ಆರೋಗ್ಯ

ಕುಂದಾಪುರದಲ್ಲಿ ಸಿಯಾಳಕ್ಕೂ ತಟ್ಟಿದ ಬೇಸಿಗೆಯ ಬರ; ಬೊಂಡ, ಕಲ್ಲಂಗಡಿ, ವಿವಿಧ ಹಣ್ಣುಗಳ ಬೆಲೆಯೂ ತುಟ್ಟಿ..!

Pinterest LinkedIn Tumblr

(ವಿಶೇಷ ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕರಾವಳಿಯಾದ್ಯಂತ ಬಿಸಿಲಿನ ತೀವೃತೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಇಷ್ಟು ವರ್ಷಕ್ಕೆ ಹೋಲಿಸಿದರೆ ಈ ಬಾರಿ ತಾಪಮಾನದಲ್ಲಿ ಬಾರೀ ಏರಿಕೆಯಾಗಿದ್ದು ಸೆಕೆ ವಾತಾವರಣವು ಜನರನ್ನು ಹೈರಾಣಾಗಿಸಿದೆ.

ಜನವರಿ ಮಾಸಾಂತ್ಯ, ಫೆಬ್ರವರಿ ಮೊದಲ ವಾರದಿಂದಲೇ ಬಿಸಿಲಿನ ಪ್ರಖರತೆ ಹೆಚ್ಚಿದ್ದು ಎಪ್ರಿಲ್ ತಿಂಗಳಿನಲ್ಲಿ ಬೇಸಿಗೆಯ ಬಿಸಲಿನ ಬೇಗುದಿಗೆ ನಾಗರಿಕರು ಪರಿತಪಿಸುತ್ತಿದ್ದಾರೆ. ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ, ದೇಹವು ನಿರ್ಜಲೀಕರಣಗೊಳ್ಳುತ್ತೆ ಮತ್ತು ಶಕ್ತಿಯ ಮಟ್ಟವು ಕಡಿಮೆಯಾಗುತ್ತದೆ. ಆದ್ದರಿಂದ, ಬೇಸಿಗೆಯಲ್ಲಿ ಸದೃಢವಾಗಿ ಮತ್ತು ಸಕ್ರಿಯವಾಗಿರಲು ಕಲ್ಲಂಗಡಿ, ತಾಳೆ ಹಣ್ಣುಗಳನ್ನು ಜನರು ತಿನ್ನುವುದು ವಾಡಿಕೆ. ಅಲ್ಲದೆ ಎಷ್ಟೇ ತಂಪಾದ ನೀರು ಕುಡಿದರೂ ಬಾಯಾರಿಕೆ ನೀಗದ ಕಾರಣ ಸಿಯಾಳದ ಮೊರೆಹೋಗುತ್ತಾರೆ.

ಸಿಯಾಳ, ಕಲ್ಲಂಗಡಿ ಬೆಲೆ ತುಟ್ಟಿ: ಕುಂದಾಪುರ ನಗರ ಸಹಿತ ತಾಲೂಕಿನಾದ್ಯಂತ ಗ್ರಾಮೀಣ ಭಾಗದಲ್ಲಿಯೂ ಕೂಡ ಎಳನೀರು (ಸಿಯಾಳ) ಬರ ಬಂದಿದೆ. ಯಾವುದೇ ಅಂಗಡಿಯಲ್ಲೂ ಸಿಯಾಳ ದೊರಕುತ್ತಿಲ್ಲ. ಒಂದೊಮ್ಮೆ ಸಿಯಾಳ ಸಿಕ್ಕಿದರೂ ಕೂಡ 45 ರಿಂದ 50 ರೂ. ಬೆಲೆಯಿದ್ದು ನೀರು ಕೂಡ ರುಚಿಯಾಗಿಲ್ಲ ಎನ್ನುತ್ತಾರೆ ಗ್ರಾಹಕರು. ಕಲ್ಲಂಗಡಿ ಹಣ್ಣಿನ ಬೆಲೆಯೂ ಕೂಡ ಹೆಚ್ವಿದ್ದು ಕಿಲೋವೊಂದಕ್ಕೆ 35-40 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಕತ್ತರಿಸಿದ ಕಲ್ಲಂಗಡಿ ಹಣ್ಣಿನ ಸೇಡೊಂದಕ್ಕೆ 20-25 ರೂ. ದರವಿದೆ. ಇನ್ನು ಪೈನಾಪಲ್, ಕರಬೂಜಾ, ನಿಂಬೆ, ಮಾವು, ಚಿಕ್ಕು, ಮೋಸಂಬಿ, ಸೇಬು ಇತರೆ ಹಣ್ಣುಗಳ ಬೆಲೆ ಹಾಗೂ ಹಣ್ಣಿನ ರಸಗಳ ಬೆಲೆಯೂ ಹೆಚ್ಚಿದೆ. ಇನ್ನು ಕೆಂದಾಳೆ ಸಿಯಾಳ ಮಾರುಕಟ್ಟೆಯಲ್ಲಿ ಸಿಗೋದಿಲ್ಲ ಸಿಕ್ಕರೂ 55 ರೂಪಾಯಿಗೂ ಅಧಿಕ. ಇನ್ನು ತಾಳೆ ಹಣ್ಣಿನ 3 ಪೀಸ್‌ಗೆ 30 ರೂವಿದೆ.

