ರಾಯಚೂರು: ಎಡೆದೊರೆ ನಾಡು ಎಂದೇ ಹೆಸರಾಗಿದ್ದ ರಾಯಚೂರಿನ ಕೃಷಿ ವಿವಿ ಆವರಣದಲ್ಲಿ 3 ದಿನಗಳ ಕಾಲ ನಡೆಯಲಿರುವ ಕರುನಾಡಿನ ಅಕ್ಷರ(82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ) ಜಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ನಮ್ಮದು ಕನ್ನಡ ಪರ ಸರ್ಕಾರ. ಹಾಗಾಗಿ ಕನ್ನಡ ರಾಜ್ಯೋತ್ಸವ ಆಚರಣೆಗೆ ರಾಜ್ಯ ಸರ್ಕಾರದಿಂದಲೇ ಅನುದಾನ ನೀಡಲು ನಿರ್ಧರಿಸಲಾಗಿದೆ. ಅಲ್ಲದೇ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಆಚರಿಸಲು ನಿರ್ಧರಿಸಿದ್ದು, ಮುಂದಿನ ಬಜೆಟ್ ನಲ್ಲಿಯೇ ಇದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು.
2017, 19ನೇ ಸಾಲಿನಿಂದ ರಾಜ್ಯ ಸರ್ಕಾರದ ವತಿಯಿಂದಲೇ. ಕನ್ನಡ ಅಭಿವೃದ್ಧಿಗೆ ಕಸಾಪ ನೀಡುವ ಸಲಹೆ ಸ್ವೀಕರಿಸುತ್ತೇಎ. ಎಲ್ಲಾ ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಅವಕಾಶ ಕೊಡಬೇಕು ಎಂಬುದಕ್ಕೂ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಮಾತೃಭಾಷೆ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಎಲ್ಲಾ ರಾಜ್ಯಗಳಲ್ಲಿಯೂ ಮಾತೃಭಾಷೆ ಕಡ್ಡಾಯ ಮಾಡಲು ಅಡ್ಡಿಯಾಗಿದೆ. ಇದರಿಂದ ಪ್ರಾದೇಶಿಕ ಭಾಷೆ ಅಸ್ತಿತ್ವ ಕಳೆದುಕೊಳ್ಳುವ ಅಪಾಯವಿದೆ. ಹಾಗಾಗಿ ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಬೇಕು ಎಂದ ಸಿಎಂ, ಪ್ರತ್ಯೇಕ ರಾಜ್ಯದ ಕೂಗಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಾಜಕೀಯ ಅಸ್ತಿತ್ವಕ್ಕಾಗಿ ಕೆಲವರು ಇಂತಹ ಪ್ರಯತ್ನ ನಡೆಸುತ್ತಾರೆ. ಯಾರೂ ಇಂತಹ ಹೊಣೆಗೇಡಿ ಕೆಲಸಕ್ಕೆ ಮುಂದಾಗಬಾರದು. ನಮ್ಮದು ಒಂದೇ ಕರ್ನಾಟಕ ಅದು ಅಖಂಡ ಕರ್ನಾಟಕ ಎಂದರು.
ಎಂಎಂ ಕಲಬುರಗಿ ಹಂತಕರನ್ನು ಪತ್ತೆ ಹಚ್ಚಿ ಶಿಕ್ಷಿಸಿ; ಸಿಎಂಗೆ ಬರಗೂರು
ಹಿರಿಯ ಸಂಶೋಧಕ ಎಂಎಂ ಕಲಬುರಗಿ ಅವರ ಹತ್ಯೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯತ್ನವಾಗಿದೆ. ಕಲಬುರಗಿ ಹತ್ಯೆಯಂತಹ ಘಟನೆ ಮುಂದೆ ರಾಜ್ಯದಲ್ಲಿ ಮರುಕಳಿಸಬಾರದು.ಆ ನಿಟ್ಟಿನಲ್ಲಿ ಹಂತಕರನ್ನು ಕೂಡಲೇ ಪತ್ತೆ ಹಚ್ಚಿ ಶಿಕ್ಷಿಸಬೇಕೆಂದು 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದು, ನಮ್ಮ ದೇಶ ಭಿನ್ನಾಭಿಪ್ರಾಯಗಳ ಬಲಿ ಪೀಠ ಆಗಬಾರದು ಎಂದು ಹೇಳಿದರು.
ಶುಕ್ರವಾರ ಬೆಳಗ್ಗೆ 9ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಸೇರಿದಂತೆ ವಿವಿಧ ಗಣ್ಯರು ಕೃಷಿ ವಿವಿ ಆವರಣದಲ್ಲಿ ರಾಷ್ಟ್ರ ಹಾಗೂ ನಾಡಧ್ವಜಾರೋಹಣ ನೆರವೇರಿಸಿದರು. ಬಳಿಕ ಸಮ್ಮೇಳನ ಅಧ್ಯಕ್ಷ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅವರನ್ನು ಕರ್ನಾಟಕ ಸಂಘದಿಂದ ಕೃಷಿ ವಿವಿ ವರೆಗೂ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು.