ಕನ್ನಡ ವಾರ್ತೆಗಳು

‘ಅಮ್ಮಾ ನೀ ಎಲ್ಲಿರುವೆ’? ಕುಂದಾಪುರ ಮಾಲತಿ ಶೆಟ್ಟಿ ಪತ್ತೆಗೆ ಕೋರಿ ಹೈಕೋರ್ಟಿಗೆ ಅಮೇರಿಕಾದಿಂದ ಪುತ್ರನ ಅರ್ಜಿ

Pinterest LinkedIn Tumblr

* ಮಾಲತಿ ಶೆಟ್ಟಿ ನಾಪತ್ತೆಗೆ ಐದು ತಿಂಗಳು
* ಮಾಲತಿ ಅವರ ಪುತ್ರನಿಂದ ಹೇಬಿಯಸ್ ಕಾರ್ಪಸ್ ಅರ್ಜಿ *ಹೈಕೋರ್ಟಿನಲ್ಲಿ ಅರ್ಜಿ ದಾಖಲಿಸಿದ ಟೆಕ್ಕಿ
* ಪೊಲೀಸ್ ತನಿಖೆ ಬಗ್ಗೆ ಅಸಮಾಧಾನ..?

ಉಡುಪಿ: ಐದು ತಿಂಗಳ ಹಿಂದೆ ತನ್ನ ಮನೆಯಿಂದ ನಿಗೂಢವಾಗಿ ನಾಪತ್ತೆಯಾದ ಕುಂದಾಪುರ ತಾಲೂಕಿನ ಕೊರ್ಗಿ ಎಂಬ ಪುಟ್ಟ ಗ್ರಾಮದ ಮಾಲತಿ ಬಿ. ಶೆಟ್ಟಿ (65)ಇನ್ನೂ ಪತ್ತೆಯಾಗಿಲ್ಲ. ಆಕೆಯ ಪತ್ತೆಗಾಗಿ ಅಮೇರಿಕಾದಲ್ಲಿನ ಮಗ ಊರಿಗೆ ಬಂದು ಕೈಯಲ್ಲಾದಷ್ಟು ಹುಡುಕಾಟ ನಡೆಸಿದ್ದೂ ಆಯ್ತು, ಅಲೆದಿದ್ದು ಆಯ್ತು. ಆದರೇ ಏನು ಪ್ರಯೋಜನವೂ ಆಗಿಲ್ಲ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿ ಸತತ ಹುಡುಕಾಟ ನಡೆಸಿದರೂ ಕೂಡ ಪಲಿತಾಂಶ ಮಾತ್ರ ಶೂನ್ಯವೇ ಆಗಿದೆ. ಐದು ತಿಂಗಳ ಬಳಿಕವೂ ತನ್ನ ತಾಯಿ ಸುಳಿವಿಲ್ಲ ಎಂಬ ನಿಟ್ಟಿನಲ್ಲಿ ಆಕೆಯ ಮಗ ಸದ್ಯ ಹೈಕೋರ್ಟ್ ಮೆಟ್ಟಿಲೇರಿದ್ದು ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸುವ ಮೂಲಕ ತಾಯಿಯನ್ನು ಹುಡುಕಿಕೊಡುವಂತೆ ಮನವಿಯಿತ್ತಿದ್ದಾರೆ.

Korgi Malathi Shetty_Missing_Case

ನಿಗೂಢವಾಗಿ ನಾಪತ್ತೆಯಾದ ಮಾಲತಿ ಶೆಟ್ಟಿ ಅವರ ಪುತ್ರ ಸತೀಶ್ ಶೆಟ್ಟಿ ತಮ್ಮ ಬಾವ ರಾಮಮನೋಹರ ಶೆಟ್ಟಿ ಮೂಲಕವಾಗಿ ಹೈಕೋರ್ಟಿಗೆ ಹೇಬಿಯಸ್ ಕಾರ್ಪಸ್ ದಾಖಲಿಸಿದವರು. ಸದ್ಯ ಅಮೇರಿಕಾದ ಕಂಪೆನಿಯಲ್ಲಿ ಸಿ.ಇ.ಓ. ಆಗಿರುವ ಸತೀಶ್ ಶೆಟ್ಟಿ ತಾಯಿಯನ್ನು ಹುಡುಕಾಡಲು ಪಟ್ಟ ಪರಿಪಾಡಲು ಅಷ್ಟಿಷ್ಟಲ್ಲ.

ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಚ್‌. ಬಿಳ್ಳಪ್ಪ ಮತ್ತು ಕೆ.ಎನ್‌.ಫ‌ಣೀಂದ್ರ ಅವರಿದ್ದ ವಿಭಾಗೀಯ ಪೀಠ, ಮಾಲತಿ ಶೆಟ್ಟಿ ಅವರ ಹುಡುಕಾಟಕ್ಕೆ ಸಂಬಂಧಿಸಿದ ಪ್ರಗತಿ ವರದಿ ಸಲ್ಲಿಸುವಂತೆ ರಾಜ್ಯ ಗೃಹ ಇಲಾಖೆ, ಕುಂದಾಪುರ ಪೊಲೀಸ್‌ ಠಾಣೆ ಮತ್ತು ಪಶ್ಚಿಮ ವಿಭಾಗದ ಐಜಿಪಿ ಅಮ್ರತಪಾಲ್ ಅವರಿಗೂ ನಿರ್ದೇಶನ ನೀಡಿದೆ.

ಮಾಲತಿ ಶೆಟ್ಟಿ ನಿಗೂಢ ನಾಪತ್ತೆ:
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊರ್ಗಿ ಎಂಬ ಪುಟ್ಟ ಗ್ರಾಮದ ತನ್ನ ಮನೆಯಲ್ಲಿ ನೆಲೆಸಿದ್ದ ಮಾಲತಿ ಬಿ.ಶೆಟ್ಟಿ (65) ಅವರು 2015ರ ಜೂನ್‌ 24 ರಂದು ಮಧ್ಯಾಹ್ನ ಊಟದ ಬಳಿಕ ಮನೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಮಾಲತಿ ಶೆಟ್ಟಿ ವಾಪಾಸ್ಸಾಗಬಹುದೆಂಬ ನಿಟ್ಟಿನಲ್ಲಿ ಒಂದೆರಡು ದಿನ ಅಲ್ಲಿಲ್ಲಿ ಹುಡುಕಾಟ ನಡೆಸಿದ ಕುಟುಂಬಿಕರು ಕೊನೆಗೆ ದಾರಿಕಾಣದೇ ಜೂನ್‌ 26ರಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಾರೆ. ಇತ್ತ ತಾಯಿ ಕಣ್ಮರೆಯ ಒಂದೆರಡು ದಿನಗಳ ಹಿಂದಷ್ಟೇ ಅಮೇರಿಕಾಗೆ ತೆರಳಿದ್ದ ಸತೀಶ್ ಶೆಟ್ಟಿ ತಾಯಿ ನಾಪತ್ತೆಯಾದ ಸುದ್ದಿ ಕೇಳಿ ದಿಡೀರನೇ ಮತ್ತೆ ಊರಿನತ್ತ ಬರುತ್ತಾರೆ. ಅಷ್ಟೇ ಅಲ್ಲದೇ ಉಡುಪಿ ಎಸ್ಪಿ ಅಣ್ಣಾಮಲೈ ಅವರನ್ನು ತುರ್ತು ಭೇಟಿ ಮಾಡಿ ವಿಚಾರಗಳನ್ನು ತಿಳಿಸಿ ತಾಯಿಯ ಪತ್ತೆಗಾಗಿ ಮನವಿಯನ್ನು ನೀಡುತ್ತಾರೆ.

