ಪ್ರಮುಖ ವರದಿಗಳು

ಜಯಾ ಸಾವಿನ ಕುರಿತು ಅನುಮಾನ; ಶವ ಪರೀಕ್ಷೆಗ ಕುರಿತು ಮದ್ರಾಸ್ ಹೈಕೋರ್ಟ್ ಹೇಳಿದ್ದೇನು…?

Pinterest LinkedIn Tumblr

jaya13

ಚೆನ್ನೈ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಸಾವಿನ ಕುರಿತು ಸ್ವತಃ ಮದ್ರಾಸ್ ಹೈಕೋರ್ಟ್ ಅನುಮಾನ ವ್ಯಕ್ತಪಡಿಸಿದ್ದು, ಜಯಲಲಿತಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯಾಗಬಾರದೇಕೆ ಎಂದು ಪ್ರಶ್ನಿಸಿದೆ.

ಜಯಲಲಿತಾ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿಗಳಾದ ವೈದ್ಯನಾಥನ್ ಹಾಗೂ ಪಾರ್ತಿಬನ್ ಅವರನ್ನೊಳಗೊಂಡ ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠ ಈ ರೀತಿಯ ಸಂಶಯವನ್ನು ವ್ಯಕ್ತಪಡಿಸಿದೆ.

ನ್ಯಾಯಮೂರ್ತಿ ವೈದ್ಯನಾಥನ್, ಜಯಾ ಸಾವಿನ ಬಗ್ಗೆ ತಮಿಳುನಾಡಿನಾದ್ಯಂತ ಅನುಮಾನಗಳು ಎದ್ದಿದ್ದವು. ಮಾಧ್ಯಮಗಳಲ್ಲೂ ಇದೇ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈ ಕುರಿತು ತಮಗೂ ಅನುಮಾನಗಳಿವೆ ಎಂದು ಹೇಳಿದ್ದಾರೆ.

ರಜಾ ಕಾಲದ ನ್ಯಾಯಪೀಠದಲ್ಲಿ ವಿಚಾರಣೆ ನಡೆಸುತ್ತಿರುವ ತಾವು ಪೀಠಕ್ಕೆ ಶಾಶ್ವತ ನ್ಯಾಯಮೂರ್ತಿಗಳಾಗಿದ್ದರೆ ಮತ್ತೊಮ್ಮೆ ಜಯಾ ಅವರ ಪಾರ್ಥೀವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸುವಂತೆ ಆದೇಶ ನೀಡುತ್ತಿದ್ದೆ, ಏಕೆಂದರೆ ಸತ್ಯಾಂಶ ಹೊರ ಬರಬೇಕಾಗಿದೆ ಎಂದು ಹೇಳಿದರು.

ಜಯಲಲಿತಾ ಆಸ್ಪತ್ರೆಗೆ ಸೇರಿದಾಗ ಅವರ ಆರೋಗ್ಯ ಚೆನ್ನಾಗಿದೆ. ಅವರು ಕಾಲ ಕಾಲಕ್ಕೆ ಊಟ, ತಿಂಡಿ ಸೇವಿಸುತ್ತಿದ್ದಾರೆ. ದಿನಪತ್ರಿಕೆಗಳನ್ನು ಓದುತ್ತಾರೆ ಎಂದೆಲ್ಲಾ ವೈದ್ಯರು ಮಾಹಿತಿ ನೀಡುತ್ತಿದ್ದರು. ಈಗಿದ್ದರೂ ಅವರನ್ನು ನೋಡಲಿಕ್ಕೆ ಯಾರನ್ನೂ ಆಸ್ಪತ್ರೆ ಒಳಕ್ಕೆ ಬಿಡುತ್ತಿರಲಿಲ್ಲವೇಕೆ ಎಂದು ನ್ಯಾಯಮೂರ್ತಿ ಪ್ರಶ್ನೆಗಳ ಸುರಿಮಳೆಯನ್ನಗೈದರು.

ಜಯಲಲಿತಾ ಆರೋಗ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಎಲ್ಲಾ ಮಾಹಿತಿ ಇತ್ತು. ಆದರೂ ಸರ್ಕಾರ ಅದನ್ನು ಬಹಿರಂಗಪಡಿಸಿರಲಿಲ್ಲ. ಈಗಲಾದರೂ ಕೇಂದ್ರ ಸರ್ಕಾರ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದ ನ್ಯಾಯಮೂರ್ತಿಗಳು, ಜಯಲಲಿತಾ ಅವರ ಆರೋಗ್ಯ ಕುರಿತ ಸಮಗ್ರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಸೂಚಿಸಿದ್ದಾರೆ.

ಜಯಲಲಿತಾ ಅವರಿಗೆ ಅಪೋಲೊ ಆಸ್ಪತ್ರೆಯಲ್ಲಿ 2 ತಿಂಗಳ ಕಾಲ ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಡಿ. 5 ರಂದು ಅವರು ಮೃತಪಟ್ಟಿದರು. 3 ಬಾರಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಪಾರ್ಥೀವ ಶರೀರವನ್ನು ಚೆನ್ನೈನ ಮರೀನಾ ಬೀಚ್‌ನಲ್ಲಿ ಇರುವ ಜಯಾ ಅವರ ರಾಜಕೀಯ ಗುರು ಎಂ.ಜಿ. ರಾಮಚಂದ್ರನ್ ಅವರ ಸ್ಮಾರಕದ ಬಳಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.

ಜಯಲಲಿತಾ ಸಾವಿಗೆ ಮುನ್ನ ಅವರಿಗೆ ತೀವ್ರ ಹೃದಯಾಘಾತವಾಗಿತ್ತು ಎಂದು ವೈದ್ಯರು ಹೇಳಿದರು. ಇದಕ್ಕೂ ಕೆಲವು ವಾರಗಳ ಮುನ್ನ ಜಯಲಲಿತಾ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ ಮತ್ತು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಡಳಿತ ಪಕ್ಷ ಎಐಎಡಿಎಂಕೆ ಹೇಳಿತ್ತು.

Comments are closed.