ಕರಾವಳಿ

ಸರಗಳ್ಳತನ ಪ್ರಕರಣ : ಮಗನ ವರದಿ ಪ್ರಕಟಿಸಿದ್ದಕ್ಕೆ ಮಾಧ್ಯಮದವರಿಗೆ ಸಾಮಾನ್ಯ ಸಭೆಗೆ ಪ್ರವೇಶ ನಿಷೇಧಿಸಿದ ಪೌರಾಯುಕ್ತೆ

Pinterest LinkedIn Tumblr

vimarsha_alva_arest

ಮಂಗಳೂರು, ಡಿಸೆಂಬರ್.29- ಮೂಡಬಿದ್ರೆ ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ಮಹಿಳೆಯರ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಬಂದರ್ ಠಾಣಾ ಪೊಲೀಸರಿಂದ ಬಂಧಿತನಾಗಿರುವ ಕುಖ್ಯಾತ ಕಳ್ಳ ವಿಮರ್ಶ್ ಆಳ್ವ ಹಾಗೂ ಆತನ ಸಹಚರ ಶಾಹಿಲ್ ಹುಸೇನ್ ಕುರಿತ ಸುದ್ದಿ ಪ್ರಕಟಿಸಿದ್ದಕ್ಕೆ ಇಂದು ನಡೆಯಲಿರುವ ಉಳ್ಳಾಲ ನಗರಸಭೆಯ ಸಾಮಾನ್ಯ ಸಭೆಗೆ ಮಾಧ್ಯಮದವರಿಗೆ ಪ್ರವೇಶ ನಿಷೇಧಿಸಲಾಗಿದೆ.

ಇದಕ್ಕೆ ಕಾರಣ ವಿಮರ್ಶ್ ಆಳ್ವ ನಗರಸಭೆಯ ಆಯುಕ್ತೆ ವಾಣಿ ಆಳ್ವರ ಸುಪುತ್ರನಾಗಿರುವುದು. ಮಗನ ಬಗೆಗಿನ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದನ್ನು ಕಂಡ ವಾಣಿ ಆಳ್ವ ಕೆಂಡಾಮಂಡಲವಾಗಿದ್ದು ಸಾಮಾನ್ಯ ಸಭೆಗೆ ಮಾಧ್ಯಮದವರನ್ನು ಬರಲು ಬಿಡಬೇಡಿ ಎಂದು ನಗರಾಧ್ಯಕ್ಷ ಹುಸೇನ್ ಕುಂಞಮೋನು ಅವರು ಕೆಲ ವರದಿಗಾರರಿಗೆ ಫೋನ್ ಮಾಡಿದ್ದೂ ಸುದ್ದಿಯಾಗಿದೆ.

ಉಳ್ಳಾಲ ಠಾಣಾ ವ್ಯಾಪ್ತಿಯ ಮಡ್ಯಾರ್‌ನಲ್ಲಿ ಪಾದಚಾರಿ ಮಹಿಳೆಯ ಕತ್ತಿನಿಂದ ಚಿನ್ನದ ಸರ ಕಳವಾಗಿತ್ತು. ಇಂಥದ್ದೇ ಪ್ರಕರಣ ಮೂಡಬಿದ್ರೆ ಠಾಣಾ ವ್ಯಾಪ್ತಿಯಲ್ಲೂ ನಡೆದಿದ್ದು ತನಿಖೆ ನಡೆಸುತ್ತಿದ್ದ ಪೊಲೀಸರು ಅಂತಿಮವಾಗಿ ನಗರಸಭೆ ಆಯುಕ್ತೆ ವಾಣಿ ಆಳ್ವರ ಮನೆಯ ಕದ ತಟ್ಟಿದ್ದರು.

ವಿಮರ್ಶ್ ಆಳ್ವ ಮತ್ತಾತನ ಸಹಚರ ಶಾಹಿಲ್‌ನನ್ನು ವಶಕ್ಕೆ ಪಡೆದ ಪೊಲೀಸರು ೨,೨೬,೦೦೦ ರೂ. ಮೌಲ್ಯದ ಚಿನ್ನದ ಸರ, ಎರಡು ಹೊಂಡಾ ಆಕ್ಟಿವಾ ಸ್ಕೂಟರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

ಈ ಬಗ್ಗೆ ವರದಿ ಮಾಡಿದ್ದಕ್ಕೆ ಪತ್ರಿಕೆಗಳ ವರದಿಗಾರರನ್ನು ಸಾಮಾನ್ಯ ಸಭೆಗೆ ಬಾರದಂತೆ ತಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಿಮರ್ಶ್ ಆಳ್ವ ಐಶಾರಾಮಿ ಜೀವನಕ್ಕಾಗಿ ಕಳ್ಳತನಕ್ಕೆ ಇಳಿದಿದ್ದು, ಸಾಮಾನ್ಯವಾಗಿ ನಗರದಿಂದ ಹೊರಭಾಗದಲ್ಲಿ ಸಂಚರಿಸುವ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಕೃತ್ಯವೆಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂದರ್ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವರದಿ ಕೃಪೆ : ಸಂಜೆವಾಣಿ

Comments are closed.