ಕುಂದಾಪುರ: ಕುಂದಾಪುರದ ಕೋಟೇಶ್ವರ ಸಮೀಪದ ಖಾಸಗಿ ಹೋಟೆಲ್ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಬಂದು ರೂ 2.86 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಸಾಂದರ್ಭಿಕ ಚಿತ್ರ)
ಕೋಟೇಶ್ವರದ ಸಂಸ್ಥೆಯಲ್ಲಿ ನಡೆದ ನವೆಂಬರ್ 27 ರಿಂದ 29 ರ ವರೆಗೆ ಮೂರುದಿನ ಓರಾ ಫೈನ್ ಜ್ಯುವೆಲರಿ. ಪ್ರೈ. ಲಿ . ಸಂಸ್ಥೆಯ ವತಿಯಿಂದ ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನು ತೆರೆಯಲಾಗಿದ್ದು ನವೆಂಬರ್ 29 ರಂದು ಮಧ್ಯಾಹ್ನ 12.17 ರಿಂದ 12.20 ನಡುವೆ ಇಬ್ಬರು ಮಹಿಳೆಯರು ಮತ್ತು ಒಬ್ಬ ವ್ಯಕ್ತಿ ಗ್ರಾಹಕರಂತೆ ಮಾರಾಟ ಮಳಿಗೆಗೆ ಬಂದು 2 ಜೊತೆ ಚಿನ್ನದ ಬಳೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಕಳವಾದ 2 ಚಿನ್ನದ ಬಳೆಗಳು ಸುಮಾರು 43 ಗ್ರಾಂ ಆಗಿದ್ದು, ಅವುಗಳ ಅಂದಾಜು ಮೌಲ್ಯ ರೂ 2,86,000 ಎನ್ನಲಾಗಿದೆ.
ಈ ಬಗ್ಗೆ ಓರಾ ಫೈನ್ ಜ್ಯುವೆಲರಿ. ಪ್ರೈ. ಲಿ . ಸಂಸ್ಥೆಯ ಮ್ಯಾನೇಜರ್ ರಮೇಶ್ ಕುಮಾರ್ ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Comments are closed.