ಕರಾವಳಿ

ಯಡಿಯೂರಪ್ಪ ಈ ಜನ್ಮದಲ್ಲಿ ಮುಖ್ಯಮಂತ್ರಿಯಾಗಲ್ಲ: ವೀರಪ್ಪ ಮೊಯ್ಲಿ

Pinterest LinkedIn Tumblr

ಕುಂದಾಪುರ: ಬೈಂದೂರು ಕ್ಷೇತ್ರಕ್ಕೆ ಯಡಿಯೂರಪ್ಪನವರ ಕೊಡುಗೆ ಏನೂ ಇಲ್ಲ. ಅವರಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಪುರುಸೋತ್ತಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಆದರೆ ಈ ಜನ್ಮದಲ್ಲಿ ಅವರು ಮುಖ್ಯಮಂತ್ರಿಯಾಗಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಭವಿಷ್ಯ ನುಡಿದಿದ್ದಾರೆ.

ಅವರು ಶಿವಮೊಗ್ಗ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಬಳಿಕ ಬೈಂದೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಯಡಿಯೂರಪ್ಪನವರು ತಾನು ಮುಖ್ಯಮಂತ್ರಿಯಾಗುತ್ತೇನೆಂದು ಹಲವಾರು ದಿನಾಂಕಗಳನ್ನು ನಿಗದಿಪಡಿಸಿ ರಾಜಕೀಯವಲಯದಲ್ಲಿ ವಿಸ್ಮಯ ನಡೆಯುತ್ತೆ ಎಂಬ ಹೇಳಿಕೆ ನೀಡಿದ್ದರು. ಯಡಿಯೂರಪ್ಪನವರ ಆರೋಗ್ಯದಲ್ಲಿ ವಿಸ್ಮಯವಾಯಿತೋ ಗೊತ್ತಿಲ್ಲ. ಆದರೆ ರಾಜಕೀಯವಲಯದಲ್ಲಿ ಯಾವ ವಿಸ್ಮಯವೂ ನಡೆದಿಲ್ಲ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಸುಭದ್ರವಾಗಿದೆ ಎಂದರು.

ಮುಂಬರುವ ಎಲ್ಲಾ ಚುನಾವಣೆಗಳನ್ನು ಜೊತೆಯಾಗಿ ಎದುರಿಸುತ್ತೇವೆ. ಮಧುಬಂಗಾರಪ್ಪನವರ ಮೈಯ್ಯಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ. ನಮ್ಮೆಲ್ಲಾ ಯುವ ಕಾರ್ಯಕರ್ತರು ಮಧುಬಂಗಾರಪ್ಪನವರನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಸ್ವೀಕಾರ ಮಾಡಿದ್ದಾರೆ. ಇದು ಮಧುಬಂಗಾರಪ್ಪ ಗೆಲುವಿನ ಸೂಚನೆ. ಮಧು ಬಂಗಾರಪ್ಪನವರು ನಮ್ಮೊಂದಿಗೆ ಪಾರ್ಲಿಮೆಂಟಿಗೆ ಬರುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಚುನಾವಣೆ ಅನಿವಾರ್ಯವಾಗಿರಲಿಲ್ಲ. ಮುಂಬರುವ ಚುನಾವಣೆಗೂ ಮಧುಬಂಗಾರಪ್ಪನವರೇ ನಮ್ಮ ಅಭ್ಯರ್ಥಿ. ಆದರೆ ಬಿಜೆಪಿಯಲ್ಲಿ ಹೀಗಿಲ್ಲ. ಅಧಿಕಾರದ ಆಸೆಗೆ ಯಾವ ಕ್ಷಣದಲ್ಲಾದರೂ ಬದಲಾಗಬಹುದು. ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರಿಗೆ ತಂದೆ ಹಿನ್ನೆಲೆ ಬಿಟ್ಟರೆ ಬೇರೇನೂ ಇಲ್ಲ. ಆದರೆ ಮಧುಬಂಗಾರಪ್ಪ ಸಾರ್ವಜನಿಕರೊಂದಿಗೆ ಬೆರೆತು ಕೆಲಸ‌ಮಾಡಿದ ಅನುಭವವಿದೆ. ಅವರಲ್ಲಿ ಸಾಮಾಜಿಕ ಕಳಕಳಿ, ತುಡಿತ ಇದೆ‌ ಎಂದರು.

