ಕೇಪ್‍ಟೌನ್: ಕಾರಿನ ಬ್ಯಾನೆಟ್‍ನಲ್ಲಿ, ಬೈಕಿನ ಮುಂಬದಿ ಹಾಗೂ ಶೂಗಳಲ್ಲಿ ಹಾವು ಕಾಣಿಸಿಕೊಂಡು ನಡುಕ ಹುಟ್ಟಿಸಿದ ಪ್ರಕರಣಗಳ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದೀವಿ. ಅದರ ಬಗ್ಗೆ ಓದಿದಾಗ ನಮಗೇನಾದ್ರೂ ಹಾಗಾಗಿದ್ರೆ ಏನಪ್ಪಾ ಗತಿ ಅಂತಾನೂ ನಿಮಗೆ ಅನ್ನಿಸಿರುತ್ತೆ. ಹಾಗೇ ಇಲ್ಲೊಂದು ಮನೆಯೊಂದರ ಟಾಯ್ಲೆಟ್‍ನ ಕಮೋಡ್ ಒಳಗೆ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡು ಮನೆಯವರಿಗೆ ನಡುಕ ಹುಟ್ಟಿಸಿದೆ.
ದಕ್ಷಿಣ ಆಫ್ರಿಕಾದ ಪ್ರೆಟೊರಿಯಾದಲ್ಲಿ ಬ್ಯಾರಿ ಗ್ರೀನ್‍ಶೀಲ್ಡ್ಸ್ ಎಂಬವರ ಅಪಾರ್ಟ್‍ಮೆಂಟ್‍ನಲ್ಲಿ ಈ ಘಟನೆ ನಡೆದಿದ್ದು, ಉರಗ ತಜ್ಞರ ಸಹಾಯದಿಂದ ವಿಷಕಾರಿ ಹಾವನ್ನು ಟಾಯ್ಲೆಟ್‍ನಿಂದ ಹೊರತೆಗೆಸುತ್ತಿರೋದನ್ನ ವಿಡಿಯೋ ಮಾಡಿದ್ದಾರೆ.
ಒಂದು ಕಂಬಿ ಹಿಡಿದು ಉರಗ ತಜ್ಞರು ಟಾಯ್ಲೆಟ್‍ನಿಂದ 8 ಅಡಿ ಉದ್ದದ ಸ್ನೌಟೆಡ್ ಕೋಬ್ರಾ ಜಾತಿಗೆ ಸೇರಿದ ಅತ್ಯಂತ ವಿಷಕಾರಿಯಾದ ಹಾವನ್ನು ಹೊರಗೆ ತೆಗೆಯಲು ಪ್ರಯತ್ನಿಸಿದ್ದಾರೆ. ಆದ್ರೆ ಆ ಹಾವು ಸಂಪೂರ್ಣವಾಗಿ ಹೊರಬರದೆ ಮತ್ತೆ ಪೈಪಿನೊಳಗೆ ಹೋಗಿ ಸೇರಿಕೊಂಡಿದೆ.
ಈ ಘಟನೆ ನಡೆದು ಒಂದು ವಾರವಾಗಿದ್ದು, ಆ ಹಾವು ಮತ್ತೆ ಬರಬಹುದು ಎಂಬ ಕಾರಣಕ್ಕೆ ಮನೆಯವರು ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ. ಕಟ್ಟಡದ ಯಾವುದೋ ಪೈಪಿನೊಳಗೆ ಹಾವು ಸೇರಿಕೊಂಡಿರಬಹುದು ಎಂದು ಅದನ್ನು ಹುಡುಕಲು ಪೈಪಿನೊಳಗೆ ಕ್ಯಾಮೆರಾ ಕೂಡ ಇಟ್ಟಿದ್ದಾರಂತೆ. ಆ ಹಾವು ಮತ್ತೆ ವಾಪಸ್ ಬಂದ್ರೆ ಅಪಾರ್ಟ್‍ಮೆಂಟ್ ನಿವಾಸಿಗಳು ಅದನ್ನು ಕೊಂದುಬಿಡುತ್ತಾರೆ. ಹಾಗೆ ಆಗುವುದು ಬೇಡ. ಅದು ಪೈಪ್ ಮೂಲಕ ಇಲ್ಲಿಂದ ಹೊರಹೋಗಿದ್ದರೆ ಸಾಕು ಅಂತ ಮನೆಯ ನಿವಾಸಿ ಬ್ಯಾರಿ ಹೇಳಿದ್ದಾರೆ.