ಉಡುಪಿ: ಗೋ ಹಂತಕರಿಗೆ ಭಯ ಹುಟ್ಟಿಸಲು ಕಾನೂನು ಜಾರಿಗೆ ತಂದಿದ್ದೇವೆ, ಶಾಸನ ಭಯ ಹುಟ್ಟಿಸಲು ಸಮರ್ಥವಾಗಿದ್ದು ಗೋಹತ್ಯೆ ನಿಲ್ಲಿಸಲು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇದರ ನಡುವೆಯೂ ಅಕ್ರಮ ಗೋ ಸಾಗಾಟ, ಗೋ ಹತ್ಯೆ ಮುಂದುವರಿಸಿದರೆ ನಾವು ಬಲೆ ಹಾಕಿ ಅಂಥವರನ್ನು ಬಲಿ ತೆಗೆದುಕೊಳ್ಳುತ್ತೇವೆ ಎಂದು ರಾಜ್ಯ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ತೀರ್ಥಹಳ್ಳಿ ಸಮೀಪ ಅಕ್ರಮವಾಗಿ ದನಗಳನ್ನು ಸಾಗಣೆ ಮಾಡುತ್ತಿರುವ ದನಗಳ್ಳರನ್ನು ತಡೆಯಲು ಯತ್ನಿಸಿದ ಭಜರಂಗ ದಳದ ಯುವಕರ ಮೇಲೆ ಪಿಕ್ ಅಪ್ ಹತ್ತಿಸಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ಬಿಜೆಪಿ ಸರ್ಕಾರ ಬಂದ ಬಿಜೆಪಿ ಸರ್ಕಾರ ಬಂದರೂ ಗೋಹತ್ಯೆ ನಿಂತಿಲ್ಲ. ಇದನ್ನೆಲ್ಲ ನೋಡುವಾಗ ನನಗೆ ಹೊಟ್ಟೆ ಉರಿಯುತ್ತಿದೆ. ಪೂರ್ಣ ಗೋಹತ್ಯೆ ನಿಲ್ಲಿಸಲು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಗೋಹತ್ಯೆ ಮಾಡುವವರಿಗೆ ಬಲೆ ಹಾಕುತ್ತೇವೆ. ನಾನು ಹಿಂದೊಂದು ಮುಂದೊಂದು ಇಲ್ಲ. ಗೃಹ ಸಚಿವರ ಜೊತೆ ಚರ್ಚಿಸಿ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ. ಬಿಜೆಪಿ ಗೋವನ್ನು ತಾಯಿ ಸಮಾನವಾಗಿ ನೋಡುತ್ತದೆ ಪ್ರವಾಸದ ಒತ್ತಡದ ನಡುವೆ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೇನೆ. ಅದೃಷ್ಟವಶಾತ್ ಗಾಯಾಳುಗಳಿಗೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ಹೇಳಿದ್ದು, ಸಂಘಟನೆ ಮತ್ತು ಸರ್ಕಾರ ಗಾಯಾಳುಗಳಿಗೆ ನೆರವು ನೀಡುತ್ತದೆ. ಕುಟುಂಬದಿಂದ ಗಾಯಾಳುಗಳಿಗೆ ಒಂದು ಪೈಸೆಯೂ ಖರ್ಚಾಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಳ್ಳದ ಬಗ್ಗೆ ಅಸಮಾಧಾನ ಇದೆ. ಆದರೆ ಪೊಲೀಸರಿಗೂ ನನ್ನ ಹೆಂಡತಿ ಮಕ್ಕಳಿಗೆ ಏನಾದರು ಮಾಡಿದ್ರೆ ಏನು ಎಂಬ ಭಯವಿದೆ. ಪೊಲೀಸ್ ಇಲಾಖೆಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ. ಕಾಯ್ದೆ ಗಟ್ಟಿ ಇಲ್ಲ ಎಂದಾದರೆ ಮತ್ತೆ ಬಿಗಿಗೊಳಿಸುತ್ತೇವೆ ಎಂದರು.
ಈ ವೇಳೆ ಬಿಜೆಪಿ ನಾಯಕ ಯಶಪಾಲ್ ಸುವರ್ಣ ಹಾಗೂ ಇತರರು ಉಪಸ್ಥಿತರಿದ್ದರು.
Comments are closed.