ಕರಾವಳಿ

ಬಸ್ಸಿನಲ್ಲಿ ವಿಷ ಸೇವಿಸಿದವರ ಪ್ರಾಣ ಕಾಪಾಡಿದ ಡ್ರೈವರ್, ಕಂಡಕ್ಟರಿಗೆ ಬಸ್ಸಿನಲ್ಲೇ ಸನ್ಮಾನ!

Pinterest LinkedIn Tumblr

ಉಡುಪಿ: ತಮಿಳುನಾಡು ಮೂಲದ ಜೋಡಿಯೊಂದು ಒಂದೂವರೆ ವರ್ಷದ ಮಗುವಿನೊಂದಿಗೆ ಖಾಸಗಿ ಎಕ್ಸ್ ಪ್ರೆಸ್ ಬಸ್ಸಿನಲ್ಲಿ ಕೊಲ್ಲೂರಿನಿಂದ ಉಡುಪಿಗೆ ಬರುತ್ತಿದ್ದ ಸಂದರ್ಭ ಕುಂದಾಪುರ ಸಮೀಪದ ಕಟ್ ಬೆಲ್ತೂರು ಎಂಬಲ್ಲಿ ಬಸ್ಸಿನಲ್ಲೇ ವಿಷ ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗು ಸಹಿತ ಮೂವರನ್ನೂ ಆಸ್ಪತ್ರೆಗೆ ಸೇರಿಸಿ ಸಮಯಪ್ರಜ್ಞೆ ಜೊತೆಗೆ ಮಾನವೀಯತೆ ಮೆರೆದ ಬಸ್ ಚಾಲಕ ಹಾಗೂ ನಿರ್ವಾಹಕರನ್ನು ಬೀಯಿಂಗ್ ಸೋಷಿಯಲ್ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇದರ ಸದಸ್ಯರು ಎ.ಕೆ.ಎಂ.ಎಸ್ ಬಸ್ಸಿನಲ್ಲೇ ಗೌರವಿಸಿದರು.

ಕೊಲ್ಲೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಎ.ಕೆ.ಎಂ.ಎಸ್. ಎಕ್ಸ್ ಪ್ರೆಸ್ ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಈ ಪುರುಷ ಮತ್ತು ಮಹಿಳೆ ಬಸ್ಸಿನಲ್ಲೇ ವಿಷ ಸೇವಿಸಿ ಮಗುವಿಗೂ ಅಲ್ಪ ಪ್ರಮಾಣದ ವಿಷ ನೀಡಿದ್ದರು. ವಿಷ ಸೇವಿಸಿದ ಬಳಿಕ ಅವರಿಬ್ಬರೂ ಸೀಟಿನಿಂದ ಕೆಳಗೆ ಬಿದ್ದು ಒದ್ದಾಡುತ್ತಿರುವುದನ್ನು ಕಂಡ ಬಸ್ಸಿನ ನಿರ್ವಾಹಕ ಸತೀಶ್ ಅವರು ಚಾಲಕ ಇಕ್ಬಾಲ್ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಇಕ್ಬಾಲ್ ಅವರು ಬಸ್ಸಿನ ಹೆಡ್ ಲೈಟ್ ಆನ್ ಮಾಡಿ ಸುಮಾರು ೧೦ ಕಿ.ಮೀ ಎಲ್ಲಿಯೂ ಬಸ್ಸನ್ನು ನಿಲ್ಲಿಸದೇ ನೇರವಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಬಸ್ಸನ್ನು ತಂದು ನಿಲ್ಲಿಸಿ ಮೂವರಿಗೂ ಪ್ರಥಮ ಚಿಕಿತ್ಸೆಯನ್ನು ಕೊಡಿಸಿದ್ದಾರೆ.

ಬಳಿಕ ಅವರಿಬ್ಬರು ಸೇರಿಕೊಂಡು ಅಲ್ಲಿಂದ ಅವರನ್ನು ಆ್ಯಂಬುಲೆನ್ಸ್ ನಲ್ಲಿ ಉಡುಪಿಗೆ ಕರೆತಂದು ಜಿಲ್ಲಾಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಚಾಲಕ ಮತ್ತು ನಿರ್ಹಾಹಕರ ಈ ಕೆಲಸ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು. ವಿಷ ಸೇವಿಸಿದ ಮೂವರಲ್ಲಿ ಚಿಕಿತ್ಸೆ ಫಲಿಸದೇ ಕೋಯಮತ್ತೂರು ಮೂಲದ ರಾಜಕುಮಾರ್ ತೀರಿಕೊಂಡರೆ ಮಗು ಮತ್ತು ಮಹಿಳೆ ಇದೀಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಸಮಯಪ್ರಜ್ಞೆ ಮೆರೆದ ಸತೀಶ್ ಮತ್ತು ಇಕ್ಬಾಲ್ ಅವರಿಗೆ ಬಸ್ಸಿನಲ್ಲೇ ನಡೆದ ಗೌರವ ನೀಡುವ ಕಾರ್ಯಕ್ರಮದಲ್ಲಿ ಅವಿನಾಶ್ ಕಾಮತ್, ರವಿರಾಜ್ ಹೆಚ್.ಪಿ. ಬೀಯಿಂಗ್ ಸೋಷಿಯಲ್ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ನೇಹಿತರು ಇದ್ದರು.

ಇದನ್ನೂ ಓದಿರಿ:

ಕೊಲ್ಲೂರು-ಮಂಗಳೂರು ಬಸ್ಸಿನಲ್ಲಿ ವಿಷ ಸೇವಿಸಿದ ದಂಪತಿ: ಜೀವ ಉಳಿಸಲು ಎಕೆಎಂಎಸ್ ಬಸ್ ಚಾಲಕನ ಹರಸಾಹಸ

ಬಸ್ಸಿನಲ್ಲೇ ದಂಪತಿ ವಿಷ ಸೇವಿಸಿದ ಪ್ರಕರಣ- ಪತಿ ಸಾವು, ಪತ್ನಿ ಗಂಭೀರ

ಬಸ್ಸಿನಲ್ಲಿ ಜೋಡಿ ವಿಷ ಸೇವಿಸಿದ ಪ್ರಕರಣಕ್ಕೆ ಟ್ವಿಸ್ಟ್- ಅವರು ದಂಪತಿಗಳಲ್ಲ..!

Comments are closed.