ಕರಾವಳಿ

ಕುಂದಾಪುರದ ಮಿನಿ ವಿಧಾನಸೌಧದ ಸ್ಲಾಬ್ ಮತ್ತೆ ಕುಸಿತ: ಒಬ್ಬರಿಗೆ ಗಾಯ; ಕಂಪ್ಯೂಟರ್‌ಗಳು, ಫೋನ್ ಹಾನಿ(Video)

Pinterest LinkedIn Tumblr

*ಹೆಲ್ಮೆಟ್ ಹಾಕಿಕೊಂಡು ಬರಬೇಕಾ ಮಿನಿವಿಧಾನಸೌಧಕ್ಕೆ?
*ಸಾವಿರಾರು ಜನ ಬರುವ ಕೇಂದ್ರವಾಗಿದೆ ಡೇಂಜರ್ ಸ್ಪಾಟ್!

ಕುಂದಾಪುರ: ಆರಂಭದಿಂದಲೂ ಕಳಪೆ ಕಾಮಗಾರಿ ಎಂಬ ವಿಚಾರದಲ್ಲಿ ಗಮನ ಸೆಳೆದರೂ ಕೂಡ ಉದ್ಘಾಟನೆ ಬಳಿಕವೂ ಹತ್ತಾರು ಸಮಸ್ಯೆಗಳಿಂದ ಸುದ್ದಿಯಾಗುತ್ತಿದ್ದ ಕುಂದಾಪುರ ಮಿನಿವಿಧಾನಸೌಧದ ಮೇಲಂತಸ್ತಿನ ಕಂದಾಯ ವಿಭಾಗದ ಕೊಠಡಿಯ ಸ್ಲ್ಯಾಬ್ ಕುಸಿದು ಕರ್ತವ್ಯ ನಿರತ ವ್ಯಕ್ತಿ ಗಂಭೀರ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನದ ಸುಮಾರಿಗೆ ನಡೆದಿದೆ.

2015 ಫೆ.7 ರಂದು ಅಂದಿನ ಅಂದಿನ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಹಾಗೂ ಅಂದಿನ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಈ ಕಟ್ಟಡವನ್ನು ಉದ್ಘಾಟನೆ ಮಾಡಿದ್ದರು. ಅಂದಾಜು ನಾಲ್ಕೂವರೆ ವರ್ಷದ ಹಿಂದೆ ನಿರ್ಮಾಣವಾಗಿದ್ದ ಮಿನಿ ವಿಧಾನಸೌಧದಲ್ಲಿ ಕಳೆದ ವರ್ಷ ಮೊದಲ ಮಹಡಿ ಪ್ರವೇಶ ದ್ವಾರದ ಬಳಿ ಸ್ಲ್ಯಾಬ್ ನ ಸಿಮೆಂಟ್ ಗಾರೆ ಕುಸಿದ ಘಟನೆ ನಡೆದಿದ್ದು ಈ ಬಾರಿಯೂ ಕೂಡ ಮಳೆಗಾಲದ ಆರಂಭದಲ್ಲೇ ಮಿನಿ ವಿಧಾನಸೌಧ ಸೋರುತ್ತಿತ್ತು. ಈ ಬಗ್ಗೆ ಮಾಧ್ಯಮಗಳು ಸಂಬಂದಪಟ್ಟವರ ಗಮನ ಸೆಳೆದರೂ ಕೂಡ ಯಾವುದೇ ಮುಂಜಾಗ್ರತೆ ವಹಿಸಿರಲಿಲ್ಲ.

ತಪ್ಪಿದ ದೊಡ್ಡ ಅನಾಹುತ…
ಶನಿವಾರ ಮಧ್ಯಾಹ್ನದ ಸುಮಾರಿಗೆ ಮಿನಿವಿಧಾನ ಸೌಧದ ಮೇಲಂತಸ್ತಿನ ತಹಶಿಲ್ದಾರ್ ಗ್ರೇಡ್-1 ಕಚೇರಿಗೆ ಹೊಂದಿಕೊಂಡಂತಿರುವ ಕಂದಾಯ ವಿಭಾಗದ ಕಛೇರಿಯ ಮೇಲ್ಚಾವಣಿಯ ಸ್ಲ್ಯಾಬ್ ಗಾರೆ ಏಕಾಏಕಿ ಕುಸಿದುಬಿದ್ದಿದೆ. ಪರಿಣಾಮ ಅಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣ ಬಿಲ್ಲವ ಎನ್ನುವರಿಗೆ ಏಟಾಗಿದೆ. 12 ಸಿಬ್ಬಂದಿಗಳು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ತಕ್ಷಣ ಓಡಿದ್ದರಿಂದ ಸಂಭವ್ಯ ಅವಘಡ ತಪ್ಪಿದೆ. ಸ್ಥಳಕ್ಕೆ ಕುಂದಾಪುರ ಪೊಲೀಸರು ಭೇಟಿ ನೀಡಿದ್ದರು.

