ಕರಾವಳಿ

ನಾಡಿನಲ್ಲಿ ಸಾಮರಸ್ಯ ಮೂಡಿಸಲು ಮಂಗಳೂರಿನಲ್ಲಿ ‘ಮತ್ತೆ ಕಲ್ಯಾಣ’ – ರಾಜ್ಯಮಟ್ಟದ ಜನಾಂದೋಲನ

Pinterest LinkedIn Tumblr

ಮಂಗಳೂರು,ಅಗಸ್ಟ್ 04 ; ಮುಖವಾಡಗಳನ್ನು ಕಳಚಿ ಸಹಜವಾಗಿ ಬದುಕುವ ಪ್ರಯತ್ನ ಮಾಡಿದರೆ ವ್ಯಕ್ತಿ ಇನ್ನೊಷ್ಟು ಶಕ್ತಿಯುತವಾಗಿ ಬದುಕಲು ಸಾಧ್ಯ ಎಂದು ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ನಾಡಿನಲ್ಲಿ ಸಾಮರಸ್ಯ ಮೂಡಿಸುವ ಸಲುವಾಗಿ ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯ ಸಾರಥ್ಯದಲ್ಲಿ ಹಮ್ಮಿಕೊಳ್ಳಲಾದ ‘ಮತ್ತೆ ಕಲ್ಯಾಣ’ ಎಂಬ ರಾಜ್ಯಮಟ್ಟದ ಜನಾಂದೋಲನಕ್ಕೆ ಸಂಬಂಧಿಸಿ ಶನಿವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರುಗಿದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಮನುಷ್ಯ ಇಂದು ಅರ್ಥ, ಅಧಿಕಾರ, ರೂಪ ಮುಂತಾದ ಮದಗಳಿಂದ ಮದೋನ್ಮತ್ತನಾಗಿದ್ದಾನೆ. `ಮಾಡಿದೆನೆಂಬುದು ಮನದಲ್ಲಿ ಕಾಡಿದರೆ ಏಡಿಸಿ ಕಾಡಿತ್ತು ಮಾಯೆ’ ಎನ್ನುವ ಮೂಲಕ ಬಸವಣ್ಣ ತಮ್ಮ ವಿನಯವಂತಿಕೆಯನ್ನು ತೋರಿದ್ದಾರೆ. `ಎನಗಿಂತ ಕಿರಿಯರಿಲ್ಲ; ಶಿವಭಕ್ತನಿಗಿಂತ ಹಿರಿಯರಿಲ್ಲ’ ಎನ್ನುವ ವಿನಯವಂತಿಕೆಯನ್ನು ಬೆಳಸಿಕೊಳ್ಳದಿದ್ದರೆ ನಾವು ಅಹಂಕಾರದ ಮೊಟ್ಟೆಗಳಾಗುತ್ತೇವೆ. ವಿನಯವಂತಿಕೆ, ಬಾಗುವ ಗುಣ ಇಲ್ಲದಿದ್ದರೆ `ಮತ್ತೆ ಕಲ್ಯಾಣ’ ಸಾಧ್ಯವಿಲ್ಲ. ಕಸಬರಿಕೆಯ ಕೆಲಸ ಕಸ ಇರುವಲ್ಲಿ ಕಸ ಗುಡಿಸುವುದು. ಯಾವ ಕಸಬರಿಕೆಯನ್ನು ಎಲ್ಲಿ ಬಳಸಬೇಕೆನ್ನುವ ವಿವೇಕವೂ ನಮಗಿದೆ. ನಾವೆ ಬುದ್ಧಿವಂತರು, ವಿವೇಕವಂತರು ಎಂದವರು ಹೇಳಿದರು.

