ಕರ್ನಾಟಕ

ಸಿಎಂ ಬೊಮ್ಮಾಯಿ ಎದುರಲ್ಲೇ ವಾಗ್ವಾದಕ್ಕಿಳಿದು ಹೋಯ್-ಕೈಗೆ ಮುಂದಾದ ಡಿ.ಕೆ. ಸುರೇಶ್, ಸಚಿವ ಅಶ್ವತ್ಥ ನಾರಾಯಣ..!

Pinterest LinkedIn Tumblr

ರಾಮನಗರ: ರಾಮನಗರದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಭಾ ವೇದಿಕೆಯಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಎದುರಲ್ಲಿಯೇ ಸಂಸದ ಡಿ.ಕೆ. ಸುರೇಶ್ ಹಾಗೂ ಸಚಿವ ಅಶ್ವತ್ಥ ನಾರಾಯಣ ಪರಸ್ಪರ ವಾಗ್ವಾದಕ್ಕಿಳಿದಿದ್ದಾರೆ.

ರಾಮನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು ನಾಡಪ್ರಭು ಕೆಂಪೇಗೌಡ, ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗಳ ಅನಾವರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯುತ್ತಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ನೀರಾವರಿ ಯೋಜನೆಗಳ ಅನುಷ್ಠಾನ ಬಿಜೆಪಿ ಸರ್ಕಾರದಿಂದಲೇ ಸಾಧ್ಯ. ತಮ್ಮ ಸರ್ಕಾರ ಅನೇಕ ಯೋಜನೆಗಳನ್ನು ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿ ಬಿಜೆಪಿ ಪ್ರತಿನಿಧಿ ಇಲ್ಲದಿದ್ದರೂ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಿಲ್ಲ. ತಮ್ಮ ಸರ್ಕಾರದಲ್ಲೇ ಯೋಜನೆಗಳನ್ನು ರೂಪಿಸಿ ತಮ್ಮ ಅವಧಿಯಲ್ಲಿಯೇ ಸಂಪೂರ್ಣಗೊಳಿಸುತ್ತೇವೆ ಎಂದಿದ್ದಾರೆ.

ಇದರಿಂದ ಕುಪಿತರಾದ ಸಂಸದ ಡಿ.ಕೆ. ಸುರೇಶ್, ಸಚಿವ ಅಶ್ವತ್ಥ ನಾರಾಯಣ ನಾರಾಯಣ ಅವರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ವೇದಿಕೆಯಲ್ಲಿಯೇ ಧರಣಿ ಕುಳಿತಿದ್ದಾರೆ. ಇದರಿಂದ ಆಕ್ರೋಶಗೊಂಡ ಅಶ್ವತ್ಥ ನಾರಾಯಣ, ಸಿಎಂ ಕಾರ್ಯಕ್ರಮಕ್ಕೆ ಅಗೌರವ ತೋರುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದಿದ್ದು, ವಿಧಾನಪರಿಷತ್ ಸದಸ್ಯ ಸಿ. ರವಿ, ಅಶ್ವತ್ಥ ನಾರಾಯಣ ಅವರು ಮಾತನಾಡುತ್ತಿದ್ದ ಮೈಕ್ ಕಿತ್ತುಕೊಂಡ ಘಟನೆಯೂ ನಡೆದಿದೆ.

ಸಂಸದ ಹಾಗೂ ಸಚಿವರ ವಾಗ್ವಾದದಿಂದಾಗಿ ತುಸುಹೊತ್ತು ಕಾರ್ಯಕ್ರಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಬಳಿಕ ಪರಿಸ್ಥಿತಿ ಶಾಂತವಾಯಿತು.

Comments are closed.