ಹಾನಿ…ಇನ್ನೂ ಸಾಧ್ಯತೆ?
ಸ್ಲ್ಯಾಬ್ ಗಾರೆ ಕುಸಿತದಿಂದ ಕಚೇರಿಯೊಳಗಿನ 3 ಕಂಪ್ಯೂಟರ್, 1ಫ್ಯಾನ್, ಹಲವು ಫೋನ್ ಹಾಗೂ ಕುರ್ಚಿಗಳು, ಕಡತಗಳು ಹಾಗೂ ಇತರೆ ಪರಿಕರಗಳಿಗೂ ಹಾನಿ ಸಂಭವಿಸಿದೆ. ರಾಶಿ ರಾಶಿ ಸ್ಲಾಬ್ ಗಾರೆ ನೆಲ ಹಾಗೂ ಮೇಜಿನ ಮೇಲೆ ಬಿದ್ದು ಕೊಠಡಿ ರಾಡಿಯೆದ್ದಿದೆ. ಇನ್ನು ಅದೇ ಕೊಠಡಿಯ ಗೋಡೆ ಹಾಗೂ ಸ್ಲ್ಯಾಬ್ ಭಾಗ ಇನ್ನಷ್ಟು ಶಿಥೀಲಗೊಂಡಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಯಾವುದೇ ಸಮಯಕ್ಕೂ ಸ್ಲ್ಯಾಬ್ ಕುಸಿತ ಸಂಭವ ದಟ್ಟವಾಗಿದೆ. ಕಚೇರಿಯೊಳಗಿನ ಅಧಿಕಾರಿ, ಸಿಬ್ಬಂದಿಗಳ ಸಹಿತ ಕಚೇರಿಗೆ ಆಗಮಿಸುವ ಸಾವಿರಾರು ನಾಗರಿಕರು ಇನ್ನು ತಲೆಗೆ ಹೆಲ್ಮೆಟ್ ಹಾಕಿದರೆ ಕೊನೆ ಪಕ್ಷ ತಲೆಯಾದ್ರೂ ಉಳಿಯುತ್ತೆ ಅನ್ನೋ ಮಾತು ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹ
ಉದ್ಘಾಟನೆ ಪೂರ್ವದಿಂದಲೂ ಕಳಪೆ ಪ್ರದರ್ಶನ ನೀಡಿದ ಈ ಮಿನಿವಿಧಾನಸೌಧದ ಗುತ್ತಿಗೆ ಪಡೆದ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂಬ ಆಗ್ರಹ ಕೆಲವು ವರ್ಷಗಳಿಂದಲೂ ಕೇಳಿಬಂದಿತ್ತು. ಅಲ್ಲದೇ ಇತ್ತೀಚೆಗೆ ಕುಂದಾಪುರದ ಪುರಸಭಾ ಸಭಾಂಗಣದಲ್ಲಿ ನಡೆದ ಪುರಸಭಾ ವ್ಯಾಪ್ತಿಯ ಸಾರ್ವಜನಿಕರ ಕುಂದು ಕೊರತೆಗಳ ಸಭೆಯಲ್ಲಿಯೂ ಈ ವಿಚಾರ ಪ್ರತಿಧ್ವನಿಸಿತ್ತು. ಹಲವು ದಿನ ಪತ್ರಿಕೆ, ‘ಕನ್ನಡಿಗ ವರ್ಲ್ಡ್’ಸೇರಿದಂತೆ ವಿವಿಧ ಅಂತರ್ಜಾಲ ಪತ್ರಿಕೆ ಹಾಗೂ ಸ್ಥಳೀಯ ದ್ರಶ್ಯ, ಪತ್ರಿಕಾ ಮಾಧ್ಯಮಗಳು ಮಿನಿವಿಧಾನ ಸೌಧದ ಸಮಸ್ಯೆ ಬಗ್ಗೆ ಗಮನಸೆಳೆದರೂ ಸಂಬಂದಪಟ್ಟವರು ಯಾವುದೇ ತುರ್ತು ಕ್ರಮಕೈಗೊಳ್ಳದಿರುವುದೇ ಇಂತಹ ಅನಾಹುತಕ್ಕೆ ಕಾರಣವೆನ್ನುವ ಅಸಮಾಧಾನ ನಾಗರೀಕರದ್ದು.

(ವರದಿ- ಯೋಗೀಶ್ ಕುಂಭಾಸಿ)

ಇದಕ್ಕೆ ಸಂಬಂಧಿಸಿದ ಇತರೆ ವರದಿಗಳು:

ಬಾರದ ಮಳೆಯ ಭಾರಕ್ಕೆ ಸೋರುತಿಹುದು ಕುಂದಾಪುರ ಮಿನಿ ವಿಧಾನಸೌಧ! (Video)

ನಾಲ್ಕೇ ವರ್ಷಕ್ಕೆ ಸೋರುತ್ತಿರುವ ಮಿನಿವಿಧಾನಸೌಧ: ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹ

ಮೂರೇ ವರ್ಷದಲ್ಲಿ ಕುಂದಾಪುರ ಮಿನಿ ವಿಧಾನಸೌಧದ ಸ್ಲ್ಯಾಬ್ ಗಾರೆ ಕುಸಿತ!

ಪಾದಾಚಾರಿಗಳು, ದ್ವಿಚಕ್ರವಾಹನ ಸವಾರರಿಗೆ ಕಂಠಕವಾದ ಕುಂದಾಪುರ ಮಿನಿ ವಿಧಾನಸೌಧದ ಕ್ಯಾಟಲ್ ಗ್ರಿಡ್

ಕುಂದಾಪುರ-ಕೋಡಿ ಸಂಪರ್ಕ ಸೇತುವೆ ಉದ್ಘಾಟನೆ, ಕುಂದಾಪುರ ಮಿನಿ ವಿಧಾನಸೌಧ ಲೋಕಾರ್ಪಣೆ

 

Comments are closed.