ನಮ್ಮಂತೆ ಸಮಾಜಿಕ ಕಾಳಜಿಯುಳ್ಳವರು ಬೇರೆ ಯಾರೂ ಇಲ್ಲ ಎನ್ನುವ ಅಹಂಕಾರವನ್ನು ಕೆಲವರು ಬಿಡಬೇಕು. ನಮ್ಮ ವೇದಿಕೆ ಎಲ್ಲರನ್ನೂ ಒಳಗೊಳ್ಳುವ ವೇದಿಕೆ. ಮುಂದಿನ ನವ ಸಮಾಜಕ್ಕಾಗಿ ನಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡುವುದು ಇಂದಿನ ಅತ್ಯಂತ ತುರ್ತು ಅಗತ್ಯ. ಅದನ್ನು ಯಾರು ಎಷ್ಟೇ ವಿರೋಧಿಸಿದರೂ ನಾವು ನಮ್ಮ ಪ್ರಯತ್ನ ಬಿಡುವುದಿಲ್ಲ. ನಿಪುಣ ಶಿಲ್ಪಿಯೊಬ್ಬ ಕಾಡುಗಲ್ಲಿಗೂ ಸುಂದರ ರೂಪ ಕೊಡಬಲ್ಲ. ಇದೇ ಪ್ರಯತ್ನವನ್ನು `ಮತ್ತೆ ಕಲ್ಯಾಣ’ ಮಾಡುತ್ತಿದೆ. ಬಸವಣ್ಣನವರಿಗೆ ಬಂದಷ್ಟು ವಿಪತ್ತುಗಳು ಬೇರೆ ಯಾರಿಗೂ ಬಂದಿರಲಿಕ್ಕೆ ಸಾಧ್ಯವಿಲ್ಲ. ಆದರೂ ಅವರು ವಿವೇಕದಿಂದ ಎಲ್ಲವನ್ನೂ ಎದುರಿಸಿ ಯಶಸ್ವಿಯಾದರು. ಇದು ನಮಗೂ ಪ್ರೇರಣೆ. ನಮ್ಮನ್ನು ಇಲ್ಲಿ `ಅಭಿನವ ಬಸವಣ್ಣ’ ಎಂದು ಬಣ್ಣಿಸಲಾಯಿತು. ಈ ಮಾತು ಕೇಳಿ ನಮಗೆ ತುಂಬ ವೇದನೆಯಾಯಿತು. ನಾವು `ಮಾವಿನ ಕಾಯಿಯೊಳಗೊಂದು ಎಕ್ಕೆಯ ಕಾಯಿ’ ಮಾತ್ರ. ಇಂದು ಯಾವ ವ್ಯಕ್ತಿಗೂ ಅಭಿನವ ಬಸವಣ್ಣ ಎನ್ನುವ ಪದ ಬಳಕೆಯ ಯೋಗ್ಯತೆಯಿಲ್ಲ. ಮತ್ತೆ ಕಲ್ಯಾಣ ಕಾರ್ಯಕ್ರಮಕ್ಕೆ ಯಾವುದೇ ಮಡಿ-ಮೈಲಿಗೆಯಿಲ್ಲ. ಇಲ್ಲಿನ `ಮತ್ತೆ ಕಲ್ಯಾಣ’ದ ಸಂಘಟಕರಲ್ಲಿ ಮುಸ್ಲಿಂ ಬಾಂಧವರು, ಕ್ರೈಸ್ತ ಬಾಂಧವರೂ ಇರುವರು ಎನ್ನುವುದನ್ನು ಮನಗಾಣಬೇಕು ಎಂದು ಸ್ವಾಮೀಜಿ ನುಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ‘ವಚನ ಸಾಹಿತ್ಯ ಮತ್ತು ಸಂವಿಧಾನ’ ಎಂಬ ವಿಷಯದ ಕುರಿತು ಮಾತನಾಡಿದ ಕರ್ನಾಟಕ ಚಿತ್ರಕಲಾಪರಿಷತ್ ಅಧ್ಯಕ್ಷರಾದ ಬಿ ಎಲ್ ಶಂಕರ್ ಅವರು, 12 ನೆಯ ಶತಮಾನದಲ್ಲಿ ಬಸವಾದಿ ಶರಣರು ಮಾಡಿದಂಥ ಪ್ರಯತ್ನವನ್ನು ಇಂದು 21 ನೆಯ ಶತಮಾನದಲ್ಲಿ ಪಂಡಿತಾರಾಧ್ಯ ಶ್ರೀಗಳು `ಮತ್ತೆ ಕಲ್ಯಾಣ’ದ ಮೂಲಕ ಮಾಡ ಹೊರಟಿದ್ದಾರೆ. ಇಂಥ ಕಾರ್ಯ ಮಾಡಲು ಎಂಟೆದೆ ಬೇಕು. ಅಂಥ ಅಪರೂಪದ ಸ್ವಾಮಿಜಿಗಳು ಪಂಡಿತಾರಾಧ್ಯ ಶ್ರೀಗಳು. ಈ ಕಾರ್ಯವನ್ನು ಮೆಚ್ಚುವುದರ ಜೊತೆ-ಜೊತೆಗೆ ನಾವೂ ಹೆಜ್ಜೆ ಹಾಕಬೇಕು.

