ಪ್ರಮುಖ ವರದಿಗಳು

ಬಯಲಾಯಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಚಿತ್ರ ಪ್ರಾಣಿಯೊಂದರ ಸುದ್ದಿ ! ಈ ಸುದ್ದಿಯ ನೈಜತೆ ನೋಡಿ ….

Pinterest LinkedIn Tumblr

https://youtu.be/APKaOo2pvxQ

ನವದೆಹಲಿ: ಕರ್ನಾಟಕ ಮತ್ತು ಕೇರಳ ಗಡಿಯಲ್ಲಿ ಏಲಿಯನ್ ಪತ್ತೆಯಾಗಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣ ಹಾಗೂ ವ್ಯಾಟ್ಸಪ್ ನಲ್ಲಿ ವೈರಲ್ ಆಗಿದೆಯಾದರೂ ಆ ಸುದ್ದಿಯ ಹಿಂದಿನ ಸತ್ಯಾಂಶ ಮಾತ್ರ ಮನ ಕಲಕುವಂತಿದೆ.

ಹೌದು..ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಏಲಿಯನ್ ಪತ್ತೆ ಕುರಿತಂತೆ ಸುದ್ದಿಯೊಂದು ಹರಿದಾಡುತ್ತಿದ್ದು, ಈ ಸುದ್ದಿ ವೈರಲ್ ಆಗಿದೆ. ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲಿ ಹರಿದಾಡುತ್ತಿರುವ ಸುದ್ದಿಯಂತೆ “ಕರ್ನಾಟಕ ಮತ್ತು ಕೇರಳ ರಾಜ್ಯದ ಗಡಿಯಲ್ಲಿ ಮಾನವ ಮತ್ತು ಕರಡಿಯನ್ನು ಹೋಲುವ ಜಂತುವೊಂದು ಪತ್ತೆಯಾಗಿದ್ದು, ಇದು ಅಲ್ಲಿ ಓಡಾಡುವ ಮನುಷ್ಯರು ಸೇರಿದಂತೆ ಕೈಗೆ ಸಿಕ್ಕ ಎಲ್ಲ ಪ್ರಾಣಿಗಳನ್ನು ತಿಂದು ಹಾಕುತ್ತಿದೆ. ಇಂತಹ ನಾಲ್ಕು ಜೀವಿಗಳು ಈ ಮಾರ್ಗದಲ್ಲಿ ಇದ್ದು, ಪ್ರಸ್ತುತ ಒಂದು ಜಂತುವನ್ನು ಮಾತ್ರ ಸೆರೆ ಹಿಡಿಯಲಾಗಿದೆ. ಇನ್ನೂ ಮೂರು ಅಲ್ಲಿಯೇ ಅವಿತಿ. ಹೀಗಾಗಿ ಈ ಮಾರ್ಗವಾಗಿ ಸಂಚರಿಸುವವರು” ಎಚ್ಚರ ಎಂಬ ಸುದ್ದಿ ಹರಿದಾಡುತ್ತಿತ್ತು.

ಆದರೆ ಈ ಸುದ್ದಿ ಜಾಲವನ್ನು ಹಿಡಿದು ಹೊರಟಾಗ ಪ್ರಾಣಿಯೊಂದರ ಮನಕಲಕುವ ಕತೆ ಹಾಗೂ ಮಾನವನ ಅಮಾನವೀಯ ಮನೋಭಾವದ ಅನಾವರಣವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋ ಮತ್ತು ವಿಡಿಯೋದಲ್ಲಿರುವ ಪ್ರಾಣಿ ಯಾವುದೋ ಅನ್ಯಗ್ರಹ ಜೀವಿಯಲ್ಲ ಮತ್ತು ಅದು ಯಾವುದೇ ರೀತಿಯ ಪ್ರಾಣಿಗಳನ್ನು ಮತ್ತು ಮನುಷ್ಯರನ್ನು ತಿಂದು ಹಾಕಿಲ್ಲ. ಬದಲಿಗೆ ಆಹಾರವನ್ನರಿಸಿ ಬಂದು ಮಾನವನ ಕೈಗೆ ಸಿಕ್ಕಿ ಆತನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಕರಡಿಯ ಕತೆ. ಕಳೆದ ವರ್ಷ ಜನವರಿಯಲ್ಲಿ ಈ ವಿಡಿಯೊ ತೆಗೆಯಲಾಗಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.

ಮಲೇಷ್ಯಾದ ಬೊರ್ನಿಯೊ ಪ್ರಾಂತ್ಯದಲ್ಲಿ ಆಹಾರವನ್ನರಿಸಿ ಬಂದಿದ್ದ ಕರಡಿಯನ್ನು ಕಂಡ ಗ್ರಾಮಸ್ಥರು ಅದು ಯಾವುದೋ ಅನ್ಯಗ್ರಹ ಜೀವಿ ಇರಬೇಕು ಎಂದು ಭಾವಿಸಿದ್ದಾರೆ. ಅಲ್ಲದೆ ಈ ಜೀವಿಯಿಂದ ತಮಗೆ ತೊಂದರೆಯಾಗಬಹುದು ಎಂದು ಆತಂಕಗೊಂಡು ಆ ಕರಡಿಯ ಮೇಲೆ ಮನಸೋ ಇಚ್ಛೆ ದಾಳಿ ನಡೆಸಿದ್ದಾರೆ. ಮನುಷ್ಯನ ಕ್ರೌರ್ಯಕ್ಕೆ ತುತ್ತಾದ ಕರಡಿ ಅಲ್ಲೇ ಪ್ರಜ್ಞಾಹೀನವಾಗಿದ್ದು, ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಆ ಕರಡಿಯನ್ನು ಬಂಧಿಸಿ ಪರೀಕ್ಷಿಸಿದಾಗ ಅದು ಕರಡಿ ಎಂದು ತಿಳಿದುಬಂದಿದೆ.

ಚರ್ಮದ ಅನೀಮಿಯ ಕಾಯಿಲೆಗೆ ತುತ್ತಾಗಿದ್ದ ಕರಡಿಯ ಕೂದಲು ಉದುರಿ ಹೋಗಿದ್ದರಿಂದ ಅದು ಬೋಳು ಬೋಳಾಗಿದೆ. ಇದರ ಅರಿವಿಲ್ಲದ ಜನ ಕರಡಿಯನ್ನು ಅನ್ಯಗ್ರಹ ಜೀವಿ ಎಂದು ತಿಳಿದು ಅದರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಇದೀಗ ಹಲ್ಲೆಗೊಳಗಾದ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದು ಚಿಕಿತ್ಸೆ ನೀಡಿ ಕಾಡಿನಲ್ಲಿ ಬಿಟ್ಟಿದ್ದಾರೆ.

Comments are closed.