ಗಲ್ಫ್

ಕ್ರಿಯಾತ್ಮಕ ಕಲಾನಿರ್ದೇಶಕ ಶ್ರೀ ಬಿ. ಕೆ. ಗಣೇಶ್ ರೈಯವರಿಗೆ ಯು.ಎ.ಇ. ಕನ್ನಡಿಗರು-ತುಳುವರಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ

Pinterest LinkedIn Tumblr

ಕರ್ನಾಟಕದ ಪ್ರಕೃತಿ ಮಡಿಲು ಶೂರರ ನಾಡು ಕೊಡಗು ಜಿಲ್ಲೆಯಿಂದ ಗಲ್ಫ್ ರಾಷ್ಟ್ರಕ್ಕೆ ಬಂದು ಎರಡುವರೆ ದಶಕಗಳ ಕಾಲ ಸೇವೆ ಸಲ್ಲಿಸಿ ತಮ್ಮ ಜನ್ಮಭೂಮಿಗೆ ನಿವೃತ್ತಿಯಾಗಿ ಹಿಂದಿರುಗಲಿರುವ ಕ್ರಿಯಾತ್ಮಕ ಕಲಾ ನಿರ್ದೇಶಕ ಶ್ರೀ ಬಿ. ಕೆ. ಗಣೇಶ್ ರೈಯವರಿಗೆ ಯು.ಎ.ಇ. ಕನ್ನಡಿಗರು ಮತ್ತು ತುಳುವರಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ನಡೆಯಿತು.