ಈ ಬಗ್ಗೆ ಕೆಲವರು ಅಪಸ್ವರ, ಅನುಮಾನಗಳನ್ನು ವ್ಯಕ್ತಪಡಿಸುತ್ತಿರುವುದು ಮೊಸರಿನಲ್ಲಿ ಕಲ್ಲು ಹುಡುಕಿದಂತಾಗಿದೆ. ಅತಿ ವಿಸ್ತೃತವಾದ ಸಂವಿಧಾನ ಭಾರತದ ಸಂವಿಧಾನ. ಅಷ್ಟೇ ವಿಶಾಲ ಮೌಲ್ಯಗಳನ್ನು ಒಳಗೊಂಡದ್ದು ವಚನ ಸಾಹಿತ್ಯ. ನಮ್ಮ ಸಂವಿಧಾನವೇ ನಮ್ಮ ಧರ್ಮ ಗ್ರಂಥ. ದೇಶ ಅನ್ನುವುದು ಭೂಮಿ ಅಥವ ಮಣ್ಣಲ್ಲ; ಮನುಷ್ಯ. ಸಂವಿಧಾನಕಾರರ ಮೇಲೆ ಪ್ರಭಾವ ಬೀರಿದ ಪ್ರಮುಖ ಅಂಶಗಳು; ಅಮೇರಿಕಾದ ಕ್ರಾಂತಿಯ ಘೋಷಣೆ `ಸೃಷ್ಟಿಯಲ್ಲಿ ಎಲ್ಲ ಸಮಾನರು’, ಪ್ರೆಂಚ್ ಕ್ರಾಂತಿಯ `ಸ್ವಾಂತತ್ರ್ಯ, ಸಹೋದರತೆ, ಸಮಾನತೆ’, ರಶ್ಯದ ಕ್ರಾಂತಿದ `ಸಾಮಾರ್ಥ್ಯಕ್ಕೆ ತಕ್ಕ ಹಾಗೆ ಮಾತನಾಡಬೇಕು, ಪಡೆಯಬೇಕು’ ಎನ್ನುವಂಥ ಮಾತುಗಳು. ನಮ್ಮ ದೇಶದ ಕರಡು ಸಂವಿಧಾನವನ್ನು ಸಾರ್ವಜನಿಕ ಅವಗಾಹನೆಗೆ ತಂದಾಗ 7635 ತಿದ್ದುಪಡಿಗಳು ಬಂದು ಸೇರಿಕೊಳ್ಳುತ್ತವೆ.

ನಮ್ಮ ದೇಶದ ಒಟ್ಟು ಸಂಪತ್ತಿನ ಶೇ. 58 ರ ಭಾಗ ಶೇ 1 ಜನರ ಕೈಯಲ್ಲಿದೆ ಎನ್ನುವುದು ವಿಪರ್ಯಾಸವೇ ಸರಿ. ಒಂದು ವೇಳೆ ಸಂವಿಧಾನದ ಆಶಯಗಳು ಈಡೇರದಿದ್ದರೆ ಅದರ ತಪ್ಪು ಸಂವಿಧಾನದಲ್ಲ; ಸಂವಿಧಾನವನ್ನು ಅನುಷ್ಟಾನಕ್ಕೆ ತರುವವರದ್ದು ಎಂದು ಅಂಬೇಡ್ಕರ್ ಅವರು ಸಂವಿಧಾನ ರಚಿಸುವಾಗಲೇ ಹೇಳಿದ್ದಾರೆ. ಇಂಗ್ಲೆಂಡಿನ ಮ್ಯಾಗ್ನಾಕಾರ್ಟ್ ಒಪ್ಪಂದವೇ ಪ್ರಜಾಪ್ರಭುತ್ವದ ಮೂಲ ಎಂದು ಹೇಳಲಾಗುತ್ತಿದೆ. ಆದರೆ ನಮ್ಮ ಸಂವಿಧಾನಕ್ಕೆ 12 ನೆಯ ಶತಮಾನದ `ಅನುಭವ ಮಂಟಪ’ವೇ ಮೂಲ ಎಂದು ನಾವು ಘಂಟಾಘೋಷವಾಗಿ, ಹೆಮ್ಮೆಯಿಂದ ಹೇಳಬಹುದು.

