ವಿಶಿಷ್ಟ

ಕೋಪವನ್ನು ನಿಮ್ಮ ಹತೋಟಿಯಲ್ಲಿಟ್ಟುಕೊಳ್ಳಲು ಹೀಗೆ ಮಾಡಿ….!

Pinterest LinkedIn Tumblr

ಕೋಪದ ಮಹಿಮೆ ಬಲ್ಲವರಾರೋ? ಆದ್ರೆ ಈ ಕೋಪ ಅನ್ನೋದು ಯಾಕೆ ಬರುತ್ತೆ ಅಂತ ನಾವ್ಯಾರೂ ಊಹಿಸೋದೇ ಇಲ್ಲ. ಒಂದು ವೇಳೆ ಹಾಗೆ ಊಹಿಸೋದಕ್ಕೆ ಕೆಲ ಕಾಲ ತೆಗೆದುಕೊಂಡರೂ ಆಗ ಎಲ್ಲಿಲ್ಲದ ಕೋಪ ಬರುತ್ತೆ. ಹೀಗೆ ಕೋಪವನ್ನು ನಾನಾ ರೀತಿಯಲ್ಲಿ ವಿಂಗಡಣೆ ಮಾಡೋದೇನೋ ಸರಿ. ಆದ್ರೆ ಕೆಲವೊಂದು ಸಲ ಈ ತರದ ಕೋಪಗಳಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಅನ್ನೋದು ಅಷ್ಟೇ ನಿಜ. ನನಗಂತೂ ಆಗಾಗ ಕೆಟ್ಟ ಕೋಪ ಬರುತ್ತೆ ಸ್ವಾಮೀ… ಈ ರೀತಿ ಕೋಪ ಬಂದಾಗ ನಾನು ಮನುಷ್ಯನಾಗಿರಲ್ಲ ಅಂತ ನಮ್ಮ ಮುಂದೆ ನಿಂತ್ಕೊಂಡು ತನ್ನ ಕೋಪದ ವರ್ಣನೆ ಮಾಡೋರನ್ನ ಸಾಕಷ್ಟು ಜನರನ್ನು ನೋಡಿರ್ತಿವಿ. ಆತ ತಾನೊಬ್ಬ ಮಹಾನ್ ವ್ಯಕ್ತಿ ಅನ್ನೋ ಥರಾ ಫೋ ಸ್ ಕೊಡ್ತಾ ನಿಂತಿದ್ರೆ ನಮಗೆ ಇನ್ನಷ್ಟು ಕೋಪ ಬಂದಿರುತ್ತೆ. ಈ ಕೋಪಕ್ಕೆ ಕಾರಣಾನೂ ಬೇಕಿಲ್ಲ, ಅದಕ್ಕೆ ಅದರದ್ದೇ ಆದ ನಿರ್ದಿಷ್ಟ ಸ್ವರೂಪವೂ ಇಲ್ಲ. ಹಾಗಂತ ಈ ಕೋಪಾನ ಹಾಗೆ ಸುಮ್ಮನೆ ಬಿಡೋಕಾಗುತ್ತಾ? ಹಾಗಾದ್ರೆ ಏನು ಮಾಡೋದು..?

