ಆರೋಗ್ಯ

ಪುದಿನಾ ಸೇವಿಸುದರಿಂದ ಆರೋಗ್ಯಕ್ಕೆ ಆಗುವ ಲಾಭವನ್ನೊಮ್ಮೆ ನೀವು ತಿಳಿದುಕೊಳ್ಳಲೇಬೇಕು…

Pinterest LinkedIn Tumblr

ಪುದಿನಾ ದಿನನಿತ್ಯದ ಆಹಾರದಲ್ಲಿ ಬಳಕೆಯಾಗುವ ಒಂದು ಸೊಪ್ಪು ಮಾತ್ರವಲ್ಲ. ಇದು ಅಡುಗೆಯ ರುಚಿ ಹೆಚ್ಚಿಸುವುದರ ಜತೆಗೆ ಒಳ್ಳೆಯ ಸುವಾಸನೆ ನೀಡುತ್ತದೆ. ಭಾರತೀಯ ಆಹಾರ ಪದ್ಧತಿಯಲ್ಲಿ ಬಳಕೆಯಾಗುವ ಎಷ್ಟೋ ಪದಾರ್ಥಗಳು ಆರೋಗ್ಯದ ದೃಷ್ಟಿಯಿಂದ ತುಂಬಾ ಮಹತ್ವ ಹೊಂದಿರುತ್ತವೆ. ಅಂತಹ ಪದಾರ್ಥಗಳಲ್ಲಿ ಪುದಿನಾ ಸಹ ಒಂದು.

ಇದರಿಂದಾಗಿಯೇ ಪುದಿನಾ ಫ್ಲೇವರ್​ ಇರುವ ಟೂಥ್ ಪೇಸ್ಟ್, ಚಾಕೊಲೇಟ್​ ಮತ್ತು ಚೂಯಿಂಗ್ ಗಮ್​ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಕೀಟಾಣುಗಳನ್ನು ನೈಸರ್ಗಿಕವಾಗಿಯೇ ನಾಶ ಮಾಡುವ ಗುಣ ಹೊಂದಿದೆ. ಇಷ್ಟು ಮಾತ್ರವಲ್ಲದೆ ಪುದಿನಾ ಎಲೆಗಳು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸಿ, ಕೆಟ್ಟ ಉಸಿರನ್ನು ತಡೆಯುತ್ತದೆ.

ಪುದಿನಾ ಏಷ್ಯಾ, ಯುರೋಪ್ ಮತ್ತು ಮಧ್ಯಪೂರ್ವ ದೇಶಗಳಲ್ಲಿ ಬೆಳೆಯುವ ಬೆಳೆಯಾಗಿದೆ. ಇದನ್ನು ತಾಜಾ, ಒಣಗಿಸಿ ಹಾಗೂ ಸಾರಭೂತ ತೈಲವಾಗಿ ಬಳಸಿಕೊಳ್ಳಲಾಗುತ್ತದೆ.

ಬಾಯಿಯ ಕೆಟ್ಟ ವಾಸನೆ ತಡೆಯುತ್ತದೆ: ಪುದಿನಾದಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇದರ ಪ್ರಮುಖ ಆರೋಗ್ಯ ಗುಣಗಳಲ್ಲಿ ಒಂದು. ಕೆಲವು ಪುದಿನಾ ಎಲೆಗಳನ್ನು ತೆಗೆದುಕೊಂಡು ಜಗಿಯಿರಿ. ಇದು ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.

ಅಜೀರ್ಣ ನಿವಾರಣೆ: ನೀವು ಅಜೀರ್ಣದಿಂದ ಬಳಲುತ್ತಿದ್ದರೆ, ಪುದಿನಾ ಎಲೆಗಳಿಂದ ನಿಮಗೆ ಸಹಾಯವಾಗುತ್ತದೆ. ಪುದಿನಾ ಎಲೆಗಳು ಜೊಲ್ಲುರಸದ ಗ್ರಂಥಿಗಳನ್ನು ಕ್ರಿಯಾತ್ಮಕಗೊಳಿಸುವುದು ಮತ್ತು ಕಿಣ್ವಗಳನ್ನು ಪ್ರೇರೇಪಿಸುವ ಮೂಲಕ ಜೀರ್ಣಕ್ರಿಯೆಗೆ ಶಕ್ತಿ ನೀಡುತ್ತದೆ.