Sp Annamalai_Visit Malathi Shetty_House (5) Sp Annamalai_Visit Malathi Shetty_House (7) Sp Annamalai_Visit Malathi Shetty_House (3) Korgi Malathi Shetty_Missing_Case (2)

(ಸಂಗ್ರಹ ಚಿತ್ರಗಳು)

ಪೊಲೀಸರ ತನಿಖೆಯ ಜಾಡು:
ಇತ್ತ ಉಡುಪಿ ಎಸ್ಪಿ ಅಣ್ಣಾಮಲೈ ಅವರು ಕೊರ್ಗಿಯ ಮಾಲತಿ ಶೆಟ್ಟಿ ನಿವಾಸಕ್ಕೆ ಬಂದು ಸೂಕ್ತ ಮಾಹಿತಿ ಪಡೆದು ತನಿಖೆಯನ್ನು ಚುರುಕುಗೊಳಿಸಲು ಕುಂದಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ದಿವಾಕರ್ ಪಿ.ಎಂ. ಅವರಿಗೆ ಸೂಚಿಸಿದ್ದು ಕುಂದಾಪುರ ಎಸ್ಸೈ ನಾಸೀರ್ ಮೊದಲಾದವರ ನೇತ್ರತ್ವದಲ್ಲಿ ಸತತ ವಿಚಾರಣೆ, ತನಿಖೆಗಳು ನಡೆಯುತ್ತದೆ. ಕೆಲವು ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಿಸಿದರೂ ಕೂಡ ಮಾಲತಿ ಶೆಟ್ಟಿ ಸುಳಿವೂ ನಿಗೂಢವಾಗಿಯೇ ಉಳಿಯುತ್ತದೆ. ಮಾಲತಿ ಶೆಟ್ಟಿ ಜೊತೆಗೆ ಆಪ್ತತೆಯಿಂದಿದ್ದ ಮನೆ ಸಮೀಪದ ಕೆಲವರು, ಮನೆ ಕೆಲಸದವರು, ಊರಿನವರ ವಿಚಾರಣೆಯನ್ನು ನಡೆಸಿದಾಗಲೂ ಯಾವುದೇ ಮಾಹಿತಿಗಳು ಪೊಲೀಸರಿಗೆ ಲಭ್ಯವಾಗುವುದಿಲ್ಲ. ಇನ್ನು ಮಾಲತಿ ಶೆಟ್ಟಿಯವರು ಕೆಲವೊಮ್ಮೆ ಹೇಳದೇ ಕೇಳದೇ ಮನೆಯಿಂದ ಹೊರಹೋಗುವ ಮಾಹಿತಿಯಂತೆ ಆ ದಿಕ್ಕಿನಲ್ಲಿಯೂ ತನಿಖೆ ಮುಂದುವರಿಯುತ್ತದೆ ಅಲ್ಲದೇ ಅವರು ಹೆಚ್ಚಾಗಿ ತೆರಳುತ್ತಿದ್ದ ಸ್ಥಳಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ ಮತ್ತು ಶ್ರಂಗೇರಿ ಸೇರಿದಂತೆ ಹಲವು ದೇವಸ್ಥಾನಗಳಿಗೂ ಭೇಟಿ ನೀಡಿ ವಿಚಾರಣೆ ನಡೆಸಿದಾಗಲೂ ಪಲಿತಾಂಶ ಶೂನ್ಯವಾಗುತ್ತದೆ. ಅಗ್ನಿಶಾಮಕದಳದವರು ಬಂದು ಮನೆ ಸುತ್ತಮುತ್ತಲಿನ ಕೆರೆ ಹಾಗೂ ಬಾವಿಗಳನ್ನು ಹುಡುಕಾಡುತ್ತಾರೆ, ಶ್ವಾನದಳವೂ ಆಗಮಿಸಿ ಪರಿಶೀಲನೆ ನಡೆಸುತ್ತದೆ. ಇನ್ನು ವಾಟ್ಸಾಪ್ ಮೊದಲಾದ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಮಾಲತಿ ಶೆಟ್ಟಿ ಅವರ ಪತ್ತೆಗೆ ಮನವಿಯನ್ನಿಡುತ್ತಾರೆ. ಆರಂಭದ ತನಿಖೆಯ ವೇಳೆ ಮಾಲತಿ ಶೆಟ್ಟಿ ಅಲ್ಲಿದ್ದಾರೆ-ಇಲ್ಲಿದ್ದಾರೆಂಬ ಊಹಾಪೋಹದ ಸುದ್ದಿಗಳು ಪೊಲೀಸರನ್ನು ದಿಕ್ಕುತಪ್ಪುವಂತೆಯೂ ಮಾಡಿದ್ದು ಮಾತ್ರ ಸುಳ್ಳಲ್ಲ.

