(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಚಿನ್ನಾಭರಣ ಮತ್ತು ವಜ್ರಾಭರಣ ಪ್ರದರ್ಶನ ಹಾಗೂ ಮಾರಾಟ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಬಂದು 43 ಗ್ರಾಂ ತೂಕದ 2 ಜೊತೆ ಚಿನ್ನದ ಬಳೆಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸರು ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರ ಹವೇಲಿ ತಾಲೂಕು ಶಿಂದೆವಸ್ತಿ, ಮುಡ್ವ ಗ್ರಾಮದ ಧನರಾಜ್ ವಿಜಯ ಪರ್‌ಮಾರ್ (42) ಹಾಗೂ ಅಜಯಸಿಂಗ್ ಕಿಶೋರ್ ಸಾಲುಂಕೆ (23) ಬಂಧಿತ ಆರೋಪಿಗಳು. ಮಹಾರಾಷ್ಟ್ರದ ಪುಣೆ ಎಂಬಲ್ಲಿ ಬಂಧಿಸಿದ್ದು ಆರೋಪಿಗಳಿಂದ 1 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆ ವಿವರ:
ಪ್ರತಿಷ್ಠಿತ ಸಂಸ್ಥೆಯೊಂದರ ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನು ನ.27ರಿಂದ 29ರ ತನಕ ಮೂರು ದಿನಗಳ ಕಾಲ ಕುಂದಾಪುರ ತಾಲ್ಲೂಕಿನ ಕೋಟೇಶ್ವರದ ಹಾಲ್‌ವೊಂದರಲ್ಲಿ ತೆರೆದಿದ್ದು ನ.29 ರಂದು ಮಧ್ಯಾಹ್ನದ ವೇಳೆ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷನು ಗ್ರಾಹಕರಂತೆ ಮಾರಾಟ ಮಳಿಗೆಗೆ ಬಂದು 2 ಜೊತೆ ಚಿನ್ನದ ಬಳೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಸಿಸಿಟಿವಿ ಪೂಟೇಜ್ ಪರಿಶೀಲನೆ ವೇಳೆ ಕಂಡುಬಂದಿತ್ತು. ಕಳವಾದ 2 ಚಿನ್ನದ ಬಳೆಗಳು ಸುಮಾರು 43 ಗ್ರಾಂ ಆಗಿದ್ದು ಅದರ ಅಂದಾಜು ಮೌಲ್ಯ ರೂ 2,86,000.
ಕಾರಿನ ಡೋರ್ ನೀಡಿತ್ತು ದೊಡ್ಡ ಸುಳಿವು..!
ಈ ಕಳ್ಳತನದ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಪತ್ತೆ ಬಗ್ಗೆ ಉಡುಪಿ ಎಸ್ಪಿ ಮಾರ್ಗದರ್ಶನದಲ್ಲಿ ತನಿಖಾ ತಂಡ ರಚಿಸಲಾಗಿದ್ದು ಕ್ರೈಮ್ ವಿಭಾಗದ ಪೊಲೀಸರು ರಾತ್ರಿ ಹಗಲೆನ್ನದೆ ಈ ಕೇಸಿನ ಹಿಂದೆ ಬಿದ್ದಿದ್ದರು. ತನಿಳೆ ವೇಳೆ ಪೊಲೀಸರಿಗೆ ಸಿಕ್ಕ ಸಣ್ಣದೊಂದು ಸುಳಿವು ಪ್ರಕರಣದ ಪತ್ತೆಗೆ ದೊಡ್ಡ ಸಹಕಾರ ನೀಡಿತ್ತು. ಆರೋಪಿಗಳು ಬಂದಿದ್ದ ಕಾರಿನ ಡೋರ್’ನಲ್ಲಿದ್ದ ಕುರುಹು ಪೊಲೀಸರಿಗೆ ವರದಾನವಾಗಿತ್ತು. ಆ ಅಂಶವನ್ನು ಬೆನ್ನತ್ತಿ ಹೊರಟ ಪೊಲೀಸರ ತಂಡ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಬಂಧಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಧೀಶರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಯಶಸ್ವಿ ಕಾರ್ಯಾಚರಣೆಯ ತಂಡದಲ್ಲಿದ್ದವರು..
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣವರ್ಧನ್ ಹಾಗೂ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ ಕೆ. ಮತ್ತು ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ. ಇವರ ನಿರ್ದೇಶನದಲ್ಲಿ, ಕುಂದಾಪುರ ಪೊಲೀಸ್ ಠಾಣಾ ಉಪನಿರೀಕ್ಷಕ ಸದಾಶಿವ ಆರ್. ಗವರೋಜಿ ಹಾಗೂ ತನಿಖಾ ಪಿಎಸ್‌ಐ ರಮೇಶ್ ಆರ್ ಪವಾರ್ ನೇತೃತ್ವದಲ್ಲಿ ಪತ್ತೆದಳದ ತಂಡ ರಚಿಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಪ್ರೊಬೇಷನರಿ ಪಿಎಸ್ಐರವರುಗಳಾದ ಚಂದ್ರಕಲಾ ಪತ್ತಾರ, ಜಯಶ್ರೀ ಹುನ್ನೂರ, ಎ.ಎಸ್.ಐ ಸುಧಾಕರ್ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಶಿವಾನಂದ, ದಿನೇಶ, ನಿತಿನ್ ಮತ್ತು ಕುಂದಾಪುರ ಠಾಣೆ ಸಿಬ್ಬಂದಿಗಳಾದ ಸಂತೋಷ ಕುಮಾರ್ ಕೆಯು ಮತ್ತು ಸಚಿನ್ ಶೆಟ್ಟಿ, ರಾಮ ಪೂಜಾರಿ, ರವಿ ನಾಯ್ಕ ಇದ್ದರು.
ಇದನ್ನೂ ಓದಿರಿ:
Comments are closed.