ಅನುಭವ ಮಂಟಪವೇ ನಮ್ಮ ದೇಶದ ಮೊದಲ ಪಾರ್ಲಿಮೆಂಟು. ಅಲ್ಲಮಪ್ರಭುಗಳೇ ಮೊದಲ ಸ್ಪೀಕರ್. ಪ್ರತಿ 600 ವರ್ಷದ ಅವಧಿಗೊಬ್ಬರಂತೆ ಬುದ್ಧ, ಏಸು ಕ್ರಿಸ್ತ, ಪೈಗಂಬರ್, ಬಸವಣ್ಣನವರು ಬಂದು ಮಾನವತೆಯ ಸಂದೇಶ ನೀಡಿದ್ದಾರೆ. ಕಳ ಬೇಡ, ಕೊಲ ಬೇಡ, ಹುಸಿಯ ನುಡಿಯಲು ಬೇಡ, ಇದಿರ ಹಳಿಯ ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಮನದ ಮುಂದಣ ಆಸೆಯೇ ಮಾಯೆ, ನಾನು ನೀನೆಂಬುದೇ ಮಾಯೆ ಮುಂತಾದ ಮೌಲ್ಯಯುತ ಆತ್ಮಸಾಕ್ಷಿಯ ಮಾತುಗಳೇ ವಚನಕಾರರ ಸಂವಿಧಾನ. ಇಂಥ ಪ್ರತಿಯೊಂದು ಮಾತಿಗೂ ಸಂವಿಧಾನದಲ್ಲಿ ಮೂರ್ನಾಲ್ಕು ಆರ್ಟಿಕಲ್ ಗಳಿವೆ.

ಬಸವಣ್ಣನವರ ದೃಷ್ಟಿಯಲ್ಲಿ ಭಕ್ತ ಮತ್ತು ಭವಿ ಎರಡೇ ಕುಲಗಳು. ಇಂದಿನ ಸಂಸತ್ತಿನ ಕಲ್ಪನೆ ಬುದ್ಧನ ಕಾಲದಲ್ಲಿಯೂ ಇತ್ತು. ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎನ್ನುವಂತೆ ಇತಿಹಾಸವನ್ನು ನೆನಪಿಸುವ ಕೆಲಸವನ್ನು ಪಂಡಿತಾರಾಧ್ಯ ಶ್ರೀಗಳು `ಮತ್ತೆ ಕಲ್ಯಾಣ’ದ ಮೂಲಕ ಮಾಡಿಕೊಡುತ್ತಿದ್ದಾರೆ. ಪ್ರಜೆಗಳು ಪ್ರಭುಗಳೇ ಹೊರತು; ಫಲಾನುಭವಿಗಳಲ್ಲ. ಮತ್ತೆ ಕಲ್ಯಾಣದ ಮೂಲಕ ನಮ್ಮ ಪರಂಪರೆ, ಸಂಸ್ಕೃತಿಯನ್ನು ನೆನಪಿಸುವ ಕೆಲಸವನ್ನು ಮತ್ತೆ ಕಲ್ಯಾಣ ಮಾಡುತ್ತಿದೆ. ಈ ಕಾರ್ಯಕ್ರಮ ಎಲ್ಲೆಲ್ಲಿ ನಡೆಯುತ್ತದೆಯೋ ಅಲ್ಲಿಗೆ ನಮ್ಮ ಸಮಾನ ಮನಸ್ಕ ಜನರನ್ನು ಕಳುಹಿಸಿಕೊಟ್ಟರೆ ಅದೇ ನಾವು ಅವರೊಟ್ಟಿಗೆ ಇಡುವ ಹೆಜ್ಜೆ. ಪಂಡಿತಾರಾಧ್ಯ ಶ್ರೀಗಳ ಸಭೆಯಲ್ಲಿ ಸಮಯಕ್ಕೆ ಮಹತ್ವವಿದೆ. ಸಮಯವನ್ನು ಯಾರೂ ಮೀರುವಂತಿಲ್ಲ. ನಾನೂ ಸಭಾಪತಿಯಾಗಿದ್ದವನು. ಸಮಯ ಮೀರಿದ್ದಕ್ಕೆ ಕ್ಷಮೆಯಾಚಿಸುವೆ ಎಂದರು.

