಿಗೆ ಕುಂದಾಪುರದ ಸಹಾಯಕ ಆಯುಕ್ತರಾದ ಅರುಣ್ ಪ್ರಭಾ ಮತ್ತು ನವಯುಗ ಕಂಪನಿಯ ಪ್ರಮುಖರು ಆಗಮಿಸುತ್ತಾರೆ ಎನ್ನುವ ಸೂಚನೆ ಬಂತು .ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಸುರೇಶ್ ಶಟ್ಟಿ, ಸ್ಥಳೀಯ ತಾಲ್ಲೂಕು ಪಂಚಾಯತಿ ಸದಸ್ಯೆ ವೈಲೆಟ್ ಬರೆಟ್ಟೋ , ಜೊತೆಗೆ ಪ್ರಮುಖ ಉದ್ದಿಮೆದಾರರು, ಸಾರ್ವಜನಿಕರು, ಹೋರಾಟ ಸಮಿತಿ ಪ್ರಮುಖರು, ಜೊತೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸದಸ್ಯರು ಸೇರಿದ್ದರು. ಆದರೆ ಅಧಿಕಾರಿಗಳು ಸಾಲಿಗ್ರಾಮದ ವರೆಗೆ ವೀಕ್ಷಣೆಯನ್ನು ಮಾಡಿ ಪುನಃ ಉಡುಪಿಗೆ ಹಿಂತಿರುಗಿದ ಕಾರಣ ಇಲ್ಲಿ ಸೇರಿದ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಯಿತು. ತಕ್ಷಣ ಅಧಿಕಾರಿಗಳಿಗೆ ಜಿಲ್ಲಾಡಳಿತಕ್ಕೆ ನವಯುಗ ಕಂಪೆನಿಗೆ ಧಿಕ್ಕಾರ ಕೂಗಿ ಆದಷ್ಟು ಬೇಗನೆ ಬೀಜಾಡಿ ಸರ್ವಿಸ್ ರಸ್ತೆ ಕಾಮಗಾರಿಯನ್ನು ಮುಗಿಸುವಂತೆ ಆಗ್ರಹಿಸಲಾಯಿತು.

Comments are closed.