ಲಕ್ನೋ: ಯುವಕ-ಯುವತಿಯರ ಸೆಲ್ಫಿ ಹುಚ್ಚು ಎಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗುತ್ತೆ ಅನ್ನೋ ಬಗ್ಗೆ ಸಾಕಷ್ಟು ಬಾರಿ ಕೇಳಿದ್ದೀವಿ. ಯುವ ಜನಾಂಗವಷ್ಟೆ ಅಲ್ಲ ಮಕ್ಕಳಿಗೂ ಕೂಡ ಸೆಲ್ಫಿ ತೆಗೆಯೋ ಕ್ರೇಜ್ ಇದೆ. ಹಾಗೆ ಜೈಂಟ್ ವ್ಹೀಲ್ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋದ 16 ವರ್ಷದ ಶಾಲಾ ವಿದ್ಯಾರ್ಥಿನಿಯೊಬ್ಬಳು ತನ್ನ ಸುಂದರ ಕೇಶರಾಶಿಗೆ ಕುತ್ತು ತಂದುಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಭಾಗ್ಪತ್ ಜಿಲ್ಲೆಯ ಬರೌತ್ ಪಟ್ಟಣದಲ್ಲಿ ದಸರಾ ಪ್ರಯುಕ್ತ ಜೈಂಟ್ ವ್ಹೀಲ್ ಹಾಕಲಾಗಿತ್ತು. ಇಲ್ಲಿಗೆ ಬಂದಿದ್ದ ಯುವತಿ ಜೈಂಟ್ ವ್ಹೀಲ್‍ಗೆ ತುಂಬಾ ಹತ್ತಿರ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಳು. ಆ ಸಂದರ್ಭದಲ್ಲೇ ಆಕೆಯ ತಲೆ ಕೂದಲು ಜೈಂಟ್ ವ್ಹೀಲ್‍ಗೆ ಸಿಕ್ಕಿಕೊಳ್ತು. ಪರಿಣಾಮ ಶೇಕಡಾ 80ರಷ್ಟು ಕೂದಲು ಕಿತ್ತುಹೋಗಿ ರಕ್ತಸ್ರಾವವಾಗತೊಡಗಿತು.
ಇದನ್ನು ನೋಡಿ ಕೂಡಲೇ ಜೈಂಟ್ ವ್ಹೀಲ್ ನಿಲ್ಲಿಸಲಾಯ್ತು. ವ್ಹೀಲ್‍ಗೆ ಸಿಕ್ಕಿಕೊಂಡ ಅಳಿದುಳಿದ ಕೂದಲನ್ನು ಬಿಡಿಸಲು ಆಕೆಯ ಸ್ನೇಹಿತೆ ಹಾಗೂ ಅಲ್ಲಿ ನೆರೆದಿದ್ದ ಜನ ಹರಸಾಹಸವೇ ಪಡಬೇಕಾಯಿತು. ಆ ಯುವತಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.