`ಶರಣರ ದೃಷ್ಟಿಯಲ್ಲಿ ಪರಿವರ್ತನೆ’ ಕುರಿತಂತೆ ಶಿವಮೊಗ್ಗ ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಮಾತನಾಡಿ, ನಮ್ಮ ಸಮಾಜ ಮತ್ತು ಸಂಸ್ಕೃತಿ ಎಂದೂ ಬರಡಲ್ಲ ಎನ್ನುವುದು ಬೆಳಗ್ಗಿನ ವಿದ್ಯಾರ್ಥಿಗಳ ಸಂವಾದದಿಂದ ನನಗೆ ಮನವರಿಕೆಯಾಯಿತು. ಬಸವಾದಿ ಶರಣರು ಇದ್ದದ್ದನ್ನು ಬುಡಮೇಲು ಮಾಡಲು ಬರಲಿಲ್ಲ. ಅಂತರಂಗದ ತಿಳುವಳಿಕೆಯ ಮೂಲಕ ನಮ್ಮ ಶುದ್ಧಿಯನ್ನು ಮಾಡಿಕೊಳ್ಳಬೇಕಾಗಿದೆ.

ಇಂದು ಧೂಳು ನಮ್ಮ ಮುಖದ ಮೇಲಿದೆ. ಆದರೆ ನಾವು ಕನ್ನಡಿಯನ್ನೇ ಒರೆಸುತ್ತಿದ್ದೇವೆ. ದೋಷ ನಮ್ಮಲ್ಲಿಯೇ ಇಟ್ಟುಕೊಂಡು ಹೊರಗೆ ಸರಿಮಾಡುವ ಪ್ರಯತ್ನ ಮಾಡುವುದು ವ್ಯರ್ಥ ಪ್ರಯತ್ನವೇ ಸರಿ. ಬದಲಾಗಿ ನಮ್ಮ ಧೂಳನ್ನು ನಾವೇ ಒರೆಸಿಕೊಳ್ಳುವ ಕೆಲಸವೇ ಮತ್ತೆ ಕಲ್ಯಾಣ. ಇದು ಕನ್ನಡ ನಾಡಿನ ಹೆಮ್ಮೆಯ ಸಂಗತಿ.

ಬಸವಾದಿ ಶಿವಶರಣರು ಆದ್ಯತೆ ಕೊಟ್ಟದ್ದು ಅಂತರಂಗ ಶುದ್ಧಿಗೆ. ಬಸವಣ್ಣನ ಮೇಲೂ ಆರೋಪಗಳು ಬಂದಿದ್ದವು. `ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಡೆ ಅದನ್ನು ಕೈಯೆತ್ತಿ ಮುಟ್ಟಿದೆನಾದಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ’ ಎನ್ನುವ 12 ನೆಯ ಶತಮಾನದ ಕಸಗುಡಿಸುವ ಸತ್ಯಕ್ಕನ ಮಾತು ಇಂದು ನಮ್ಮ ಮಾತಾಗಬೇಕು.

