ನವದೆಹಲಿ: ದೇಶದ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿರಿಸಿ ಹೋರಾಡುವ ಯೋಧರ ಬದುಕು ಹೇಗಿರುತ್ತದೆ? ಎಂಬುದನ್ನು ತೋರಿಸುವ ವಿಡಿಯೋ ಫೇಸ್‍ಬುಕ್‌ನಲ್ಲಿ ವೈರಲ್ ಆಗಿದೆ.
ಜಮ್ಮು ಕಾಶ್ಮೀರದಲ್ಲಿ ಗಡಿ ರಕ್ಷಣಾ ಪಡೆಯ 29ನೇ ಬೆಟಾಲಿಯನ್‍ನ ಯೋಧ ತೇಜ್ ಬಹದ್ದೂರ್ ಯಾದವ್ ತಮ್ಮ ಫೇಸ್‍ಬುಕ್‍ನಲ್ಲಿ ಯೋಧರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಣ್ತೆರೆಸುವ ನಾಲ್ಕು ವಿಡಿಯೊಗಳನ್ನು ಅಪ್‍ಲೋಡ್ ಮಾಡಿದ್ದಾರೆ.
ಬಿಎಸ್‍ಎಫ್ ಜವಾನ್ ಕಿ ಜಬಾನಿ (ಬಿಎಸ್‍ಎಫ್ ಯೋಧನ ಮಾತು)ಗಳು ಎಂಬ ಶೀರ್ಷಿಕೆ ನೀಡಿ ತೇಜ್ ಬಹದ್ದೂರ್ ಈ ವಿಡಿಯೊಗಳನ್ನು ಅಪ್‍ಲೋಡ್ ಮಾಡಿದ್ದಾರೆ.
ನಿನ್ನೆ ಮಧ್ಯಾಹ್ನ ಅಪ್‍ಲೋಡ್ ಮಾಡಿದ ಮೊದಲ ವಿಡಿಯೊದಲ್ಲಿ ಬಿಎಸ್‍ಎಫ್ ಯೋಧರಿಗೆ ನೀಡಲಾಗುತ್ತಿರುವ ದಾಲ್ (ಬೇಳೆಸಾರು) ಹೇಗಿದೆ ಎಂಬುದನ್ನು ತೋರಿಸಿದ್ದಾರೆ. ಬರೀ ಅರಶಿನ ಮತ್ತು ಉಪ್ಪು ಮಾತ್ರ ಇರುವ ಈ ದಾಲ್ ಮತ್ತು ಈ ರೋಟಿ ತಿಂದು ಒಬ್ಬ ಯೋಧ 10 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಲು ಸಾಧ್ಯವೆ? ಎಂದು ತೇಜ್ ಕೇಳಿದ್ದಾರೆ. ಇಲ್ಲಿನ ಯೋಧರಿಗೆ ಯಾವ ರೀತಿಯ ಆಹಾರ ನೀಡಲಾಗುತ್ತಿದೆ ಎಂದು ತೋರಿಸಲು ಮತ್ತು ನಮ್ಮ ಪರಿಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಸಂದೇಶ ನೀಡುವ ಸಲುವಾಗಿ ನಾನು ಈ ವಿಡಿಯೊ ಅಪ್‍ಲೋಡ್ ಮಾಡಿದ್ದೇನೆ ಅಂತಾರೆ ತೇಜ್ ಬಹದ್ದೂರ್.