2019 ಆಗಸ್ಟ್ 2ನೇ ತಾರೀಕು ಶುಕ್ರವಾರ ಬೆಳಿಗ್ಗೆ 11.00 ಗಂಟೆಗೆ ದುಬಾಯಿ ಅಲ್ ಗಿಸೇಸ್ ನಲ್ಲಿರುವ ಫಾರ್ಚೂನ್ ಪ್ಲಾಝಾ ಸಭಾಂಗಣದಲ್ಲಿ ನಡೆಯಿತು. ಸುಮಾರು 40 ಕರ್ನಾಟಕ ಪರ ಸಂಘಟನೆಗಳು ಒಟ್ಟು ಸೇರಿರುವ ಯು.ಎ.ಇ. ಕನ್ನಡಿಗರು ಮತ್ತು ತುಳುವರ ಸಂಘಟನೆಯ ಸಂಘಟಕರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಸರ್ವರನ್ನು ಆತ್ಮೀಯಾವಾಗಿ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ACME ಬಿಲ್ಡಿಂಗ್ ಮೆಟೀರಿಯಲ್ಸ್’ನ ಆಡಳಿತ ನಿರ್ದೇಶಕ, ಕನ್ನಡ-ತುಳು ಸಿನೆಮಾ ನಿರ್ಮಾಪಕ ಹರೀಶ್ ಶೇರಿಗಾರ್ ಅವರು ಗಣೇಶ್ ರೈ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಬಿ. ಕೆ. ಗಣೇಶ್ ರೈಯವರು ಪ್ರಸ್ತುತ ಯು.ಎ.ಇ. ಯ ಹಿರಿಯ ಉದ್ಯಮಿ ಡಾ. ಬಿ. ಆರ್. ಶೆಟ್ಟಿಯವರ ಬಿಆರ್ ವೆಂಚರ್ಸ್ ಸಮೂಹ ಸಂಸ್ಥೆಯಲ್ಲಿ ಒಂದಾಗಿರುವ ಗಲ್ಫ್ ಪಬ್ಲಿಕ್ ರಿಲೇಶನ್ಸ್ ಅಂಡ್ ಅಡ್ವರ್ಟೈಸಿಂಗ್ ವಿಭಾಗದಲ್ಲಿ ಕ್ರಿಯಾತ್ಮಕ ಕಲಾ ನಿರ್ದೇಶಕರು ಮತ್ತು ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದಾರೆ. ಪ್ರವೃತ್ತಿಯಲ್ಲಿ ಸಮಾಜಸೇವೆ ಸೇವೆಯಲ್ಲಿ ತೊಡಗಿಸಿಕೊಂಡು ತಮ್ಮ ಬಿಡುವಿನ ವೇಳೆಯಲ್ಲಿ ಯು.ಎ.ಇ. ಯಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡು ಸಲ್ಲಿಸಿರುವ ಸೇವೆಯನ್ನು ಶ್ರೀಯುತ ಸರ್ವೋತ್ತಮ ಶೆಟ್ಟಿಯವರು ಶ್ಲಾಘಿಸಿ ಗಣೇಶ್ ರೈ ಮತ್ತು ಧರ್ಮ ಪತ್ನಿ ಶ್ರೀಮತಿ ಮಂಜುಳಾ ಗಣೇಶ್ ರೈ ಮತ್ತು ಮಕ್ಕಳಾದ ಕು. ಮೋನಿಷ್ ರೈ ಮತ್ತು ಕು. ಐಶ್ವರ್ಯ ರೈ ಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಗಣೇಶ್ ರೈಯವರು ವೃತ್ತಿಯಲ್ಲಿ ಶಿಲ್ಪಿ, ಚಿತ್ರಕಲಾವಿದರು, ಕಂಪ್ಯೂಟರ್ ಗ್ರಾಫಿಕ್ ಡಿಸೈನಿಂಗ್ ನಲ್ಲಿ ಪರಿಣಿತಿ ಪಡೆದವರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ತಾವು ರಕ್ತದಾನಿಯಾಗಿದ್ದು, ಕರ್ನಾಟಕ ಪರ ಸಂಘ ಸಂಸ್ಥೆಗಳ ಸದಸ್ಯರು ರಕ್ತದಾನ ಶಿಬಿರಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವರು. ಹೆಚ್ಚಿನ ಎಲ್ಲಾ ಸಂಘ ಸಂಸ್ಥೆಗಳ ಲಾಂಛನಗಳನ್ನು ಹಾಗೂ ಸಭೆ ಸಮಾರಂಭ, ಸ್ನೇಹಮಿಲನ, ಕ್ರೀಡಾಕೂಟ, ವಿಹಾರ ಕೂಟ, ಸಾಹಿತ್ಯ ಸಮ್ಮೇಳನಗಳ ಆಮಂತ್ರಣ ಪತ್ರ, ಸ್ಮರಣ ಸಂಚಿಕೆ, ಸನ್ಮಾನ ಪತ್ರ, ವೇದಿಕೆಯಲ್ಲಿ ಡಿಜಿಟಲ್ ಡಿಸ್ಪ್ಲೆ, ಚಿತ್ರಪಟಗಳಲ್ಲಿ ಕರ್ನಾಟಕದ ಶಿಲ್ಪ ಕಲಾ ವೈಭವ, ಸಾಂಸ್ಕೃತಿಕ ವೈಭವದ ಜೊತೆಗೆ ಕನ್ನಡ ಭಾಷೆಯಲ್ಲಿ ಅಕ್ಷರಗಳನ್ನು ಪರಿಕಲ್ಪನೆ ವಿನ್ಯಾಸ ಮಾಡಿ ಯು.ಎ.ಇ. ಯಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿಯನ್ನು ಮೂಡಿಸಿದ್ದಾರೆ.

 

ಬರಹಗಾರರಾಗಿರುವ ಗಣೇಶ್ ರೈಯವರು ಹಲವಾರು ಮಹಾನ್ ವ್ಯಕ್ತಿಗಳ ಬಗ್ಗೆ ಲೇಖನಗಳನ್ನು ಮತ್ತು ಸಂಘ ಸಂಸ್ಥೆಗಳ ಕಾರ್ಯಕ್ರಮಗಳ ಮೊದಲು ಕಾರ್ಯಕ್ರಮಗಳ ನಂತರ ಪೂರ್ಣ ಮಾಹಿತಿಯ ಲೇಖನಗಳನ್ನು ವೆಬ್ ಮಾಧ್ಯಮಗಳಲ್ಲಿ ಪ್ರಕಟಿಸಿದ್ದಾರೆ. ಹೆಚ್ಚಿನ ಕನ್ನಡ ಕಾರ್ಯಕ್ರಗಳಲ್ಲಿ ಕಾರ್ಯಕ್ರಮ ನಿರೂಪಕರಾಗಿ, ಮುಖ್ಯ ಅತಿಥಿಯಾಗಿಯೂ ಭಾಗವಹಿಸಿದ್ದಾರೆ.

