ಕರಾವಳಿ

ಕೊರ್ಗಿ ಮಾಲತಿ ಶೆಟ್ಟಿ ನಿಗೂಢ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಮರ್ಡರ್ ಕೇಸು ದಾಖಲು

Pinterest LinkedIn Tumblr

ಕುಂದಾಪುರ: ಕಳೆದ ಮೂರೂವರೆ ವರ್ಷಗಳ ಹಿಂದೆ ತನ್ನ ಮನೆಯಿಂದ ನಿಗೂಢ ನಾಪತ್ತೆಯಾಗಿರುವ ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಮಾಲತಿ ಶೆಟ್ಟಿ(65) ಪ್ರಕರಣ ಇದೀಗಾ ಮಹತ್ತರ ತಿರುವು ಪಡೆದುಕೊಂಡಿದ್ದು ಹೈಕೋರ್ಟ್‌ ನಿರ್ದೇಶನದಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲುಗೊಂಡಿದೆ. ಆರು ಮಂದಿ ಆರೋಪಿಗಳ ಹೆಸರು ಪ್ರಕರಣದಲ್ಲಿ ಉಲ್ಲೇಖಗೊಂಡಿದ್ದು ಸರ್ಕಲ್‌ ಇನ್ಸ್‌ಪೆಕ್ಟರ್‌ ಮಂಜಪ್ಪ ನೇತೃತ್ವದಲ್ಲಿ ಮತ್ತೆ ತನಿಖೆಗೆ ಮರುಜೀವ ಬಂದಿದೆ.

ಅಂದು ನಡೆದಿದ್ದೇನು?
ಕೊರ್ಗಿ ಗ್ರಾಮದ ಚಾರುಕೊಟ್ಟಿಗೆ ನಿವಾಸಿ, ನಿವೃತ್ತ ಶಿಕ್ಷಕ ಕೆದೂರು ಭಾಸ್ಕರ ಶೆಟ್ಟಿಯವರ ಪತ್ನಿ ಮಾಲತಿ ಶೆಟ್ಟಿಯವರು 2015ರ ಜೂ.24ರಂದು ಅವರ ನಿವಾಸದಿಂದ ಮಧ್ಯಾಹ್ನದ ಸುಮಾರಿಗೆ ನಾಪತ್ತೆಯಾಗಿದ್ದರು. ಅಂದಾಜು 3.75ಲಕ್ಷ ಬೆಲೆಬಾಳುವ ಚಿನ್ನಾಭರಣ ಅವರ ಮೈಮೇಲೆ ಇತ್ತು. ಈ ಕುರಿತು ಜೂ.26ರಂದು ಕುಂದಾಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅಂದಿನ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಣ್ಣಾಮಲೈ ಕೂಡ ಕೊರ್ಗಿಗೆ ಭೇಟಿನೀಡಿ ಮಾಹಿತಿ ಪಡೆದಿದ್ದರು. ಎಸ್ಪಿ ಅಣ್ಣಾಮಲೈ ಅವರ ಮುತುವರ್ಜಿಯಲ್ಲಿ ಅಂದಿನ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಸಿಪಿಐ ದಿವಾಕರ ಪಿಎಂ ಮತ್ತು ತಂಡ ಮಾಲತಿ ಶೆಟ್ಟಿಯವರ ಪತ್ತೆಗಾಗಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದಲ್ಲದೇ ವಿವಿದೆಡೆ ಹುಡುಕಾಟ ನಡೆಸಿದ್ದರೂ ಕೂಡ ಯಾವುದೇ ಪೂರಕ ಮಾಹಿತಿ ಸಿಕ್ಕಿರಲಿಲ್ಲ.

