ವಿಶಿಷ್ಟ

ಪ್ರೀತಿಸುವ ಪ್ರತಿಯೊಬ್ಬರನ್ನೂ ಕಾಡದೇ ಇರದು ಈ ‘ವಿಷಯ’….!

Pinterest LinkedIn Tumblr

ಹೊಸದಾಗಿ ಪ್ರೀತಿಯಲ್ಲಿ ಬೀಳುವವರ ಮಧ್ಯ್ಯೆ ಕೆಲವು ಸಂಶಯದ ಸಂಗತಿಗಳು ಬಹುಬೇಗ ಮೊಳಕೆ ಯೊಡೆದುಬಿಡುತ್ತವೆ. ಅದು ಅತಿಯಾದ ಪ್ರೀತಿಯಿಂದಿರಬಹುದು. ನಮ್ಮನ್ನು ಪ್ರೀತಿಸುವವರು ಎಂದಿಗೂ ನಮ್ಮವರಾಗಿಯೇ ಇರಬೇಕೆಂಬ ಬಯಕೆ ಯಾಗಿರಬಹುದು. ನಾವು ಇಷ್ಟಪಟ್ಟವರು ಅಥವಾ ನಮ್ಮನ್ನಿಷ್ಟಪಟ್ಟವರು ಮತ್ತೊಬ್ಬರೊಂದಿಗೆ ಸಲಿಗೆಯಿಂದಿದ್ದರೆ, ಅಲ್ಲಿ ಒಂದು ವಾಸಿಯಾಗದ ಅನುಮಾನವೆಂಬ ಖಾಯಿಲೆಯ ಬೀಜ ಮೊಳಕೆ ಯೊಡೆಯತೊಡಗುತ್ತದೆ. ಅದು ವಿಷವನ್ನು ತುಂಬಿಕೊಂಡ ಮರದಂತೆ ಬೆಳೆದುಬಿಡುತ್ತದೆ. ಆಗತಾನೆ ಚಿಗುರೊಡೆಯುತ್ತಿರುವ ಕನಸುಗಳಿಗೆ ವಿಷವಿಟ್ಟು ಕೊಲ್ಲುತ್ತದೆ.

ಒಂದು ಮಾತಿದೆ ‘ಅನುಮಾನಂ ಪೆದ್ದ ರೋಗಂ’ ಅತಿಯಾದ ಪ್ರೀತಿ ಇರಬೇಕು, ಆದರೆ ಅದು ಅನುಮಾನವಾಗಿ ಬದಲಾಗಬಾರದು. ಅಮರವಾದ ಪ್ರೀತಿಗೆ, ಸುಂದರವಾದ ದಾಂಪತ್ಯ ಜೀವನಕ್ಕೆ ಆರ್ಥಿಕ ಸ್ಥಿತಿಯು ಉತ್ತಮವಾಗಿರಬೇಕು, ಒಬ್ಬರನ್ನೊಬ್ಬರು ತುಂಬಾ ಪ್ರೀತಿಸಬೇಕು ಎಂದು ಯೋಚಿಸುತ್ತೇವೆ. ಆದರೆ ಇವೆಲ್ಲಕ್ಕಿಂತ ಮುಖ್ಯ ನಂಬಿಕೆ. ಯಾವಾಗ ಸಂಶಯ ಎಂಬ ಭೂತ ಮನಸ್ಸಿಗೆ ಹೊಕ್ಕು ಬಿಡುತ್ತದೆಯೋ ಅಲ್ಲಿಗೆ ಐಶ್ವರ್ಯವಿದ್ದರೂ, ನಮ್ಮ ಬಾಳ ಸಂಗಾತಿ ನಮ್ಮನ್ನು ತುಂಬಾ ಪ್ರೀತಿಸುತ್ತಿದ್ದರೂ ಅ ಜೀವನ ನರಕವಾಗಿ ಬಿಡುತ್ತದೆ, ಅಂತಹ ವಾತಾವರಣದಲ್ಲಿ ಇರಲು ಉಸಿರು ಕಟ್ಟುತ್ತದೆ. ಯಾರೂ ‘ನಿನ್ನ ಮೇಲೆ ನನಗೆ ಸಂಶಯವಿದೆ’ ಎಂದು ಬಾಯಿ ಬಿಟ್ಟು ಹೇಳುವುದಿಲ್ಲ. ಆದರೆ ಅವರ ನಡುವಳಿಕೆ ನೋಡಿದರೆ ತಿಳಿಯಬಹುದು. ಅದರಲ್ಲೂ ಈ ಕೆಳಗಿನ ನಡುವಳಿಕೆ ಕಂಡುಬಂದರೆ ಅವರಿಗೆ ನಿಮ್ಮ ಮೇಲೆ ಸಂಶಯವಿದೆ ಎಂದು ಅರ್ಥ.

