ಕರ್ನಾಟಕ

‘ಪಕ್ಕೆಲುಬು’ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ ಶಿಕ್ಷಕನ ಪತ್ತೆ; ಸೇವೆಯಿಂದ ಅಮಾನತು

Pinterest LinkedIn Tumblr

ಹೂವಿನಹಡಗಲಿ: ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡುವ ಪಕ್ಕೆಲುಬು ಎಂಬ ಪದವನ್ನು ಉಚ್ಚರಿಸಲು ಸಾಧ್ಯವಾಗದೆ ಕಷ್ಟಪಡುವ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ ಶಿಕ್ಷಕನನ್ನು ಶಿಕ್ಷಣ ಇಲಾಖೆ ಕೊನೆಗೂ ಹತ್ತೆ ಹಚ್ಚಿದ್ದು, ಶಿಕ್ಷಕನನ್ನು ಸೇವೆಯಿಂದ ಅಮಾನತು ಮಾಡಿದೆ.

ಹೂವಿನಹಡಗಲಿ ತಾಲೂಕಿನ ಕುರುವತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಟಿ.ಚಂದ್ರಶೇಖರಪ್ಪ ಅವರೇ ಈ ವಿಡಿಯೋ ಮಾಡಿದ್ದ ಶಿಕ್ಷಕ ಎಂದು ಹೇಳಲಾಗುತ್ತಿದೆ.

ಚಂದ್ರಶೇಖರ್ ನನ್ನು ಶುಕ್ರವಾರ ಸೇವಿಯಿಂದ ಅಮಾನತುಗೊಳಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ನಾಗರಾಜು ತಿಳಿಸಿದ್ದಾರೆ.

ಜ.3ರಂದು ಪಾಠ ಬೋಧನೆ ಮಾಡುವಾಗ ಪಕ್ಕೆಲುಬು ಎಂಬ ಪದವನ್ನು ಉಚ್ಚರಿಸಲು ಕಷ್ಟಪಡುತ್ತಿರುವ ವಿಡಿಯೋ ಹಾಸ್ಯಾಸ್ಪದವಾಗಿ ವೈರಲ್ ಆಗಿತ್ತು. ಇದಾದ ಬಳಿಕ ಎಚ್ಚೆತ್ತುಕೊಂಡಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ವಿಡಿಯೋ ಹರಿಯಬಿಟ್ಟಿದ್ದ ಶಿಕ್ಷಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಗುರುವಾರವಷ್ಟೇ ತಿಳಿಸಿದ್ದರು.

ವಿಡಿಯೋ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಕೆ ಸುತ್ತೋಲೆ ಹಾಗೂ ಗ್ರಾಮಸ್ಥರು ನೀಡಿದ್ದ ದೂರಿನ ಮೇರೆಗೆ ಶಾಲೆಗೆ ತೆರಳಿ ವಿಚಾರಣೆ ನಡೆಸಿದ ಬಿಇಒ, ಆರೋಪಕ್ಕೆ ಗುರಿಯಾಗಿರುವ ಶಿಕ್ಷಕ ಚಂದ್ರಶೇಖರ್ ನನ್ನು ಅಮಾನತುಗೊಳಿಸಿದ್ದಾರೆ.

Comments are closed.