ದುಬಾಯಿ ಸರ್ಕಾರದ ಹೆಲ್ತ್ ಅಥಾರಿಟಿಯಿಂದ ಗಣೇಶ್ ರೈಗೆ ಗೌರವ ಮಾನ್ಯತಾ ಪತ್ರ ನೀಡಿಕೆ

ಗಣೇಶ್ ರೈಯವರು ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದ ಅವಧಿಯಿಂದ ರಕ್ತದಾನ ಶಿಬಿರ ಪ್ರಾರಂಭಿಸಿ ನಂತರ 2007 ರಿಂದ 2019 ರವರೆಗೆ ಎಲ್ಲಾ ಕರ್ನಾಟಕ ಪರ ಸಂಘ ಸಂಸ್ಥೆಗಳ ಮೂಲಕ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಅಯೋಜಿಸುವಲ್ಲಿ ವಹಿಸಿರುವ ಪಾತ್ರವನ್ನು ಮೆಚ್ಚಿ ದುಬಾಯಿ ಸರ್ಕಾರ ಹೆಲ್ತ್ ಅಥಾರಿಟಿ ಗೌರವದ ಮಾನ್ಯತಾ ಪತ್ರವನ್ನು ರಕ್ತದಾನ ಶಿಬಿರಗಳ ಆಯೋಜಕರಾದ ಶ್ರೀ ಬಾಲಕೃಷ್ಣ ಸಾಲಿಯಾನ್ ಮತ್ತು ಶ್ರೀ ಸರ್ವೋತ್ತಮ ಶೆಟ್ಟಿಯವರು ಮಾನ್ಯತಾ ಪತ್ರವನ್ನು ನೀಡಿ ಗೌರವಿಸಿದರು.

ಶ್ರೀ ಬಿ. ಕೆ. ಗಣೇಶ್ ರೈ ಮತ್ತು ಮಡದಿ ಮಕ್ಕಳಿಗೆ ಗೌರವದ ಸನ್ಮಾನ…
ಯು.ಎ.ಇ. ಕನ್ನಡಿಗರು ಮತ್ತು ತುಳುವರ ಸಂಘಟನೆಯಲ್ಲಿ ಯು.ಎ.ಇ. ಯಲ್ಲಿರುವ ಕರ್ನಾಟಕ ಪರ ಸಂಘಟನೆಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಪ್ರಕ್ರಿಯೆಯನ್ನು ಶ್ರೀ ಸರ್ವೊತ್ತಮ ಶೆಟ್ಟಿ, ಪ್ರೇಂನಾಥ್ ಶೆಟ್ಟಿ, ಬಾಲಕೃಷ್ಣ ಸಾಲಿಯಾನ್ ಮತ್ತು ಸತೀಶ್ ಪೂಜಾರಿಯವರು ನೆರವೇರಿಸಿಕೊಟ್ಟರು ಸನ್ಮಾನ ಪತ್ರವನ್ನು ಶ್ರೀ ಸಂಪತ್ ಶೆಟ್ಟಿಯವರು ವಾಚಿಸಿದರು.

ಸನ್ಮಾನ ಸ್ವೀಕರಿಸಿದ ಶ್ರೀ ಗಣೇಶ್ ರೈವರು ತಮ್ಮ ಕೃತಜ್ಞತೆಯನ್ನು ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಹಾಗೂ ಸರ್ವ ಸದಸ್ಯರಿಗೂ ಸಲ್ಲಿಸಿ ತಮ್ಮ ಕಲಾ ಸಾಧನೆಯ ಹಾದಿಯಲ್ಲಿ ಬೆಂಬಲ ಪ್ರೋತ್ಸಾಹ, ಗೌರವ, ಅವಕಾಶ ನೀಡಿರುವವರನ್ನು ಸ್ಮರಿಸಿ ಧನ್ಯವಾದಗಳನ್ನು ಸಲ್ಲಿಸಿದರು.

