ಕರಾವಳಿ

ಬಸ್ಸಿನಲ್ಲಿ ಜೋಡಿ ವಿಷ ಸೇವಿಸಿದ ಪ್ರಕರಣಕ್ಕೆ ಟ್ವಿಸ್ಟ್- ಅವರು ದಂಪತಿಗಳಲ್ಲ..!

Pinterest LinkedIn Tumblr

ಕುಂದಾಪುರ: ಕೊಲ್ಲೂರಿಂದ ಮಂಗಳೂರಿಗೆ ಸಾಗುತ್ತಿದ್ದ ಖಾಸಗಿ ಬಸ್‌ನಲ್ಲಿ ಗುರುವಾರ ಸಂಜೆ ಸುಮಾರಿಗೆ ವಿಷ ಕುಡಿದ ಜೋಡಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ದಂಪತಿಗಳೆಂದು ಎಂದು ಹೇಳಲಾಗುತ್ತಿದ್ದ ಇಬ್ಬರೂ ಗಂಡ-ಹೆಂಡತಿ ಅಲ್ಲ ಬದಲಾಗಿ ಇರ್ವರಿಗೂ ವಿವಾಹವಾಗಿದೆ. ಒಂದೇ ಊರಿನವರಾದ ಇಬ್ಬರು ಪ್ರೇಮಿಗಳು ಎಂದು ಹೇಳಲಾಗುತ್ತಿದೆ. ಬಸ್ಸಿನಲ್ಲಿ ವಿಷ ಸೇವಿಸಿ ಒದ್ದಾಡುತ್ತಿದ್ದು ಕುಂದಾಪುರ ಹಾಗೂ ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡ್ಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳುರು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಮಾರ್ಗದಲ್ಲಿ ಮೃತಪಟ್ಟ ರಾಜ ಕುಮಾರ್‌ಗೆ ಮದುವೆಯಾಗಿ ಮೂರು ಮಕ್ಕಳಿದ್ದರೆ, ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಗೀತಾಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.

ರಾಜ ಕುಮಾರ್ ಹಾಗೂ ಸಂಗೀತಾ ಇಬ್ಬರೂ ಕೂಡ ತಮಿಳುನಾಡಿನ ಕೊಯಮತ್ತೂರಿನಲ್ಲಿ ಒಂದೇ ಊರಿನವರು. ಇಬ್ಬರಿಗೂ ಕೂಡ ವಿವಾಹವಾಗಿ ಮಕ್ಕಳಿದೆ. ರಾಜಕುಮಾರ್ ಆಗ್ಗಾಗೆ ಉಡುಪಿಯ ಆದಿ ಉಡುಪಿಗೆ ವಲಸೆ ಕಾರ್ಮಿಕನಾಗಿ ಬಂದು ಹೋಗುತ್ತಿದ್ದು ಆತನ ಪತ್ನಿ ಮಕ್ಕಳು ತಮಿಳುನಾಡಿನಲ್ಲಿದ್ದಾರೆ, ಸಂಗೀತ ಪತಿ ಕೂಡ ಅದೇ ಊರಿನಲ್ಲಿ ಮಾಡುತ್ತಿದ್ದಾರೆ. ರಾಜಕುಮಾರ್ ಮತ್ತು ಸಂಗೀತ ಇಬ್ಬರು ಪ್ರೇಮಿಗಳಾಗಿದ್ದು ಕೊಲ್ಲೂರಿಗೆ ಬರುವ ಮುನ್ನಾ ದಿನ ಊರು ಬಿಟ್ಟು ಇಲ್ಲಿಗೆ ಬಂದು ಬಸ್ಸಿನಲ್ಲಿ ವಿಷ ಸೇವಿಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಮದ್ಯದ ಜೊತೆ ವಿಷ ಬೆರಸಿ ನೀಡಿದ್ದು ಸಂಗೀತಾಳಿಗೆ ಮತ್ತು ಆಕೆ ಮಗುವಿಗೆ ಬಲವಂತವಾಗಿ ವಿಷಪ್ರಾಶನ ಮಾಡಿರಬಹುದೇ ಎಂಬ ಅನುಮಾನವೂ ಇದೆ.

ಇಡೀ ಪ್ರಕರಣದಲ್ಲಿ ರಾಜಕುಮಾರ್ ದುರಂತ ಅಂತ್ಯಕಂಡಿದ್ದು ತೀವ್ರ ಅಸ್ವಸ್ಥಗೊಂಡ ಸಂಗೀತಾ ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಂಡಿದ್ದು ಮಗು ಉಡುಪಿ ಆರ್.ಎನ್.ಶೆಟ್ಟಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳುತ್ತಿದೆ. ರಾಜ ಕುಮಾರ್ ನಿಧನದಿಂದ ಆತನ ಪತ್ನಿ ಮತ್ತು ಮೂವರು ಮಕ್ಕಳು ಅನಾಥರಾಗಿದ್ದಾರೆ.

ಘಟನೆ ಹಿನ್ನೆಲೆ ಏನು?
ರಾಜ ಕುಮಾರ್ ಹಾಗೂ ಸಂಗೀತಾ ಗುರುವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ಆಗಮಿಸಿದ್ದರು. ಕೊಲ್ಲೂರೆಲ್ಲಾ ಸುತ್ತಾಡಿ, ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದ ನಂತರ ಕೊಲ್ಲೂರು ಮಂಗಳೂರು ಖಾಸಗಿ ಬಸ್ ಏರಿ ಮಂಗಳೂರಿಗೆ ಟಿಕೆಟ್ ಪಡೆದಿದ್ದರು. ಬಸ್ಸಿನ ಹಿಂದಿನ ಸೀಟಲ್ಲಿ ಕೂತಿದ್ದ ಇಬ್ಬರೂ ಕಟ್‌ಬೇಲ್ತೂರು ಬಳಿ ಬರುವಾಗಿ ತೀವ್ರ ಅಸ್ವಸ್ಥಗೊಂಡಿದ್ದು, ನಿರ್ವಾಹಕರ ಗಮನಕ್ಕೆ ಬಂದಿತ್ತು. ನಿರ್ವಾಹಕ ಸತೀಶ್ ಚಾಲಕ ಇಕ್ಬಾಲ್‌ಗೆ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ ನಂತರ ಚಾಲಕ ಬಸ್ ಎಲ್ಲೂ ನಿಲ್ಲಿಸದೆ ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಜಿಲ್ಲಾಸ್ಪತ್ರೆಯಿಂದ ವೆನ್‌ಲಾಕ್ ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭ ರಾಜ ಕುಮಾರ್ ಮೃತಪಟ್ಟಿದ್ದರು. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ

ಕೊಲ್ಲೂರು-ಮಂಗಳೂರು ಬಸ್ಸಿನಲ್ಲಿ ವಿಷ ಸೇವಿಸಿದ ದಂಪತಿ: ಜೀವ ಉಳಿಸಲು ಎಕೆಎಂಎಸ್ ಬಸ್ ಚಾಲಕನ ಹರಸಾಹಸ

ಬಸ್ಸಿನಲ್ಲೇ ದಂಪತಿ ವಿಷ ಸೇವಿಸಿದ ಪ್ರಕರಣ- ಪತಿ ಸಾವು, ಪತ್ನಿ ಗಂಭೀರ

 

Comments are closed.