ಕರಾವಳಿ

ಸುಳ್ಳು ಸುದ್ದಿ ನಂಬಬೇಡಿ-ಗ್ರಾ.ಪಂ ಚುನಾವಣೆ ಅಧಿಸೂಚನೆ ಪ್ರಕಟವಾಗಿಲ್ಲ: ಆಯೋಗ ಸ್ಪಷ್ಟನೆ

Pinterest LinkedIn Tumblr

ಬೆಂಗಳೂರು: 2020ನೇ ಸಾಲಿನಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದೆ ಎಂಬುದು ಸುಳ್ಳು ಸುದ್ದಿ ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಏ 5 ಮತ್ತು 9ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು. ಸಾರ್ವತ್ರಿಕ ಚುನಾವಣೆ ಸಂಬಂಧ ಈವರೆಗೂ ಆಯೋಗ ಯಾವುದೇ ದಿನಾಂಕವನ್ನೂ ನಿಗದಿ ಮಾಡಿಲ್ಲ ಮತ್ತು ಅಧಿಸೂಚನೆ ಹೊರಡಿಸಿಲ್ಲ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಎಲ್ಲವೂ ಸುಳ್ಳು….
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರೌಢ ಶಿಕ್ಷಣದಲ್ಲಿ ಉತ್ತೀರ್ಣರಾಗಿರಬೇಕು…. ಕರ್ನಾಟಕದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಹೊಂದಿರಬೇಕು ಮತ್ತು ಇಂತಿಷ್ಟೇ ಮಕ್ಕಳನ್ನು ಹೊಂದಿರಬೇಕು ಇತ್ಯಾದಿ ಷರತ್ತುಗಳನ್ನು ನಮೂದಿಸಿ ಆಯೋಗ ಅಧಿಸೂಚನೆ ಹೊರಡಿಸಿದೆ ಎಂದು ನಕಲಿ ರಾಜ್ಯಪತ್ರ ಪ್ರಕಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ ಎಂದಿದ್ದಾರೆ.

ನಕಲಿ ಪತ್ರದಲ್ಲೇನಿತ್ತು?
ಇಂದು ಹರಿಬಿಟ್ಟಿರುವ ನಕಲಿ ಅಧಿಸೂಚನೆ ಪ್ರಕಾರ ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,ಚಿಕ್ಕಬಳ್ಳಾಪುರ,ತುಮಕೂರು, ಹಾಸನ, ಮಂಡ್ಯ, ಕೋಲಾರ, ಹಾಸನ, ಮಂಡ್ಯ, ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ ಉತ್ತರ ಕರ್ನಾಟಕ‌ ಮತ್ತು ಕರಾವಳಿ ಭಾಗಗಳಿಗೆ ಚುನಾವಣೆ ನಡೆಯಲಿದೆ.ಇವಿಎಂ ಮತಯಂತ್ರಗಳನ್ನು ಈ ಬಾರಿಯೂ ಬಳಕೆ ಮಾಡಲಾಗುತ್ತಿದ್ದು ಬೆಳಿಗ್ಗೆ 6 ರಿಂದ ಸಂಜೆ‌6ರವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ನಕಲಿ ಅಧಿಸೂಚನೆಯಲ್ಲಿತ್ತು. ಈ ಬಗ್ಗೆ ವ್ಯಾಪಕ ಸುಳ್ಳು ಸುದ್ದಿ ಹಬ್ಬಿತ್ತು.

Comments are closed.