https://youtu.be/767AwfsYYzY
ಬಳ್ಳಾರಿ: ಹತಾಶೆಯಿಂದ ಕ್ರಿಮಿನಾಶಕ ಸೇವಿಸಲು ಮುಂದಾಗಿ ನಂತರ ಸುಮ್ಮನಾಗಿದ್ದ ರೈತರೊಬ್ಬರು, ಸಾಂತ್ವನ ಹೇಳಲು ಬಂದ ರೈತ ಮುಖಂಡರು, ಸ್ಥಳೀಯರು ಹಾಗೂ ದೃಶ್ಯವಾಹಿನಿಗಳ ಸೂಚನೆ ಮೇರೆಗೆ ಎರಡು ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದಂತೆ ನಟಿಸಿದ ಘಟನೆ ತಾಲ್ಲೂಕಿನ ಕೊರ್ಲಗುಂದಿ ಗ್ರಾಮದಲ್ಲಿ ಬುಧವಾರ ನಡೆಯಿತು.
ಬೆಳಿಗ್ಗೆಯೇ ಜಮೀನಿಗೆ ಬಂದಿದ್ದ ರೈತ ಕುರುಬರ ಕುಮಾರೆಪ್ಪ ಒಣಗಿದ್ದ ಮೆಣಸಿನ ಕಾಯಿ ಬೆಳೆಯನ್ನು ಕಂಡು ಹತಾಶೆಯಿಂದ ಕ್ರಿಮಿನಾಶಕ ಸೇವಿಸಲು ಮುಂದಾಗಿದ್ದನ್ನು ಕಂಡ ಸ್ಥಳದಲ್ಲಿದ್ದ ಕುಟುಂಬದ ಸದಸ್ಯರು, ಇತರರು ತಡೆದಿದ್ದರು. ಬೆಳೆಯನ್ನು ಟ್ರಾಕ್ಟರ್ ಮೂಲಕ ಕೀಳುವ ಕೆಲಸವೂ ನಡೆದಿತ್ತು.
ನಂತರ, ವಿಷಯ ತಿಳಿದು ರೈತ ಮುಖಂಡರೊಂದಿಗೆ ಧಾವಿಸಿದ ಕೆಲವು ದೃಶ್ಯವಾಹಿನಿಗಳ ಪತ್ರಕರ್ತರು, ಕ್ರಿಮಿನಾಶಕ ಕುಡಿದಂತೆ ಮತ್ತೊಮ್ಮೆ ನಟಿಸುವಂತೆ ಕುಮಾರೆಪ್ಪ ಅವರಿಗೆ ಹೇಳಿದರು. ಅವರ ಮಾತಿಗೆ ಸಮ್ಮತಿಸಿದ ಮುಖಂಡರು, ಸ್ಥಳೀಯರು, ರೈತನ ಕೈಗೆ ಕ್ರಿಮಿನಾಶಕದ ಖಾಲಿ ಡಬ್ಬಿಯನ್ನು ನೀಡಿ, ಕುಡಿಯುವಂತೆ ನಟಿಸಲು ಹೇಳಿದರು. ಅವರು ಹಾಗೆ ಮಾಡಿದಾಗ, ಅದನ್ನು ತಡೆಯುವಂತೆ ತಾವೂ ನಟಿಸಿದರು.
ಒಮ್ಮೆ ಮಾಡಿದ ನಟನೆಯು ಸರಿಯಾಗಿ ಚಿತ್ರೀಕರಣವಾಗದೇ ಇದ್ದುದರಿಂದ, ಕ್ಯಾಮರಾಮೆನ್ ರೈತರ ಬಳಿ ಬಂದು ಡಬ್ಬಿಯನ್ನು ಹೇಗೆ ಹಿಡಿದುಕೊಳ್ಳಬೇಕು, ಹೇಗೆ ಬಾಯಿಯವರೆಗೆ ತರಬೇಕು ಎಂದು ಸೂಚನೆ ನೀಡಿದರು. ಅದರಂತೆ ರೈತ ನಟಿಸಿದರು. ಅವರನ್ನು ತಡೆಯುವಂತೆ ಸುತ್ತಮುತ್ತಲಿದ್ದವರೂ ನಟಿಸಿದರು. ವಾಹಿನಿಗಳ ಪತ್ರಕರ್ತರನ್ನು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ತಮ್ಮ ವಾಹನದಲ್ಲಿ ಗ್ರಾಮಕ್ಕೆ ಕರೆದೊಯ್ದಿದ್ದರು.
(ಪ್ರಜಾವಾಣಿ)
Comments are closed.