ವಿಶಿಷ್ಟ

18ರ ಯುವಕನಿಗೆ 18ಸೆಂ.ಮೀ.ಉದ್ದದ ಬಾಲ ! ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ತೆಗೆದು ಹಾಕಿದ ವೈದ್ಯರು

Pinterest LinkedIn Tumblr

baala

ನಾಗಪುರ: 18 ವರ್ಷದ ಯುವಕನಿಗೆ ಅನೈಸರ್ಗಿಕವಾಗಿ ಬೆಳೆದಿದ್ದ ಸುಮಾರು ಅರ್ಧ ಅಡಿ (18 ಸೆಂ.ಮೀ.) ಉದ್ದದ ಬಾಲವನ್ನು ಮಹಾರಾಷ್ಟ್ರದ ನಾಗಪುರದ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ತೆಗೆದು ಹಾಕಿದ್ದಾರೆ.

ಹುಟ್ಟಿದ ದಿನದಿಂದಲೇ ಬಾಲ ಬೆಳೆಯುತ್ತಿದ್ದರೂ ಸಹ ಯುವಕ ಮತ್ತು ಆತನ ಕುಟುಂಬದವರು ವೈದ್ಯರನ್ನು ಸಂರ್ಪಸಿರಲಿಲ್ಲ. ಸಾಮಾಜಿಕ ಹಿಂಜರಿಕೆ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ಈ ವಿಷಯವನ್ನು ಮುಚ್ಚಿಡಲಾಗಿತ್ತು. ಆದರೆ ಇತ್ತೀಚೆಗೆ ಬಾಲದಲ್ಲಿ ತೀವ್ರ ನೋವು ಕಾಣಿಸಿಕೊಂಡ ಪರಿಣಾಮ ಯುವಕ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ. ಆಸ್ಪತ್ರೆಯ ನರರೋಗ ತಜ್ಞರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಬಾಲವನ್ನು ತೆಗೆದು ಹಾಕಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಮಗುವಿನ ಜನನದ ಸಮಯದಲ್ಲೇ ಈ ರೀತಿಯ ದೋಷಗಳ ಬಗ್ಗೆ ತಿಳಿದುಬರುತ್ತದೆ. ಬೆಳೆಯುತ್ತಿದ್ದಂತೆ ಅದು ಗಮನಕ್ಕೆ ಬರುತ್ತದೆ. ಆದರೆ, ಪ್ರಸ್ತುತ ಘಟನೆಯಲ್ಲಿ ಮಗುವಿನ ಜತೆಗೆ ಪೋಷಕರೂ ಈ ವಿಷಯವನ್ನು ಇಷ್ಟು ವರ್ಷಗಳ ತನಕ ಮುಚ್ಚಿಟ್ಟಿದ್ದರು. ಈ ದೋಷವನ್ನು ಜನನದ ಕೆಲವು ತಿಂಗಳ ಬಳಿಕ ಚಿಕಿತ್ಸೆಯ ಮೂಲಕ ಸರಿಪಡಿಸಬಹುದಿತ್ತು. ಆದರೆ, ಹಾಗೆ ಆಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಯುವಕನ ಈ ಪರಿಸ್ಥಿತಿಯು ಆತನಿಗೆ ಚಿಂತಾಜನಕವಾಗಿ ಪರಿಣಮಿಸಿದ ಬಳಿಕ ಪೋಷಕರು ಕಳೆದ ವಾರ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಇದಾದ ಎರಡು ದಿನಗಳ ಬಳಿಕ ಅದರ ಶಸ್ತ್ರಚಿಕಿತ್ಸೆ ನಡೆಯಿತು ಎಂದು ವೈದ್ಯರು ಹೇಳಿದ್ದಾರೆ.

ಬಾಲದ ಗಾತ್ರದಲ್ಲಿ ಬೆಳವಣಿಗೆಯಾಗಿ ಅದರೊಳಗೆ ಮೂಳೆ ಅಭಿವೃದ್ಧಿಗೊಂಡಾಗ, ಅದರಿಂದ ಹುಡುಗನಿಗೆ ಹಿಂಭಾಗದಿಂದ ಒತ್ತಿದಂತೆ ಅನುಭವವಾಗಲು ಆರಂಭವಾಯಿತು. ಇದರಿಂದ ಆತನಿಗೆ ಶಾರೀರಿಕ ಮತ್ತು ಮಾನಸಿಕವಾಗಿ ನೋವು ಉಂಟಾಗಿತ್ತು. ಈ ಬಾಲದಿಂದಾಗಿ ಯುವಕನಿಗೆ ಸರಿಯಾಗಿ ಮಲಗಲು ಮತ್ತು ಕುಳಿತುಕೊಳ್ಳಲು ಆಗುತ್ತಿರಲಿಲ್ಲ ಎಂದು ಡಾ| ಗಿರಿ ನುಡಿದಿದ್ದಾರೆ.

ಇದು ಬಹಳ ಅಪರೂಪ ಮತ್ತು ಈತನಕದ ಅತೀ ಉದ್ದದ ಮಾನವ ಬಾಲ ಆಗಿದ್ದು, ಮೆಡಿಕಲ್‌ಜರ್ನಲ್‌ನಲ್ಲಿ ಇದಕ್ಕೆ ಸ್ಥಾನ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ರೀತಿಯ ಬಾಲ ವಿಶೇಷವಾಗಿ, ಮೂತ್ರಕೋಶದ ಮೇಲೆ ಬಹಳ ಪರಿಣಾಮವನ್ನು ಬೀರುತ್ತದೆ. ಇದರಿಂದ ಕಾಲುಗಳಲ್ಲಿ ಅಥವಾ ಶರೀರದ ಕೆಳ ಅಂಗಗಳಲ್ಲಿ ನೋವು ಉಂಟಾಗುತ್ತದೆ.

Comments are closed.