ಕರಾವಳಿ

“ಅಮ್ಮನಡೆಗೆ ನಮ್ಮ ನಡೆ” ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಬೃಹತ್ ಪಾದಯಾತ್ರೆ

Pinterest LinkedIn Tumblr

ಮಂಗಳೂರು / ಬಜಪೆ, ಜನವರಿ. 23: ಮರವೂರು ಸಂದೀಪ್ ಶೆಟ್ಟಿ ಸಾರಥ್ಯದಲ್ಲಿ ಮರವೂರಿನಿಂದ ಕಟೀಲು ದೇವಸ್ಥಾನಕ್ಕೆ ಕೈಗೊಂಡ 4ನೇ ವರ್ಷದ ಪಾದಯಾತ್ರೆ ಅಭಿಯಾನ ‘ಅಮ್ಮನೆಡೆಗೆ ನಮ್ಮ ನಡೆ’ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ರವಿವಾರ ಸಂಪನ್ನಗೊಂಡಿತು.

ಮರವೂರು ಸಂದೀಪ್ ಶೆಟ್ಟಿಯವರು ಲೋಕಕಲ್ಯಾಣಾರ್ಥ ಕೈಗೊಂಡಿರುವ ‘ಅಮ್ಮನೆಡೆಗೆ ನಮ್ಮ ನಡೆ ಪಾದಯಾತ್ರೆ ಅಭಿಯಾನ ರವಿವಾರ ಬೆಳಗ್ಗೆ 7.30ಕ್ಕೆ ಮರವೂರಿನ ಗುರುಪುರ ನದಿ ಸೇತುವೆ ಸಮೀಪದಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಆರಂಭಗೊಂಡಿತ್ತು.

ಮರವೂರು ದೇವಸ್ಥಾನದಲ್ಲಿ ಲಘು ಉಪಾಹಾರ ಒದಗಿಸಲಾಯಿತು. ಅನಂತರ ಸಾಲು ಸಾಲಾಗಿ ನಿಂತ ಭಕ್ತರು ದೇವರ ದರ್ಶನ ಪಡೆದು ಬೆಳಗ್ಗೆ 7.30ಕ್ಕೆ ಮರವೂರಿನಿಂದ ಕಟೀಲಿಗೆ ಪಾದಯಾತ್ರೆ ಆರಂಭಿಸಿದರು. ಪಾದಯಾತ್ರೆ ಸುಮಾರು 15 ಕಿ.ಮೀ. ದೂರದ ಕ್ರಮಿಸಿದೆ. ಕಟೀಲು ದುರ್ಗಾಪರಮೇಶ್ವರಿಯ ಚಿತ್ರವನ್ನೊಳಗೊಂಡ ಪುಷ್ಪಾಲಂಕೃತ ದೇವರ ರಥ, ಬ್ರಹ್ಮ, ವಿಷ್ಣು , ಮಹೇಶ್ವರ ಯಕ್ಷಗಾನ ವೇಷಧಿಧಾರಿಧಿಗಳು, ಭಜನ ಮಂಡಳಿ, ಸಂಘ -ಸಂಸ್ಥೆಗಳ ಭಜನ ಸಂಕೀರ್ತನೆಯೊಂದಿಗೆ ಕಟೀಲಿನೆಡೆಗೆ ಹೆಜ್ಜೆ ಹಾಕಿದರು.

ಈ ಸಂದರ್ಭ ಮೂಡಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಮರಕಡ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ, ಕಟೀಲು ದೇಗುಲದ ಆಡಳಿತ ಮೊಕ್ತೇಸರ ಡಾ| ಕೆ. ರವೀಂದ್ರನಾಥ ಪೂಂಜ, ಕಟೀಲು ದೇಗುಲದ ಆರ್ಚಕ ಕೆ. ವಾಸುದೇವ ಆಸ್ರಣ್ಣ, ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಸಂಸದ ನಳಿನ್‌ ಕುಮಾರ್‌, ಪಾದಯಾತ್ರೆ ಸಮಿತಿ ಅಧ್ಯಕ್ಷ ಸಂದೀಪ್‌ ಶೆಟ್ಟಿ ಮರವೂರು ಮೊದಲಾದವರು ಉಪಸ್ಥಿತರಿದ್ದರು.

30 ಸಾವಿರಕ್ಕೂ ಹೆಚ್ಚು ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡು ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆದರು. ಕಟೀಲು ದೇಗುಲದ ಬೀದಿಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕಟೀಲು ದೇಗುಲದ ಆಡಳಿತ ಮೊಕ್ತೇಸರ ಡಾ| ಕೆ. ರವೀಂದ್ರನಾಥ ಪೂಂಜ, ಆರ್ಚಕ ಕೆ. ವಾಸುದೇವ ಆಸ್ರಣ್ಣ, ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಆನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ಸಾಯಿನಾಥ ಶೆಟ್ಟಿ, ಅನಿಲ್‌ದಾಸ್‌ ಮೊದಲಾದವರು ಉಪಸ್ಥಿತರಿದ್ದರು. ಕಟೀಲಿನಲ್ಲಿ ಭಕ್ತರ ಸುವ್ಯವಸ್ಥೆಗೆ ಸ್ವಯಂ ಸೇವಕರು ಹಾಗೂ ಕಟೀಲು ಪದವಿ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯನಿರ್ವಹಿಸಿದರು.

Comments are closed.