ಬಿಜೆಪಿಯನ್ನು ಗೆಲ್ಲಿಸಲು ಯಾವ ಕಾರಣವೂ ಇಲ್ಲ. ಇಡೀ ಬಳ್ಳಾರಿಯನ್ನು ಶ್ರೀರಾಮುಲು ಮತ್ತವರ ತಂಡ ಲೂಟಿ ಹೊಡೆದಿದೆ. ಚುನಾವಣಾ ಪೂರ್ವದಲ್ಲಿ ಮೋದಿ ಕೊಟ್ಟಿರುವ ಆಶ್ವಾಸನೆಗಳು ಒಂದೂ ಈಡೇರಿಲ್ಲ. ಕಪ್ಪು ಹಣ ತರುವಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಸಾಕಷ್ಟು ಶ್ರಮಿಸಿತ್ತು. ಮೂರು ವರದಿಗಳನ್ನೂ ತರಿಸಿತ್ತು. ಆದರೆ ಬಳಿಕ ಬಂದ ಬಿಜೆಪಿ ಏನನ್ನೂ ಮಾಡಿಲ್ಲ. ಕಪ್ಪು ಹಣ ತರುವಲ್ಲಿ ಮೋದಿ ಸರ್ಕಾರ ಎಡವಿದೆ. ಶ್ರೀಮಂತರ ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ ಕೋಟಿ ರೂ ಸಾಲಾ ಮನ್ನಾ ಮಾಡಿರುವ ಕೇಂದ್ರ ಸರ್ಕಾರ ಬಡವರ, ರೈತರ ಸಾಲಾ ಮನ್ನಾ ಮಾಡಿಲ್ಲ. ಡಿಮೊನಿಟೈಸೇಶನ್ ನಿಂದ ಬಡವರು ಬೀದಿಪಾಲಾದರು. ಅಸಂಘಟಿತ ಕಾರ್ಮಿಕರು ಉದ್ಯೋಗ ಕಳೆದುಕೊಂಡರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಶ್ಚತ್ತಾಪವಿಲ್ಲ. ಕೇಂದ್ರದ ಜನವಿರೋಧಿ ನೀತಿಗಳಿಂದ ಜನ ನಿರಾಶರಾಗಿದ್ದಾರೆ. ಕರ್ನಾಟಕದಲ್ಲಿ ಮೋದಿ ಮತ ಕೇಳುವ ಕಾಲ ಹೋಗಿದೆ. ಮೋದಿ ತಮ್ಮ ವರ್ಚಸ್ಸನ್ನು ಕಳೆದುಕೊಂಡಿದ್ದಾರೆ. ಜನರಿಗೆ ಅವರ ಮೇಲೆ ವಿಶ್ವಾಸವಿಲ್ಲ‌. ವಿಶ್ವಾಸಾರ್ಹ ಸಮ್ಮಿಶ್ರ ಸರ್ಕಾರಕ್ಕೆ ಜನ ಬೆಂಬಲ ನೀಡುತ್ತಾರೆಂಬ ಆತ್ಮವಿಶ್ವಾಸವಿದೆ ಎಂದು ವೀರಪ್ಪ ಮೊಯ್ಲಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಭ್ಯರ್ಥಿ ಮಧುಬಂಗಾರಪ್ಪ, ಸಚಿವ ವೆಂಕಟರಾವ್ ನಾಡಗೌಡ, ವಿಧಾನಪರಿಷತ್ ಸದಸ್ಯ ಭೋಜೆ ಗೌಡ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಗೋಪಾಲ ಭಂಡಾರಿ ಮೊದಲಾದವರು ಇದ್ದರು.

Comments are closed.