ತಾಯಿ ಹುಡುಕಾಟಕ್ಕೆ ಮಗನ ಶ್ರಮ…
ತಾಯಿಯನ್ನು ಹುಡುಕಿಕೊಟ್ಟವರಿಗೆ ರೂ.1ಲಕ್ಷ ಬಹುಮಾನ ನೀಡುವುದಾಗಿ ಅವರ ಪುತ್ರ ಅಮೆರಿಕಾದಲ್ಲಿ ಟೆಕ್ಕಿಯಾಗಿರುವ ಸತೀಶ್ ಶೆಟ್ಟಿ ಘೋಷಿಸಿದ್ದಲ್ಲದೇ ತಾಯಿಯ ಹುಡುಕಾಟದ ಸಲುವಾಗಿ ಹಲವು ಬಾರಿ ಊರಿಗೆ ಆಗಮಿಸಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ, ತಾಯಿ ಹೆಸರಿನಲ್ಲಿ ಒಂದು ವೆಬ್ ಸೈಟ್, ತಾಯಿಯ ಚಿತ್ರವಿರುವ ಭಿತ್ತಿ ಪತ್ರಗಳನ್ನು ರಾಜ್ಯ ಹಾಗೂ ವಿವಿಧ ರಾಜ್ಯಗಳಲ್ಲಿ ಹಚ್ಚುವ ಮೂಲಕ ಪತ್ತೆಗೆ ಮನವಿ ಮಾಡಿಕೊಂಡಿದ್ದರು. ಅಮೆರಿಕಾದಲ್ಲಿದ್ದುಕೊಂಡೆ ಉಡುಪಿಗೆ ಈವರೆಗೆ ಬಂದ ಎಸ್ಪಿ ಸೇರಿದಂತೆ ಅಧಿಕಾರಿಗಳ ಜೊತೆ ಸಂಪರ್ಕವಿಟ್ಟುಕೊಂಡು ತಾಯಿಯ ಪತ್ತೆಗಾಗಿ ಮನವಿ ಮಾಡಿಕೊಂಡು ಬಂದಿದ್ದಾರೆ.

(ಮಾಲತಿ ಶೆಟ್ಟಿ ಪುತ್ರ ಸತೀಶ್ ಶೆಟ್ಟಿ)

ಟ್ವಿಸ್ಟ್ ಕೊಟ್ಟ ತಳ್ಳಿ ಅರ್ಜಿ..!
ಇನ್ನು ಮಾಲತಿ ಶೆಟ್ಟಿ ನಿಗೂಢ ನಾಪತ್ತೆ ವಿಚಾರವಾಗಿ ಹೈಕೋರ್ಟ್‌ನಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಲಾಗಿತ್ತು. ಪೊಲೀಸರು ಈ ಬಗ್ಗೆ ತಮ್ಮ ತನಿಖೆಯ ಆಯಾಮ, ಪ್ರಗತಿ ಸೇರಿದಂತೆ ವಿವಿಧ ದಾಖಲೆಗಳನ್ನು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಮಾಲತಿಯವರ ನಾಪತ್ತೆಗೆ ಸಂಬಂಧಿಸಿ 2015ರಲ್ಲಿ ಅನಾಮಧೇಯ ತಳ್ಳಿ ಅರ್ಜಿಯೊಂದು ಪ್ರಮುಖ ಪಾತ್ರವಹಿಸಿದೆ. ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಆದೇಶಿಸಿದೆ. ತಳ್ಳಿಅರ್ಜಿಯಲ್ಲಿ 6 ಮಂದಿ ದುಷ್ಕರ್ಮಿಗಳು ಚಿನ್ನಾಭರಣಕ್ಕಾಗಿ ಮಹಿಳೆಯನ್ನು ಕೊಂದು ಸುಟ್ಟುಹಾಕಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಸದ್ಯ ಹೈಕೋರ್ಟ್‌ ಆದೇಶದಂತೆ ಕೊಲೆ ಪ್ರಕರಣ ದಾಖಲುಗೊಂಡಿದ್ದು ತನಿಖೆ ಮುಂದುವರಿದಿದ್ದು ತನಿಖಾಧಿಕಾರಿ ಕುಂದಾಪುರ ಸಿಪಿಐ ಮಂಜಪ್ಪ ಕೊರ್ಗಿಯ ಮಾಲತಿ ಶೆಟ್ಟಿ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಕೆಲ ಮಾಹಿತಿ ಪಡೆದಿದ್ದಾರೆ. ಕೊರ್ಗಿ ನಿವಾಸಿಗ್ಳಾದ ಹರ್ಷ, ಹುಲಿಯಾ, ಗೋಪಾಲ್, ದಿನೇಶ, ಸಂದೀಪ, ಹಾಗೂ ಪ್ರದೀಪ್ ವಿರುದ್ಧ ಕೇಸ್ ದಾಖಲಾಗಿದೆ.