ನಮ್ಮ ಅನೇಕ ಸಮಸ್ಯೆಗಳಿಗೆ ಕೋಪವೂ ಒಂದು ಪ್ರಮುಖ ಕಾರಣ. ಕೋಪಕ್ಕೆ ಬುದ್ಧಿಕೊಟ್ಟು ಬೇಡದ ತೊಂದರೆಗಳನ್ನ ಮೈಮೇಲೆ ಎಳೆದುಕೊಳ್ಳುತ್ತೇವೆ. ಸ್ವಲ್ಪ ಸಂಯಮದಿಂದಿದ್ದರೆ ಅನಾಹುತ ತಪ್ಪಿಸಬಹುದಿತ್ತಲ್ಲಾ ಎಂದು ಅನೇಕ ಬಾರಿ ಯೋಚಿಸಿರುತ್ತೇವೆ. ಈ ಹಿನ್ನೆಲೆಯಲ್ಲಿ ಕೋಪವನ್ನ ನಿಗ್ರಹಿಸಲು ಕೆಲ ಪರಿಣಾಮಕಾರಿ ಮತ್ತು ಸರಳ ಉಪಾಯಗಳು ಇಲ್ಲಿವೆ. ತುಂಬಾ ಕೋಪ ಬಂದು ತಡೆದುಕೊಳ್ಳಲು ಕಷ್ಟವಾಗುತ್ತಿದೆ ಎಂದು ಅನಿಸಿದಾಗ ಮೊದಲು ದೀರ್ಘ ಉಸಿರನ್ನ ಒಳಗೆಳೆದುಕೊಳ್ಳಿ. ಬಳಿಕ 1ರಿಂದ 10ರವರೆಗೆ ಸಂಖ್ಯೆ ಎಣಿಸಿ. ಇದರಿಂದ ನೀವು ಆತುರವಾಗಿ ಕೋಪಕ್ಕೆ ಬುದ್ಧಿ ಕೊಡುವ ಅಪಾಯ ತಪ್ಪುತ್ತದೆ. ನಿಮ್ಮ ಕೋಪಾವೇಶ ಕೂಲಾಗಿ, ಸಮಾಧಾನಕರವಾಗಿ ಯೋಚಿಸಲು ಸಾಧ್ಯವಾಗುತ್ತದೆ.

ಕೋಪ ಬಂದಾಗ ಮೌನವಾಗಿರುವುದನ್ನ ರೂಢಿಸಿಕೊಳ್ಳಿ. ನಿಮ್ಮೊಂದಿಗೆ ಯಾರಾದರೂ ಅನಗತ್ಯವಾಗಿ ಜಗಳ ಮಾಡುತ್ತಿದ್ದರೆ ನೀವು ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದಷ್ಟೂ ಪರಿಸ್ಥಿತಿ ತಿಳಿಯಾಗುತ್ತದೆ. ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಬರದೇ ಇದ್ದರೆ ನಿಮ್ಮೊಂದಿಗೆ ಜಗಳವಾಡುವವರೂ ಶಾಂತರಾಗಿ ಸುಮ್ಮನಾಗುತ್ತಾರೆ. ಹೀಗಾಗಿ, ಹಿರಿಯರು ಮೌನವನ್ನ ಬಂಗಾರಕ್ಕೆ ಹೋಲಿಸುತ್ತಾರೆ. ನಿಮ್ಮೊಂದಿಗೆ ಯಾರಾದರೂ ಜೋರಾಗಿ ಜಗಳ ಮಾಡುತ್ತಿದ್ದರೆ ನೀವು ಕಣ್ಣು ಮತ್ತು ಕಿವಿ ಮುಚ್ಚಿಕೊಳ್ಳುವುದು ಉತ್ತಮ. ಕ್ಷುಲ್ಲಕವೆನಿಸಿದರೂ ಇದು ನಿಜಕ್ಕೂ ಒಳ್ಳೆಯ ಪರಿಣಾಮ ಬೀರುತ್ತದೆ. ನಿಮ್ಮ ಜೊತೆ ಯಾರಾದರೂ ಕಾಲು ಕೆರೆದುಕೊಂಡು ಜಗಳಕ್ಕೆ ಬಂದರೆ ಸಿಟ್ಟಿಗೆದ್ದು ನೀವು ಜಗಳಕ್ಕೆ ಹೋಗಬೇಡಿ. ಬದಲಾಗಿ, ಆ ಸ್ಥಳದಿಂದ ದೂರ ಹೋಗಿಬಿಡಿ. ಇದರಿಂದ ನಿಮ್ಮ ಕೋಪವನ್ನ ಶಮನ ಮಾಡಿಕೊಳ್ಳಬಹುದು.

ಧ್ಯಾನ:

ಕೋಪ ಬಂದಾಗ ನಿಗ್ರಹಿಸುವುದರ ಬದಲು ಕೋಪವೇ ಬರದಂತೆ ನೋಡಿಕೊಳ್ಳುವುದು ಇನ್ನೂ ಒಳ್ಳೆಯದಲ್ಲವೇ..? ಈ ವಿಷಯದಲ್ಲಿ ಧ್ಯಾನ ತುಂಬಾ ಪರಿಣಾಮಕಾರಿ. ನೀವು ಸರಿಯಾದ ವಿಧಾನದಲ್ಲಿ ಧ್ಯಾನವನ್ನ ರೂಢಿಸಿಕೊಂಡರೆ ಎಂಥ ಸ್ಥಿತಿಯಲ್ಲಾದರೂ ನೀವು ಸಮಚಿತ್ತದಿಂದ ಇರಬಹುದಂತೆ.