ಶ್ವಾಸಕೋಶದ ರೋಗ ತಡೆಯುವುದು: ನಿಮಗೆ ಕೆಲವೊಮ್ಮೆ ಉಸಿರಾಡಲು ತುಂಬಾ ಕಷ್ಟವಾಗುತ್ತಿದೆ ಎಂದಾದರೆ ಕೆಲವು ಪುದೀನಾ ಎಲೆಗಳನ್ನು ತೆಗೆದುಕೊಳ್ಳಿ. ಇದರಲ್ಲಿ ರೊಸ್ಮರಿನಿಕ್ ಆಮ್ಲವಿದೆ. ಇದು ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾದ್ದು, ಫ್ರೀ ರ್ಯಾಡಿಕಲ್ ಅನ್ನು ತಟಸ್ಥಗೊಳಿಸುವುದು ಮತ್ತು ಉರಿಯೂತದ ರಾಸಾಯನಿಕವನ್ನು ನಿರ್ಬಂಧಿಸುತ್ತದೆ. ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಪುದೀನಾವನ್ನು ಬಳಸಿಕೊಂಡರೆ ಉಸಿರಾಟದ ಸಮಸ್ಯೆ ನಿವಾರಣೆಯಾಗುವುದು.

ತೂಕ ಕಡಿಮೆಡ ಮಾಡಿಕೊಳ್ಳಲು: ಪುದಿನಾ ತುಂಬಾ ಕಡಿಮೆ ಕ್ಯಾಲರಿಗಳನ್ನು ಒಳಗೊಂಡಿರುವಂತಹ ಗಿಡಮೂಲಿಕೆಯಾಗಿದ್ದು, ಇದರಲ್ಲಿ ನಾರಿನಾಂಶ ಅಧಿಕವಾಗಿದೆ. ಪುದಿನಾ ಎಲೆಗಳು ಜೀರ್ಣಕ್ರಿಯೆಯ ಕಿಣ್ವಗಳನ್ನು ಉತ್ತೇಜಿಸುವುದು. ಇದರಿಂದ ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ನಿಮಗೆ ತೂಕ ಕಳೆದುಕೊಳ್ಳಬೇಕೆಂಬ ಮನಸ್ಸಿದ್ದರೆ ಪುದೀನಾವನ್ನು ದೈನಂದಿನ ಆಹಾರದಲ್ಲಿ ಬಳಸಿ.

ಕ್ಯಾನ್ಸರ್ ತಡೆಯುವುದು: ಪುದಿನಾ ಎಲೆಗಳಲ್ಲಿ ‘ವಿಟಮಿನ್ ಸಿ’ ಮತ್ತು ಆ್ಯಂಟಿಆಕ್ಸಿಡೆಂಟ್​ಗಳಿವೆ. ಈ ಗುಣಗಳಿಂದಾಗಿ ಪುದಿನ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುತ್ತದೆ. ಹೀಗೆ ಮಾಡುವುದರಿಂದ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಪುದೀನಾವನ್ನು ನಿತ್ಯದ ಆಹಾರ ಕ್ರಮದಲ್ಲಿ ಬಳಸಿದರೆ ಕ್ಯಾನ್ಸರ್​ನ್ನು ತಡೆಗಟ್ಟಬಹುದು.

ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು: ‘ವಿಟಮಿನ್ ಎ’ ಮತ್ತು ‘ಬೆಟಾ ಕ್ಯಾರೊಟಿನ್’ ಅಂಶದಿಂದ ಸಮೃದ್ಧವಾಗಿರುವ ಪುದಿನಾದ ಸೇವನೆ ಮಾಡಿದರೆ ಕಣ್ಣಿನ ಆರೋಗ್ಯ ಒಳ್ಳೆಯದಾಗಿರುವುದು. ಖಾದ್ಯ, ಸೂಪ್, ಸಲಾಡ್ ಮತ್ತು ಜ್ಯೂಸ್​ಗೆ ಪುದೀನಾ ಹಾಕಿದರೆ ಅದರಿಂದ ಕಣ್ಣಿನ ಆರೋಗ್ಯ ವೃದ್ಧಿಯಾಗುತ್ತದೆ.