ಹೆತ್ತ ತಾಯಿಯ ನಿಗೂಢ ನಾಪತ್ತೆ ದಿನದಿಂದಲೂ ನಾವು ಬಹಳಷ್ಟು ನೊಂದಿದ್ದೇವೆ. ಮನಸ್ಸಿಗೆ ನೆಮ್ಮದಿಯಿಲ್ಲ. ಅವರಿಗೆ ಏನಾಗಿರಬಹುದೆಂಬ ಆತಂಕದಲ್ಲಿಯೇ ನಾವು ದಿನಕಳೆಯುತ್ತಿದ್ದೇವೆ. ಈ ನಡುವೆ ಅನಾಮಧೇಯ ಪತ್ರವೊಂದು ಬಂದಿದ್ದು ಇದೀಗಾ ಕೊಲೆ ಕೇಸು ದಾಖಲಾಗಿದೆ. ಹಣಕ್ಕಾಗಿ ಇಂತಹ ಹೀನ ಕೆಲಸವನ್ನು ಮಾಡುವರಿದ್ದಾರೆಯೇ ಎಂಬುದು ನೋವು ತಂದಿದೆ. ನ್ಯಾಯಾಲಯದ ಆದೇಶದಂತೆ ಪ್ರಕರಣದಲ್ಲಿ ಉಲ್ಲೇಕವಾಗಿರುವ ಅಷ್ಟು ಅರೋಪಿಗಳ ಸಮಗ್ರ ವಿಚಾರಣೆ ನಡೆಯಬೇಕು. ಪೊಲೀಸ್ ತನಿಖೆಯ ಮೇಲೆ ವಿಶ್ವಾಸವಿಟ್ಟಿದ್ದೇವೆ. ಈ ಪ್ರಕರಣವನ್ನು ಭೇಧಿಸಿ ನಮಗೆ ಸೂಕ್ತ ನ್ಯಾಯ ಕೊಡಿಸುವ ಮತ್ತು ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ನೀಡುವ ಭರವಸೆಯಲ್ಲಿದ್ದೇವೆ. ಈ ಕುರಿತು ಹಿರಿಯ ಅಧಿಕಾರಿಗಳ ಜೊತೆಯೂ ಮಾತನಾಡಿರುವೆ. ಪ್ರಕರಣದ ಕುರಿತು ಲೋಕಾಯುಕ್ತ ನ್ಯಾಯಮೂರ್ತಿಗಳ ಗಮನಕ್ಕೂ ತರಲಿದ್ದೇನೆ.
– ಸತೀಶ್ ಶೆಟ್ಟಿ (ಮಾಲತಿ ಶೆಟ್ಟಿ ಪುತ್ರ)