ಇನ್ನೊಂದು ವಿಡಿಯೋದಲ್ಲಿ ಕರ್ತವ್ಯ ನಿರತರಾಗಿರುವ ತೇಜ್, ಇಲ್ಲಿನ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡುವ ಸಲುವಾಗಿ ನಾನು ಈ ವಿಡಿಯೊ ಮಾಡಿದ್ದೇನೆ ಅಂತಾರೆ. ನಾವು ಇಲ್ಲಿ ಹೇಗಿರುತ್ತೇವೆ? ಎಂಬುದು ಯಾರಿಗೂ ಗೊತ್ತಿಲ್ಲ. ಮಾಧ್ಯಮದವರು ನಮ್ಮನ್ನು ತೋರಿಸುವುದೂ ಇಲ್ಲ. ಹೀಗಿರುವಾಗ ಇಲ್ಲಿ ಗಾಳಿ, ಚಳಿ, ಮಳೆ ಲೆಕ್ಕಿಸದೆ ನಿಂತುಕೊಂಡೇ ಕರ್ತವ್ಯ ನಿರ್ವಹಿಸುವ ನಾವು ಯಾವ ರೀತಿಯ ಕಷ್ಟಗಳನ್ನು ಅನುಭವಿಸುತ್ತಿದ್ದೇವೆ ಎಂದು ತೋರಿಸಲು ಮುಂದಿನ ವಿಡಿಯೊಗಳನ್ನು ಅಪ್‍ಲೋಡ್ ಮಾಡುತ್ತಿದ್ದೇನೆ ಎಂದು ತೇಜ್ ಹೇಳಿದ್ದಾರೆ.
11 ಗಂಟೆಗಳ ಹಿಂದೆ ಯೋಧರ ಶಿಬಿರದಲ್ಲಿ ನೀಡವಾಗುತ್ತಿರುವ ಆಹಾರದ ಬಗ್ಗೆ ಇರುವ ವಿಡಿಯೊವನ್ನು ಶೇರ್ ಮಾಡಿದ್ದಾರೆ ತೇಜ್.
ಆನಂತರದ ವಿಡಿಯೊದಲ್ಲಿ ಅಲ್ಲಿ ನೀಡುತ್ತಿರುವ ಪರೋಟವನ್ನು ತೋರಿಸಿದ್ದಾರೆ. ಬೆಣ್ಣೆಯಾಗಲೀ, ಜಾಮ್ ಆಗಲಿ ಇಲ್ಲ, ಇದನ್ನು ಹೇಗೆ ತಿನ್ನಲಿ ಎಂದು ತೇಜ್ ಪ್ರಶ್ನಿಸುತ್ತಿದ್ದಾರೆ. ಹಾಗಾಗಿ ಈ ವಿಡಿಯೊವನ್ನು ಎಲ್ಲರೂ ಶೇರ್ ಮಾಡಿ, ಸರ್ಕಾರಕ್ಕೆ ಈ ಸಂದೇಶ ತಲುಪಿಸಿ ಎಂದು ಹೇಳಿದ್ದಾರೆ.
ಸರ್ಕಾರ ನಮಗೆ ಎಲ್ಲ ರೀತಿಯ ಸೌಕರ್ಯಗಳನ್ನು ನೀಡುತ್ತಿದೆ. ನಾನು ಯಾರನ್ನೂ ದೂರುತ್ತಿಲ್ಲ. ಆದರೆ ನಮ್ಮ ಮೇಲಾಧಿಕಾರಿಗಳು ಮಾಡುವ ಭ್ರಷ್ಟಾಚಾರದಿಂದಾಗಿ ನಮಗೆ ಸರಿಯಾದ ಸೌಕರ್ಯಗಳು ಲಭಿಸುತ್ತಿಲ್ಲ. ಈ ವಿಡಿಯೋ ಮೂಲಕ ನಾವು ಅನುಭವಿಸುತ್ತಿರುವ ಕಷ್ಟಗಳನ್ನು ತೋರಿಸಿದ್ದೇನೆ. ಇದನ್ನು ಸರ್ಕಾರಕ್ಕೆ ತಲುಪಿಸುವ ಕಾರ್ಯ ನಿಮ್ಮದು ಎಂದು ತೇಜ್ ಬಹದ್ದೂರ್ ವಿನಂತಿಸಿದ್ದಾರೆ.
Comments are closed.