ಕರಾವಳಿ

ಮೂರೇ ವರ್ಷದಲ್ಲಿ ಕುಂದಾಪುರ ಮಿನಿ ವಿಧಾನಸೌಧದ ಸ್ಲ್ಯಾಬ್ ಗಾರೆ ಕುಸಿತ!

Pinterest LinkedIn Tumblr

ಕುಂದಾಪುರ: ಇಲ್ಲಿನ ಮಿನಿ ವಿಧಾನ ಸೌಧದ ಮೊದಲ ಮಹಡಿ ಪ್ರವೇಶ ದ್ವಾರದ ಬಳಿ ಸ್ಲ್ಯಾಬ್ ನ ಸಿಮೆಂಟ್ ಗಾರೆ ಕುಸಿದ ಘಟನೆ ನಡೆದಿದೆ.

ಶನಿವಾರ ಮಧ್ಯಾಹ್ನ ಸ್ಲ್ಯಾಬ್ ಗಾರೆ ಕಳಚಿ ಬಿದ್ದಿದೆ. ಊಟದ ಸಮಯದಲ್ಲಿ ಈ ಘಟನೆ ನಡೆದಿದ್ದರಿಂದ ಹೆಚ್ಚೇನು ಅನಾಹುತ ಸಂಭವಿಸಲಿಲ್ಲ. ಸಿಮೆಂಟಿನ ಗಾರೆ ಬಿದ್ದ ಶಬ್ದಕ್ಕೆ ಕಚೇರಿ ಒಳಗೆ ಕೆಲಸ ಮಾಡುತ್ತಿರುವ ಸಿಬ್ಬಂದಿ ಹೊರಗೆ ಧಾವಿಸಿದಾಗ ಸಿಮೆಂಟ್ ಗಾರೆ ಬಿದ್ದಿರುವುದು ಗಮನಕ್ಕೆ ಬಂದಿದೆ.

ಕುಂದಾಪುರ ಮಿನಿ ವಿಧಾನ ಸೌಧ ನಿರ್ಮಾಣದಿಂದ ಹಿಡಿದು ಉದ್ಘಾಟನೆ ತನಕ ಕಳಪೆ ಕಾಮಗಾರಿಯಿಂದ ಸುದ್ದಿಯಾಗಿದ್ದು, ಮಿನಿ ವಿಧಾನ ಸೌಧ ಕಾಮಗಾರಿ ಬಗ್ಗೆ ಮಾಧ್ಯಮಗಳು ವಿಸ್ಮೃತ ಪ್ರಕಟಿಸಿತ್ತು. ಆದರೂ ವಿಧಾನ ಸೌಧ ಕಾಮಗಾರಿ ಗುಣಮಟ್ಟದ ಬಗ್ಗೆ ತನಿಖೆ ನಡೆಸದೆ ಅಂದಿನ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಹಾಗೂ ಅಂದಿನ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿನಯ ಕುಮಾರ್ ಸೊರಕೆ ಮೂಲಕ ಕಟ್ಟಡವನ್ನು ಉದ್ಘಾಟನೆ ಮಾಡಿದ್ದರು.

ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ 20-20 ಸರ್ಕಾರ ಇದ್ದಾಗ ಅಂದಿನ ಸಚಿವ ಡಾ.ವಿ.ಎಸ್. ಆಚಾರ್ಯ ಹಾಗೂ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪ್ರಯತ್ನದ ಫಲವಾಗಿ 5 ಕೋಟಿ ವೆಚ್ಚದಲ್ಲಿ ಮಿನಿ ವಿಧಾನ ಸೌಧಕ್ಕೆ ಮುಹೂರ್ತ ಮುಹೂರ್ತ ಕೂಡಿ ಬಂದಿತ್ತು. ಶಂಕು ಸ್ಥಾಪನೆಯಿಂದ ಹಿಡಿದು ಉದ್ಘಾಟನೆ ತನಕ ಮಿನಿ ವಿಧಾನ ಸೌಧ ಕಳಪೆ ಕಾಮಗಾರಿಯಿಂದ ಸುದ್ದಿಯಾದರೂ ಯಾರೊಬ್ಬರೂ ಕಾಮಗಾರಿ ಗುಣಮಟ್ಟದ ಬಗ್ಗೆ ಸೊಲ್ಲೆತ್ತದಿರುವುದು ವಾಸ್ತವ ಸತ್ಯ.

ಮಿನಿವಿಧಾನ ಸೌಧ ಗೋಡೆಯ ಗಾರೆ ಚಿತ್ರಕಾರನ ಕೈಯಲ್ಲಿ ಅರಳಿ ಚಿತ್ರದಂತೆ ಬಿರುಕು ಬಿಟ್ಟು ಚಿತ್ತಾರ ಮೂಡಿದ್ದು, ಯಾವತ್ತು ಕಳಚಿಕೊಳ್ಳುತ್ತದೋ ಎನ್ನುವ ಭಯದಲ್ಲಿ ಸಿಬ್ಬಂದಿ ಇದ್ದಾರೆ.

ಒಟ್ಟಾರೆ ಸುಸಜ್ಜಿತವಾಗಿರಬೇಕಿದ್ದ ಮಿನಿ ವಿಧಾನ ಸೌಧ ಸೋರುವ ಜತೆ ಸಿಬ್ಬಂದಿಗಳೇ ಅಭದ್ರತೆಯಲ್ಲಿ ಕಚೇರಿಯಲ್ಲಿ ಕೂತು ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂದಪಟ್ಟವರ ಗಮನಕ್ಕೆ ತಂದಿದ್ದು ಸೂಕ್ತ ತಾಂತ್ರಿಕ ಕಾರಣ ತಿಳಿದು ಸಮಸ್ಯೆ ಬಗೆಹರಿಸಲು ಸೂಚಿಸಿದ್ದೇವೆಂದು ಕುಂದಾಪುರ ಉಪವಿಭಾಗದ ಪ್ರಭಾರ ಎಸಿ ಮಂಜುನಾಥ ಹೆಗ್ಗಡೆ ಹೇಳಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.