ಕುಂದಾಪುರ: ತಾಲೂಕಿನ ಮುಳ್ಳಿಕಟ್ಟೆ ಸಮೀಪದ ಅರಾಟೆ ಸೇತುವೆ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.
ಕುಂದಾಪುರ ನಗರದ ಭಂಡಾರ್ಕಾರ್ಸ್ ರಸ್ತೆ ನಿವಾಸಿ ಅಜಿತ್ ಪೌಲ್ ಲೂಯಿಸ್ (55) ಮೃತರು.


ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅಜಿತ್ ಪೌಲ್ ಅವರನ್ನು ಎಂ.ಎಚ್.ಐ ತುರ್ತು ಆಪತ್ಪಾಂಧವ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಹಾಗೂ ಅಬ್ರಾರ್ ಗಂಗೊಳ್ಳಿಯವರು ಕುಂದಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದು ಅಜಿತ್ ಮೃತಪಟ್ಟಿದ್ದಾಗಿ ವೈದ್ಯರು ದೃಢಪಡಿಸಿದ್ದಾರೆ. ಇಬ್ರಾಹಿಂ ತಂಡಕ್ಕೆ ಗಾಯಾಳು ಸಾಗಾಟದ ವೇಳೆ ಅಪರಿಚಿತ ದಾರಿಹೋಕ ಮಹಿಳೆ ಕೂಡ ಸಹಕರಿಸಿ ಮಾನವೀಯತೆ ಮೆರೆದರು ಎಂದು ತಿಳಿದುಬಂದಿದೆ. ಕಾರು ಚಾಲಕನ ವೇಗದ ಚಾಲನೆ, ನಿರ್ಲಕ್ಷ್ಯವೂ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು ಕಾರು ವೇಗವಾಗಿದ್ದ ಕಾರಣ ಕೆಲ ದೂರ ಸ್ಕೂಟಿ ಸಮೇತ ಸವಾರನನ್ನು ಎಳೆದೊಯ್ದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಾಯಿ ನೋಡಲು ಬಂದಿದ್ದ ಮಗ: ಮೃತ ಅಜಿತ್ ಪೌಲ್ ದೆಹಲಿಯಲ್ಲಿ ಕಂಪೆನಿಯೊಂದರಲ್ಲಿ ಜನರಲ್ ಮ್ಯಾನೇಜರ್ ಆಗಿದ್ದು ವರ್ಷದಲ್ಲಿ ನಾಲ್ಕೈದು ಬಾರಿ ಊರಿಗೆ ಬರುತ್ತಿದ್ದರು. ಈ ಬಾರಿ ತಾಯಿ ಅನಾರೋಗ್ಯದ ಹಿನ್ನೆಲೆ ಕಳೆದ 8-10 ದಿನಗಳ ಹಿಂದಷ್ಟೆ ಊರಿಗೆ ಆಗಮಿಸಿದ್ದರು. ಮುಳ್ಳಿಕಟ್ಟೆ ಸಮೀಪದ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದ ಪುತ್ರಿಯ ಶೈಕ್ಷಣಿಕ ಪ್ರಗತಿ ತಿಳಿಯಲು ಸೋಮವಾರ ಮಧ್ಯಾಹ್ನದ ಸುಮಾರಿಗೆ ಶಾಲೆಗೆ ಭೇಟಿಯಾಗಲೆಂದು ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಅನೂಪ್ ನಾಯಕ್, ಸುಧಾ ಪ್ರಭು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಮೆಗತಿ ಕಾಮಗಾರಿಯಿಂದ ಅವಘಡಗಳು!: ವರ್ಷಗಳಿಂದ ಇಲ್ಲಿನ ಅರಾಟೆ ಸೇತುವೆ ದುರಸ್ಥಿ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಹೀಗಾಗಿ ಒಂದು ಕಡೆಯ ಸೇತುವೆ ಬಂದ್ ಮಾಡಿ ಒಂದೇ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ನಿತ್ಯವೂ ಸಣ್ಣಪುಟ್ಟ ಅವಘಡಗಳು ನಡೆಯುತ್ತಿದೆ. ಇಲಾಖೆಯು ರಿಪ್ಲೆಕ್ಟರ್ ಕೋನ್ ಅಳವಡಿಕೆಯಂತಹ ಜಾಗೃತಿ ಕೆಲಸ ಮಾಡಿದರೂ ರಾತ್ರಿ ಸಮಯದಲ್ಲಿ ಘನ ವಾಹನಗಳ ಓಡಾಟದಿಂದ ರಿಫ್ಲೆಕ್ಟರ್ಗಳು ಸಂಪೂರ್ಣ ನಾಶವಾಗಿದೆ. ವಾಹನ ಸವಾರರು ಪಥ ಶಿಸ್ತು ಪಾಲನೆ ಮಾಡದಿರುವುದು, ಅಜಾಗರುಕವಾಗಿ, ವೇಗವಾದ ಚಾಲನೆ ಕೂಡ ಅಪಘಾತ ಹೆಚ್ಚಳಕ್ಕೆ ಕಾರಣವಾಗಿದ್ದು ಸಾವು-ನೋವುಗಳು ಹೆಚ್ಚಿದೆ. ಅರಾಟೆ ಸೇತುವೆ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಿ ರಾಷ್ಟ್ರೀಯ ಹೆದ್ದಾರಿಯ ಎರಡೂ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬ ಆಗ್ರಹ ಕೇಳಿಬಂದಿದೆ.
Comments are closed.