ಶ್ರೀ ಬಿ. ಕೆ. ಗಣೇಶ್ ರೈವರು ಯು.ಎ.ಇ. ಯಲ್ಲಿ ಸೇವೆ ಸಲ್ಲಿಸಿರುವ ಸಂಘ ಸಂಸ್ಥೆಗಳು
ಅಬುಧಾಬಿ ಕರ್ನಾಟಕ ಸಂಘ, ಕರ್ನಾಟಕ ಸಂಘ ದುಬಾಯಿ, ಕರ್ನಾಟಕ ಸಂಘ ಶಾರ್ಜಾ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ., ಅಲ್ ಐನ್ ಕನ್ನಡ ಸಂಘ, ಇಂಡಿಯಾ ಸೋಶಿಯಲ್ ಅಂಡ್ ಕಲ್ಚರಲ್ ಸೆಂಟರ್ ಅಬುಧಾಬಿ. ಯು.ಎ.ಇ. ತುಳುಕೂಟ, ನಮ ತುಳುವೆರ್, ತುಳು ಸಿರಿ ದುಬಾಯಿ, ಧ್ವನಿ ಪ್ರತಿಷ್ಠಾನ ಯು.ಎ.ಇ. ಕನ್ನಡಿಗರು ದುಬಾಯಿ, ಯು.ಎ.ಇ. ಬಂಟ್ಸ್, ಬಿಲ್ಲವ ಫ್ಯಾಮಿಲಿ ದುಬಾಯಿ, ಬ್ಯಾರೀಸ್ ಕಲ್ಚರಲ್ ಫೋರಂ ದುಬಾಯಿ, ಮಂಗ್ಳುರ್ ಕೊಂಕಣ್ಸ್ ದುಬಾಯಿ, ಗಮ್ಮತ್ ಕಲಾವಿದೆರ್ ದುಬಾಯಿ, ಯಕ್ಷ ಮಿತ್ರರು ದುಬಾಯಿ, ಪದ್ಮಶಾಲಿ ಸಮುದಾಯ ಯು.ಎ.ಇ.

ಮೊಗವೀರ್ಸ್ ಯು.ಎ.ಇ., ಅಮ್ಚಿಗೆಲೆ (ಜಿ.ಎಸ್.ಬಿ.) ಸಮಾಜ ಯು.ಎ.ಇ., ಬಸವ ಸಮಿತಿ ಯು.ಎ.ಇ., ಗಾಣಿಗ ಸಮಾಜ ಯು.ಎ.ಇ., ಕುಲಾಲ ವೃಂದ ಯು.ಎ.ಇ. ವಕ್ಕಲಿಗ ಸಮಾಜ ಯು.ಎ.ಇ., ವಿಶ್ವ ಕರ್ಮ ಸೇವಾಸಮಿತಿ ಯು.ಎ.ಇ. ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ, ಕೊಡವ ಸಮಾಜ, ದೇವಾಡಿಗ ಸಂಘ ದುಬಾಯಿ, ಕುಂದಾಪುರ ದೇವಾಡಿಗ ಮಿತ್ರರು (ಕದಮ್), ರಾಮ ಕ್ಷತ್ರೀಯ ಸಂಘ ಯು.ಎ.ಇ., ಮಾರ್ಗದೀಪ ಸಾಂಸ್ಕೃತಿಕ ಸಮಿತಿ, ರಜಕ ಸಮಾಜ ಯು.ಎ.ಇ., ತುಳು ಪಾತೆರುಗ ತುಳು ಒರಿಪಾಗ ಯು.ಎ.ಇ., ವರಮಹಾಲಕ್ಷ್ಮೀ ಪೂಜಾ ಸಮಿತಿ, ಸಾಮೂಹಿಕ ಶ್ರೀ ಸತ್ಯನಾರಾಯಣ ಸಮಿತಿ, ಬ್ರಾಹ್ಮಣ ಸಮಾಜ ಯು.ಎ.ಇ. ತೀಯಾ ಸಮಾಜ, ಕರ್ನಾಟಕ ಪತ್ರಕರ್ತರ ಸಂಘ ಯು.ಎ.ಇ. ಕರ್ನಾಟಕ ಅಸೋಸಿಯೇಶನ್ ಬ್ಲಡ್ ಡೋನರ್ಸ್ ಗ್ರೂಪ್.

ಯು.ಎ.ಇ. ಕನ್ನಡಿಗರು ಮತ್ತು ತುಳುವರ ಸಂಘಟಕರಲ್ಲಿ ಒರ್ವರಾದ ಶ್ರೀ ಸತೀಶ್ ಪೂಜಾರಿಯವರು ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಆಯೋಜಿಸಿ ಸಭಾಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.

ಛಾಯಚಿತ್ರ : ಶ್ರೀ ಪ್ರಶಾಂತ್ ನಾಯರ್

Comments are closed.