ಕರ್ನಾಟಕ

ಫೇಸ್ ಬುಕ್ ವಿವಾದ: ತಾಯಿ, ಮಗನ ಮೇಲೆ ಶಾಸಕ ಹಲ್ಲೆ

Pinterest LinkedIn Tumblr


ಬೆಳಗಾವಿ, ಜ.೯- ಮಗಳ ವಿರುದ್ಧ ಫೇಸ್‌ಬುಕ್‌ನಲ್ಲಿ ಅಸಭ್ಯವಾಗಿ ಸಂದೇಶ ರವಾನಿಸಿದ ಆರೋಪದ ಹಿನ್ನೆಯಲ್ಲಿ ಬೆಳಗಾವಿ ಜಿಲ್ಲೆ ಕಾಗವಾಡ ಕ್ಷೇತ್ರದ ಬಿಜೆಪಿ ಶಾಸಕ ರಾಜು ಕಾಗೆ ಸಂಬಂಧಿಕರು ಯುವಕ ಹಾಗೂ ಆತನ ತಾಯಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಥಣಿ ತಾಲೂಕಿನ ಉಗಾರ ಖುರ್ದ ನಿವಾಸಿ ವಿವೇಕ್ ಶೆಟ್ಟಿ ಮತ್ತು ಈತನ ತಾಯಿ ಉಜ್ವಲಾ ಶೆಟ್ಟಿ ಹಲ್ಲೆಗೊಳಗಾದವರಾಗಿದ್ದಾರೆ. ಕಳೆದ ಜ.೧ರಂದು ಬೆಳಗ್ಗೆ ೮ ಗಂಟೆಗೆ ಶಾಸಕ ರಾಜು ಕಾಗೆ ಸಹೋದರ ಸಿದ್ದೇಗೌಡ ಹಾಗೂ ೧೧ ಮಂದಿ ಕುಟುಂಬಸ್ಥರು ಯುವಕ ವಿವೇಕ್ ಶೆಟ್ಟಿ ಮನೆಗೆ ತೆರಳಿ ದೊಣ್ಣೆ ಮತ್ತು ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಘಟನೆಯಲ್ಲಿ ವಿವೇಕ ಶೆಟ್ಟಿ ಕಾಲು ಮುರಿದಿದ್ದು, ಉಜ್ವಲಾ ಅವರಿಗೂ ಗಂಭೀರ ಗಾಯಗಳಾಗಿವೆ. ಇವರಿಬ್ಬರೂ ಮೀರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಸಕ ರಾಜು ಕಾಗೆ ಅವರ ಪುತ್ರಿಗೆ ವಿವೇಕ್ ಶೆಟ್ಟಿ ಫೇಸ್‌ಬುಕ್ ಮೂಲಕ ಅಸಭ್ಯ ಸಂದೇಶ ರವಾನಿಸಿದ್ದೇ ಹಲ್ಲೆಗೆ ಕಾರಣ ಎನ್ನಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ರಾಜು ಕಾಗೆ, ವಿವೇಕ್ ಶೆಟ್ಟಿ ನನಗೆ ಗೊತ್ತು. ಆದರೆ ನಮ್ಮ ಕುಟುಂಬಸ್ಥರಾರೂ ಹಲ್ಲೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನನಗೆ ಘಟನೆ ಕುರಿತು ಯಾವುದೇ ಮಾಹಿತಿ ಇಲ್ಲ. ಇನ್ನು ನನ್ನ ಮಗಳ ಫೇಸ್‌ಬುಕ್ ಕುರಿತು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಜ.೧ರಂದೇ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದ್ದು, ಪೊಲೀಸರು ಆಸ್ಪತ್ರೆಗೆ ತೆರಳಿ ಘಟನೆಯ ಕುರಿತು ವಿವರ ಸಂಗ್ರಹಿಸಿದ್ದಾರೆ.

Comments are closed.