ಎಂತಾ ಸೆಕೆ ಮರ್ರೆ..!
ಅಬ್ಬಬ್ಬಾ….ಎಂತಾ ಸೆಕೆ ಮರ್ರೆ.. ಎಂದು ದೇಹ ತಂಪು ಮಾಡಲು ಏನಾದರೂ ಕುಡಿಯಲು ಹೊರಟರೆ ಜೇಬಿಗೆ ಕತ್ತರಿ ಬೀಳುವುದು ಗ್ಯಾರೆಂಟಿ. ಎಳನೀರು, ಕಲ್ಲಂಗಡಿ ಹಣ್ಣಿಗೆ ಅಭಾವ ಇದ್ದರೆ ವಿದೇಶಿ ತಂಪು ಪಾನೀಯಗಳು ದೇಹವನ್ನು ಇನ್ನಷ್ಟು ಉಷ್ಣ (ತಾಪ) ಮತ್ತಷ್ಟು ಹೆಚ್ಚಿಸುತ್ತದೆ. ಮನೆಯಲ್ಲಿಯೇ ತಯಾರಿಸಿ ಕುಡಿಯಬಹುದಾದ ತಂಪಿನ ಬೀಜದ ಜ್ಯೂಸ್, ಎಳ್ಳು, ಹೆಸರು, ರಾಗಿ ಜ್ಯೂಸ್, ತಾಜಾ ಹಣ್ಣಿನ ರಸಗಳು ದೇಹವನ್ನು ತಂಪಾಗಿಸುವುದಲ್ಲದೆ ಆರೋಗ್ಯಕ್ಕೂ ಉತ್ತಮ.

ಘಾಟಿ ಬೊಂಡವೂ ಇಲ್ಲ..ನಾಟಿ ಬೊಂಡವೂ ಸಿಗಲ್ಲ..!
ಕರಾವಳಿ ಭಾಗಕ್ಕೆ ಮೊದಲು ಘಟ್ಟದಿಂದ ಸಿಯಾಳ ತರಿಸಲಾಗುತ್ತಿತ್ತು. ಆದರೆ ಈ ಬಾರಿ ಘಟ್ಟದಿಂದ ಸಿಯಾಳ ಬರುತ್ತಿಲ್ಲ. ಬಿಸಿಲಿನ ಝಳ ಜಾಸ್ತಿಯಾಗಿರುವುದರಿಂದ ಸಿಯಾಳ ಕುಡಿಯುವರ ಸಂಖ್ಯೆಯೂ ಹೆಚ್ಚಿದೆ. ಆದರೆ ಬೇಡಿಕೆ ತಕ್ಕಂತೆ ಮಾರುಕಟ್ಟೆಗೆ ಸಿಯಾಳ ಪೂರೈಕೆಯಾಗುತ್ತಿಲ್ಲ. ಕರಾವಳಿಯಲ್ಲಿ ಊರಿನ ಸಿಯಾಳಕ್ಕೆ ಬಾರೀ ಬೇಡಿಕೆಯಿದ್ದರೂ ಕೂಡ ತೆಂಗು ಬೆಳೆಗಾರರು ತೆಂಗಿನ ಕಾಯಿ ಹಾಗೂ ತೆಂಗಿನ ಉತ್ಪನ್ನಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವ ಕಾರಣ ಮೊದಲಿನಿಂದಲೂ ನಾಟಿ ಸಿಯಾಳ ನಿರೀಕ್ಷಿತ ಮಟ್ಟಿಗೆ ಸಿಗುತ್ತಿಲ್ಲ ಎಂದು ಕುಂದಾಪುರದ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ನಿಧೀಶ್ ಕೆ.ಜೆ. ಅಭಿಪ್ರಾಯಪಟ್ಟಿದ್ದಾರೆ.

ಮಳೆ ಕಮ್ಮಿಯಿರುವ ಕಾರಣ ಸಿಯಾಳದ ಬೆಳೆಯಿಲ್ಲ ಎನ್ನಲಾಗುತ್ತಿದೆ. ಮೊದಲು ಚಿಕ್ಕಮಗಳೂರಿನ ಕಡೂರು ಮೊದಲಾದೆಡೆಯಿಂದ ಘಾಟಿ ಸಿಯಾಳ ಅಂಗಡಿಗಳಿಗೆ ಪೂರೈಕೆಯಾಗುತ್ತಿತ್ತು ಅವರು ನಮಗೆ ನೀಡುವುದೇ 33 ರೂಗೆ. ಅಲ್ಲಿನ ಎಳನೀರು ಅಂತಹ ಗುಣಮಟ್ಟವು ಇರಲ್ಲ. ಸ್ಥಳೀಯ ಸಿಯಾಳದ ಬೆಳೆ ಕಮ್ಮಿಯಾದ್ದರಿಂದ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಸಿಗುತ್ತಿಲ್ಲ. ವಿಪರೀತ ಬಿಸಿಲಿನಿಂದಾಗಿ ಸಿಯಾಳಕ್ಕೆ ಬೇಡಿಕೆಯಿದ್ದರೂ ಅಗತ್ಯಕ್ಕೆ ತಕ್ಕಂತೆ ಸಿಗದ ಕಾರಣ ಗ್ರಾಹಕರಿಗೆ ಒದಗಿಸಲು ಸಾಧ್ಯವಾಗುತ್ತಿಲ್ಲ.
– ಪ್ರಭಾಕರ ಬೆಟ್ಟಿನಮನೆ, ಬೀಜಾಡಿ (ಅಂಗಡಿ ಮಾಲಿಕರು)

 

Comments are closed.