ಸ್ನಾಯು ಸೆಳೆತ ತಡೆಯುವುದು: ನೀವು ಸ್ನಾಯು ಸೆಳೆತಕ್ಕೆ ಒಳಗಾಗಿದ್ದರೆ, ಕೆಲವು ಹನಿ ಪುದಿನಾ ಎಣ್ಣೆಯನ್ನು ಬಾಧಿತ ಪ್ರದೇಶಕ್ಕೆ ಹಚ್ಚಿಕೊಂಡರೆ ತಕ್ಷಣ ಆರಾಮ ಸಿಗುವುದು. ಪುದಿನಾದಲ್ಲಿ ಆ್ಯಂಟಿಸ್ಪಾಸ್ಮೊಡಿಕ್ ಗುಣಗಳಿವೆ. ಪುದಿನಾ ಎಣ್ಣೆ ಹಚ್ಚುವುದರಿಂದ ಸ್ನಾಯುಗಳು ಸಡಿಲವಾಗುವುದು ಮತ್ತು ಯಾವುದೇ ರೀತಿಯ ನೋವಿನಿಂದ ಆರಾಮ ನೀಡುತ್ತದೆ. ಜತೆಗೆ ಪುದಿನಾ ಎಣ್ಣೆ ತೆಗೆದುಕೊಂಡು ಹಣೆಗೆ ಹಚ್ಚಿಕೊಳ್ಳಿ. ಇದರಿಂದ ತಲೆನೋವು ಕೂಡ ನಿವಾರಣೆಯಾಗುತ್ತದೆ.

ಜ್ವರವನ್ನು ಕಡಿಮೆಗೊಳಿಸುತ್ತದೆ: ಯಾವುದೋ ವೈರಸ್ ದಾಳಿಗೆ ದೇಹ ತುತ್ತಾದಾಗ ರಕ್ಷಣಾ ವ್ಯವಸ್ಥೆ ದೇಹವನ್ನು ಬಿಸಿ ಮಾಡುವ ಮೂಲಕ ವೈರಸ್​ಗಳ ವಿರುದ್ಧ ಹೋರಾಡುತ್ತದೆ. ಮಿಂಟ್​ ಚಹಾದಲ್ಲಿರುವ ಮೆಂಥಾಲ್ ಹಲವು ವೈರಸ್ಸುಗಳನ್ನು ಹೊಡೆದು ಓಡಿಸುವ ನೈಸರ್ಗಿಕ ಔಷಧಿ ಆಗಿರುವುದರಿಂದ ಜ್ವರಕ್ಕೆ ಕಾರಣವಾದ ವೈರಸ್ ಇಲ್ಲವಾಗಿ ಜ್ವರ ಇಳಿಯುತ್ತದೆ.

ವಾಂತಿ ಮತ್ತು ವಾಕರಿಕೆಯನ್ನು ನಿವಾರಿಸುತ್ತದೆ: ಮಿಂಟ್​ ಚಹಾ ಹೊಟ್ಟೆಯ ಸ್ನಾಯುಗಳ ಸೆಳೆತವನ್ನು ಕಡಿಮೆಗೊಳಿಸಿ, ವಾಂತಿಯಾಗದಂತೆ ತಡೆಯುತ್ತದೆ. ಇದಕ್ಕಾಗಿ ಆಹಾರ ಸೇವಿಸಿದ ಬಳಿಕ, ಒಂದು ಕಪ್ ಮಿಂಟ್​ ಚಹಾ ಸೇ​ವಿಸುವುದು ಉತ್ತಮ.

ಮೂಗು ಕಟ್ಟಿರುವುದನ್ನು ತೆರವುಗೊಳಿಸುತ್ತದೆ: ಹಲವು ಕಾರಣಗಳಿಂದ ಮೂಗು ಕಟ್ಟುತ್ತದೆ. ವಾಸ್ತವವಾಗಿ ಇದೊಂದು ದೇಹದ ರಕ್ಷಣಾ ವ್ಯವಸ್ಥೆ. ಇದಕ್ಕಾಗಿ ಪುದಿನ ಚಹಾ ಎಲೆಗಳನ್ನು ಕುದಿಯುವ ನೀರಿಗೆ ಹಾಕಿ, ಈ ನೀರಿನಿಂದ ಹೊರಬರುವ ಹಬೆಯನ್ನು ಮೂಗಿನ ಮೂಲಕ ಎಳೆದುಕೊಳ್ಳಿ. ಮುಚ್ಚಿದ್ದ ಹೊಳ್ಳೆ ನಿಧಾನವಾಗಿ ತೆರೆಯಲು ಪ್ರಾರಂಭವಾಗುತ್ತದೆ.

Comments are closed.