ಸತ್ಯ ಶುದ್ಧನಾಗುವ, ಇತರರಿಗೆ ಮಾದರಿಯಾಗುವ ಪ್ರಯತ್ನ ನಮ್ಮದಾಗಬೇಕು. ವಚನ ಧರ್ಮ ಯಾರದ್ದೋ ಸ್ವತ್ತಲ್ಲ; ಅದು ನಾಡಿನ ಸಂಪತ್ತು. ಅದು ನಮ್ಮ ಸಂಪತ್ತಾಗಬೇಕು. ಸಮಾಜಕ್ಕೆ ದಾರಿ ತೋರಿಸಬೇಕಾದವರು ಗುರುಗಳು. ಆದರೆ ಎಲ್ಲರೂ ಪಂಡಿತಾರಾಧ್ಯ ಗುರುಗಳೇ ಆಗದಿರುವುದು ನಮ್ಮ ದುರ್ದೈವ್ಯ. ಧಾರವಾಹಿಗಳು ಯುವಕರನ್ನಷ್ಟೇ ಅಲ್ಲ ಗೃಹಿಣಿಯರನ್ನೂ ದಾರಿತಪ್ಪಿಸುತ್ತಿವೆ.

12ನೆಯ ಶತಮಾನದ 33 ಶರಣೆಯರ ದಾರಿ ನಮ್ಮದಾಗಬೇಕು. ವೇಶ್ಯೆಯೂ ಉನ್ನತ ಸ್ಥಾನ ಪಡೆಯಬಹುದು, ಸಮಾನ ಬದುಕನ್ನು ಬದುಕಬಹುದು ಎನ್ನುವುದನ್ನು ತೋರಿಸಿಕೊಟ್ಟದ್ದು 12 ನೆಯ ಶತಮಾನ. ಅಕ್ಕಮಹಾದೇವಿಯಂತಹ ಕ್ಯಾರೆಕ್ಟರ್ ಇಂದಿಗೂ ಎಲ್ಲಿಗೂ ಇಲ್ಲ. ಬಸವಾದಿ ಶರಣರು ಇವತ್ತಿಗೂ ಮಾರ್ಗದರ್ಶಕ, ಪೂರಕ. ಒಳಗೆ ಸುಳಿವಾತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲ ಎನ್ನುವ ಮೂಲಕ ಸಮಾನತೆಯನ್ನು ಸಾರಿದವರು ಶರಣರು. ಸೋಮಾರಿತನದ ಬದುಕನ್ನು ಶರಣರು ನಿರಾಕರಿಸಿ ಕಾಯಕ ಸಿದ್ಧಾಂತವನ್ನು ಕೊಟ್ಟರು. ನಮ್ಮ ಬದುಕಿನ ಎಲ್ಲ ತಿರುವುಗಳಿಗೂ ಬೆಳಕು ನೀಡುವಂಥವು ವಚನಸಾಹಿತ್ಯ. ಬದ್ಧತೆಯ ಬದುಕನ್ನು ಮತ್ತೆ ಕಲ್ಯಾಣ ನನ್ನಲ್ಲಿ ರೂಪಿಸಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ. ಎಂ ಮೋಹನ್ ಆಳ್ವ ಮಾತನಾಡಿ ನಾನು ಬಸವಣ್ಣ ಮತ್ತು ಅವರ ತತ್ವಗಳ ಬಗ್ಗೆ ಅಪಾರ ನಂಬಿಕೆಯುಳ್ಳವ, ಅದರಂತೆ ನಡೆಯುವವ. ಅದರಂತೆ ನಮ್ಮ ನಾಡಿನ ಅನೇಕಾನೆಕ ದಾರ್ಶನಿಕರ ಬಗ್ಗೆಯೂ ಗೌರವವಿದೆ. ಬಸಣ್ಣನವರ ಬಗ್ಗೆ ವಿಶೇಷ ಗೌರವ ಯಾಕೆಂದರೆ ಅವರು ಕಾಯಕ ತತ್ವಕ್ಕೆ ಮನ್ನಣೆ ಕೊಟ್ಟದ್ದು. ಬಸವಣ್ಣನ ಆಶಯಗಳು ಇವತ್ತಿಗೂ ಪ್ರಸ್ತುತ. 21 ನೆಯ ಶತಮಾನದಲ್ಲಿರುವ ನಮಗೆ ಧರ್ಮ ಮತ್ತು ಮತ, ಜಾತಿಗಳ ವ್ಯತ್ಯಾಸ ಗೊತ್ತಾಗುತ್ತಿಲ್ಲ. ಧರ್ಮ ಮತವಲ್ಲ. ಜಾತಿಗಳು ಹಲವಾರು ಸಮಾಜ ಒಂದೆಂಬ ಭಾವನೆ ಮರೆಯಾಗುತ್ತಿದೆ.