ನಿಮ್ಮ ಕೋಪಕ್ಕೆ ಕಾರಣರು ನೀವೇ

ಕೋಪ ಎಂಬುದು ನಿಮಗೆ ನೀವೇ ಹೇಳಿಕೊಳ್ಳುವ ನಕಾರಾತ್ಮಕ ವಾಕ್ಯಗಳ ಪ್ರತಿಕ್ರಿಯೆ ಎಂಬುದನ್ನು ಮೊದಲು ಸ್ಪಷ್ಟಮಾಡಿಕೊಳ್ಳಿ. ಹೌದು, ನಿಮ್ಮ ಕ್ರೋಧಕ್ಕೆ ‘ಅವರು’ ಕಾರಣರಲ್ಲ. ಸಿಟ್ಟನ್ನು ಮಾಡಿಸಿಕೊಳ್ಳುವವರು ನೀವೇ. ಹಾಗಂತ ಅನ್ಯರ ಕೆಟ್ಟ ವರ್ತನೆಗಳನ್ನು ನೀವು ಸಹಿಸಿಕೊಳ್ಳಬೇಕು ಎಂದರ್ಥವಲ್ಲ. ಒಲ್ಲದ ಪರಿಸ್ಥಿತಿಯನ್ನು ಬದಲಿಸಲು ಅಥವಾ ಅಪ್ರಸನ್ನ ವ್ಯಕ್ತಿಯನ್ನು ತಿದ್ದಲು ಪ್ರಯತ್ನಿಸಿ. ಆದರೆ ನಿಮ್ಮ ಪ್ರಯತ್ನದಿಂದ ಕೋಪವನ್ನು ದೂರವಿಡಿ.

ಶಾಂತವಾಗಿಯೇ ಉತ್ತರಿಸಿ

ಕೆಲವರು ಬಹಳ ವರ್ಷಗಳ ಪರಿಶ್ರಮದಿಂದ ಚುಚ್ಚಿ ಚುಚ್ಚಿ ಮಾತಾಡುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಅವರಿಗೆ ಅನ್ಯರ ದೋಷಗಳನ್ನು ಎತ್ತಿ ಹಿಡಿದು ಲೋಕಕ್ಕೆಲ್ಲಾ ಪ್ರದರ್ಶಿಸುವ ಆಸೆ. ಇಂಥ ಸೂಕ್ಷ್ಮದ ಅರಿವಿಲ್ಲದ ವ್ಯಕ್ತಿಗಳು ಎದೆಗೆ ಒದ್ದವರ ಹಾಗೆ ನಿಮ್ಮ ಬಗ್ಗೆ ಅಪಮಾನಕರ ಮಾತುಗಳನ್ನು ನಿಮ್ಮ ಎದುರಿಗೇ ಆಡುತ್ತಾರೆ. ಈ ಸಂದರ್ಭದಲ್ಲಿ ನಿಮ್ಮ ಸಿಟ್ಟು ಸ್ಪೋಟಗೊಳ್ಳುವುದು ಬೇಡ. ವ್ಯಂಗ್ಯವಲ್ಲದ ಒಂದು ಜಾಣ ಉತ್ತರದಿಂದ ಅವರ ಬಾಯನ್ನು ಮುಚ್ಚಿಸಿ. ಬೆರೆಯವರು ನಿಮ್ಮ ಬಗ್ಗೆ ಹೇಗೆ ಕೊಂಕಾಗಿ ಮಾತಾಡುವ ಅಧಿಕಾರವಿದೆಯೋ, ಹಾಗೆಯೆ ನಿಮ್ಮ ಯೋಗ್ಯತೆಯನ್ನು ಶಾಂತವಾಗಿ ಉಳಿಸಿಕೊಳ್ಳುವ ಅಧಿಕಾರ ನಿಮಗಿದೆ.

Comments are closed.