ಮಾಲತಿ ಶೆಟ್ಟಿ ನಿಗೂಢ ನಾಪತ್ತೆ ಪ್ರಕರಣದಲ್ಲಿ ಅಂದಿನ ಪೊಲೀಸರು ಬೇಜವಬ್ದಾರಿ ತನಿಖೆ ನಡೆಸಿದ್ದೇ ಈ ಪ್ರಕರಣ ಹಳ್ಳಹಿಡಿಯಲು ಕಾರಣವಾಗಿದೆ. ಈ ಬಗ್ಗೆ ಮಾನ್ಯ ಉಚ್ಚ ನ್ಯಾಯಾಲಯವು ಕೂಡ ಅವರನ್ನು ತರಾಟೆಗೆತ್ತಿಕೊಂಡಿದೆ. ಅಂದು ಘಟನೆ ನಡೆದ ಬಳಿಕ ಅನಾಮಧೇಯ ಪತ್ರವೊಂದು ಬಂದಿತ್ತು. ಅದರ ಆಧಾರದಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಸಮಗ್ರವಾದ ತನಿಖೆ ನಡೆಸಿದ್ದರೇ ಈ ಪ್ರಕರಣವನ್ನು ಬಯಲು ಮಾಡಲು ಸುಲಭವಾಗುತ್ತಿತ್ತು. ಆದರೆ ಪೊಲೀಸರು ಕೇವಲ ನಾಪತ್ತೆ ಪ್ರಕರಣವಾಗಿಯೇ ಅದನ್ನು ಹಗುರವಾಗಿ ಪರಿಗಣಿಸಿದ್ದರಿಂದ ಕೇಸು ಒಂದು ಹಂತ ತಲುಪಿಲ್ಲ. ಇದೀಗಾ ಹೈಕೋರ್ಟ್ ಕೊಲೆ ಪ್ರಕರಣ ದಾಖಲಿಸಿಕೊಳ್ಳುವಂತೆ ಆದೇಶಿಸಿದ ಹಿನ್ನೆಲೆ ಇದೀಗಾ ಮತ್ತೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
-ಎಚ್. ಪವನಚಂದ್ರ ಶೆಟ್ಟಿ (ಹೈಕೋರ್ಟ್ ವಕೀಲರು)

(ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ:

ಕುಂದಾಪುರ: ಐದು ದಿನವಾದ್ರೂ ನಿಗೂಢವಾಗಿ ನಾಪತ್ತೆಯಾದ ಮಾಲತಿ ಶೆಟ್ಟಿ ಸುಳಿವು ಅಲಭ್ಯ

‘ಅಮ್ಮಾ ನೀ ಎಲ್ಲಿರುವೆ’? ಕುಂದಾಪುರ ಮಾಲತಿ ಶೆಟ್ಟಿ ಪತ್ತೆಗೆ ಕೋರಿ ಹೈಕೋರ್ಟಿಗೆ ಅಮೇರಿಕಾದಿಂದ ಪುತ್ರನ ಅರ್ಜಿ

ಕೊರ್ಗಿ ಮಾಲತಿ ಶೆಟ್ಟಿ ನಾಪತ್ತೆ ಪ್ರಕರಣ ಮೂರು ವಾರ ಕಳೆದರೂ ಇನ್ನೂ ನಿಗೂಢ..! ಕಂಗಾಲಾಗಿರುವ ಕುಟುಂಬ

ಕೊರ್ಗಿ ಮಾಲತಿ ಶೆಟ್ಟಿ ನಿಗೂಢ ನಾಪತ್ತೆ ; ಹುಡುಕಿಕೊಟ್ಟವರಿಗೆ 1 ಲಕ್ಷ ಬಹುಮಾನ

ಕೊರ್ಗಿ ಮಾಲತಿ ಶೆಟ್ಟಿ ನಾಪತ್ತೆ ಪ್ರಕರಣಕ್ಕೆ 1 ವರ್ಷ 1 ತಿಂಗಳು; ತಾಯಿಯ ಹುಡುಕಾಟದ ಹೋರಾಟದಲ್ಲಿ ಪುತ್ರ

ನಿಗೂಢವಾಗಿ ನಾಪ್ತತೆಯಾದ ಕೊರ್ಗಿ ಮಾಲತಿ ಶೆಟ್ಟಿ ಮನೆಗೆ ಉಡುಪಿ ಎಸ್ಪಿ ಅಣ್ಣಾಮಲೈ ಭೇಟಿ; ಮನೆಮಂದಿ ವಿಚಾರಣೆ

 

Comments are closed.