ಪರಂಪರೆಯನ್ನು ಪರಿಷ್ಕರಿಸಿ ಅಳವಡಿಸಿಕೊಳ್ಳಬೇಕು. ಪರಿಷ್ಕರಿಸುವುದರ ಮೂಲಕವೇ ಬದಲಾವಣೆ ಸಾಧ್ಯ. ಬಸವಣ್ಣ ಅಂತರಂಗವನ್ನು ಮೊದಲು ಹೇಳಿ ಬಹಿರಂಗವನ್ನು ನಂತರ ಹೇಳಿದವರು. ಬಸವಣ್ಣನವರ ಮೇಲಿರುವಷ್ಟೇ ಗೌರವ ಪಂಡಿತಾರಾಧ್ಯ ಶ್ರೀಗಳ ಮೇಲಿದೆ. ನಮ್ಮ ಮತ್ತು ಶ್ರೀಗಳ ನಡುವಿನ ಸಂಬಂಧ ಸಾಂಸ್ಕೃತಿಕವಾದುದು. ನಮ್ಮ ಸಾಂಸ್ಕೃತಿಕ ತಂಡ ಸಾಣೇಹಳ್ಳಿ, ದಾವಣಗೆರೆ ಮುಂತಾದ ಕಡೆ ಪ್ರದರ್ಶನ ನೀಡುವಲ್ಲಿ ಪೂಜ್ಯರು ನೀಡಿದ ಸಹಕಾರವನ್ನು ಮರೆಯುವಂತಿಲ್ಲ. ಮತ್ತೆ ಕಲ್ಯಾಣದ ಅವಶ್ಯಕತೆ ಇಂದು ಅತ್ಯಂತ ಅವಶ್ಯವಾಗಿದೆ ಎಂದರು.

‘ಮತ್ತೆ ಕಲ್ಯಾಣ’ ದ.ಕ. ಜಿಲ್ಲಾ ಸಮಿತಿಯ ಸಂಯೋಜಕ ಯು ಹೆಚ್ ಉಮರ್ ಸ್ವಾಗತಿಸಿದರೆ, ಸಹಮತ ವೇದಿಕೆಯ ಸದಸ್ಯ ರೇಮಂಡ್ ಡಿ ಕುನ್ಹಾ ವಂದಿಸಿದರು. ತಾರಾನಾಥ್ ಗಟ್ಟಿ ನಿರ್ವಹಿಸಿದರು. ಸಮಾವೇಶದ ಆರಂಭದಲ್ಲಿ ಸಾಣೇಹಳ್ಳಿಯ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು.

ಇದಕ್ಕೂ ಮುನ್ನ ವಿದ್ಯಾರ್ಥಿಗಳಿಗೆ `ವಚನಗಳು ಮತ್ತು ಸಹಬಾಳ್ವೆ’ ಕುರಿತ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಪದವಿಪೂರ್ವ ಕಾಲೇಜು ಮಟ್ಟದಲ್ಲಿ ಅಕ್ಷಿತ್ ಪ್ರಥಮ, ರೇಖಾ ದ್ವಿತೀಯ, ಜಿನುಜಾನ್ ತೃತೀಯ ಹಾಗೂ ಪದವಿ ಮಟ್ಟದಲ್ಲಿ ಅನನ್ಯ ಪ್ರಥಮ, ಅರ್ಜುನ, ನಾಗನ ಕುಮಾರ್ ದ್ವಿತೀಯ, ನಿವೇದಿತಾ ತೃತೀಯ ಸ್ಥಾನ ಪಡೆದುಕೊಂಡರು.

ಸಾಮರಸ್ಯ ಯಾತ್ರೆಯಲ್ಲಿ ವಿವಿಧ ಧರ್ಮ, ಜಾತಿ, ಪಕ್ಷದ ನೇತಾರರು, ವಿದ್ಯಾರ್ಥಿಗಳು, ಸಾರ್ವಜನಿಕರು, ಕಲಾತಂಡಗಳು ಭಾಗವಹಿಸಿದ್ದವು.

ವರದಿ : ಹೆಚ್ ಎಸ್ ದ್ಯಾಮೇಶ್

Comments are closed.