ನಿಮ್ಮನ್ನು ಟ್ರ್ಯಾಕ್ ಮಾಡುವುದು, ಪದೇ ಪದೇ ಕಾಲï ಮಾಡುವುದು, ನಿಮ್ಮ ಪ್ರತಿಯೊಂದು ಚಲನವಲನದ ಮೇಲೆ ಕಣ್ಣಿಟ್ಟಿರುವುದು ಮಾಡುತ್ತಿರುತ್ತಾರೆ. ಅದು ಅವರು ನಿಮ್ಮ ಮೇಲೆ ಇಟ್ಟ ಅತಿಯಾದ ಪ್ರೀತಿಯೆಂದು ನೀವು ಭಾವಿಸಿದರೆ ಅದು ನಿಮ್ಮ ಭ್ರಮೆ. ಅವರು ನಿಮ್ಮನ್ನು ಸಂಶಯಪಡುತ್ತಿದ್ದಾರೆ, ಆದ್ದರಿಂದ ಆ ರೀತಿ ವರ್ತಿಸುತ್ತಾರೆ. ಪ್ರೀತಿಯಲ್ಲಿ ಕಾಳಜಿ ಇರಬೇಕೆ ಹೊರತು, ಸಂಶಯ ಇರಬಾರದು. ನಿಮ್ಮ ಮನದಲ್ಲಿ ನಿಮ್ಮವರ ಬಗ್ಗೆ ಅನುಮಾನವಿದ್ದರೆ…ಅವರ ಜೊತೆ ಇದರ ಬಗ್ಗೆ ನೇರವಾಗಿ ಮಾತನಾಡಿ. ನಾನು ನಿನ್ನ ಬಿಟ್ಟು ಬೇರೆ ಯಾರನ್ನೂ ಇಷ್ಟಪಡಲ್ಲ, ಸಂಶಯ ಪಡಬೇಕಾದ ಅಗತ್ಯವಿಲ್ಲ. ಸಂಶಯವಿದ್ದರೆ ನಮ್ಮ ಸಂಬಂಧ ಹಾಳಾಗುತ್ತದೆ, ಆದ್ದರಿಂದ ಸಂಶಯ ಬುದ್ಧಿ ಬಿಡಲು ತಿಳಿಹೇಳಿ. ನೀವೂ ಅಷ್ಟೆ ಅವರಿಂದ ಯಾವುದೇ ವಿಷಯವನ್ನು ಬಚ್ಚಿಡಬೇಡಿ. ಸಂಶಯ ಸುಮ್ಮನೆ ಬರುವುದಿಲ್ಲ. ಯಾವುದೋ ಒಂದು ಕಾರಣಕ್ಕೆ ಸಂಶಯ ಬಂದಿರುತ್ತದೆ. ಅವರ ಸಂಶಯವನ್ನು ಹೋಗಲಾಡಿಸಲು ಅವರನ್ನು ತುಂಬಾ ಪ್ರೀತಿಸಿ ಮತ್ತು ಅವರ ಜೊತೆ ಯಾವುದನ್ನು ಮರೆ ಮಾಚಲು ಹೋಗಬೇಡಿ, ಈ ರೀತಿ ಮಾಡಿದರೆ ನಿಮ್ಮ ನಡುವೆ ಪ್ರೀತಿ ಮರುಹುಟ್ಟುವುದು, ಸಂಶಯ ಸಾಯುವುದು. ಆದರೆ ಇಲ್ಲಿ ಇನ್ನೊಂದು ಮಾತನ್ನು ಹೇಳಲೇ ಬೇಕು. ಅನುಮಾನ ಮತ್ತು ಪ್ರೀತಿ ಒಂದೇ ನಾಣ್ಯದ ಎರಡು ಮುಖಗಳು. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಎಲ್ಲ ಪ್ರೀತಿಯಲ್ಲೂ ಅನುಮಾನ ಮಾಮೂಲಿ.. ಅದಕ್ಕೆ ಕಾರಣ ಹೆಚ್ಚು ಹೆಚ್ಚು ಪ್ರೀತಿಸುವುದೇ ಹೊರತು ಬೇರೆನೂ ಅಲ್ಲ.

ನಿಮ್ಮಿಂದ ಏನನ್ನೂ ಆಶಿಸದೇ ನಿಮಗಾಗಿ, ನಿಮ್ಮ ಪ್ರೀತಿಗಾಗಿ ನಿಮ್ಮನ್ನು ಪ್ರೀತಿಸುವವರು ಅನುಮಾನಪಟ್ಟರೆ ಅದು ತಪ್ಪೆಂದು ಭಾವಿಸಬೇಡಿ. ಹಾಗೇ ಅವರಿಂದ ಎಂದೂ ದೂರಾಗಬೇಡಿ. ಏಕೆಂದರೆ ಅವರಿಗಿಂತ ಹೆಚ್ಚಾಗಿ ಪ್ರೀತಿಸುವ ಜೀವ ನಿಮಗೆ ಮತ್ತೊಂದು ಸಿಗದಿರಬಹುದು. ಎಲ್ಲರ ಪ್ರೀತಿಯಲ್ಲೂ ಒಂದು ಅಂಶವನ್ನು ನೆನಪಿಡಲೇ ಬೇಕಾಗುತ್ತದೆ ಅದೇನೆಂದರೆ… ಅನುಮಾನವಿರದೇ..ಅನುರಾಗವಿಲ್ಲ…
(ಈ ಸಂಜೆ )

Comments are closed.