Korgi Malathi shetty_Son_Sathish shetty (1) Korgi Malathi shetty_Son_Sathish shetty (2)

ಪುತ್ರನಿಂದ ಹುಡುಕಾಟಕ್ಕೆ ಹರಸಾಹಸ
ಮಾಲತಿ ಶೆಟ್ಟಿ ನಿಗೂಢ ಕಣ್ಮರೆಯಿಂದ ಪುತ್ರ ಸತೀಶ್ ಶೆಟ್ಟಿ ಹಾಗೂ ಕುಟುಂಬ ಕಂಗಾಲಾಗಿದ್ದಾರೆ. ಸತೀಶ್ ಶೆಟ್ಟಿ ಅವರು ತಾಯಿಯ ಹುಡುಕಾಟ ಪ್ರಯತ್ನಕ್ಕೆ ಅನುಕೂಲಕರವಾಗುವಂತೆ WWW.MOMMSSING.ORG ಎಂಬ ವೆಬ್‌ಸೈಟ್‌ ಆರಂಭಿಸಿ ಅದರಲ್ಲಿ ತಾಯಿ ಮಾಲತಿ ಶೆಟ್ಟಿ ಪೋಟೋ ಸಹಿತ ಎಲ್ಲಾ ವಿವರಗಳು, ಪೊಲೀಸರ ತನಿಖೆ, ಮಾಧ್ಯಮಗಳ ವರದಿಯನ್ನು ಅಪ್-ಲೋಡ್ ಮಾಡುತ್ತಾರೆ. ಅಲ್ಲದೇ ಭಿತ್ತಿಪತ್ರಗಳನ್ನು ಮುದ್ರಿಸಿ ರಾಜ್ಯಾದ್ಯಂತ ಅದನ್ನು ಜನ ಓದುವಂತೆ ಮಾಡುವ ಕಾರ್ಯವನ್ನು ಮಾಡುತ್ತಾರೆ. ಅಲ್ಲದೇ ತಾಯಿ ಮಾಲತಿ ಶೆಟ್ಟಿ ಅವರನ್ನು ಹುಡುಕಿಕೊಟ್ಟಲ್ಲಿ 1 ಲಕ್ಷ ಬಹುಮಾನವನ್ನು ನೀಡುವುದಾಗಿ ಘೋಷಿಸುತ್ತಾರೆ ಆದರೇ ತಾಯಿ ಸುಳಿವೂ ಮಾತ್ರ ಅಲಭ್ಯವಾಗಿದೆ.

ಪೊಲೀಸರ ಮೇಲೆ ನಂಬಿಕೆ ಕಳೆದುಕೊಂಡ್ರಾ..?
ಕೊನೆಗೂ ಬೇಸೆತ್ತ ಸತೀಶ್‌ ಶೆಟ್ಟಿ ಅವರು ತಮ್ಮ ಭಾವ ರಾಮ ಮನೋಹರ ಶೆಟ್ಟಿ ಅವರ ಮೂಲಕ ರಾಜ್ಯ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದಾರೆ. ಮಾಲತಿ ಶೆಟ್ಟಿ ಅವರ ಪತ್ತೆಗೆ ಪೊಲೀಸರು ಪರಿಶ್ರಮಿಸುತ್ತಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ ಎಂದು ಮೂಲಗಳು ತಿಳಿಸಿದೆ. ನ್ಯಾಯಾಲಯದ ಮುಂದೆ ಮಾಲತಿ ಶೆಟ್ಟಿ ಅವರನ್ನು ಹಾಜರುಪಡಿಸಲು ಪೊಲೀಸ್‌ ಇಲಾಖೆಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಭಿನ್ನವಿಸಲಾಗಿದೆ.

ಏನಿದು ಹೇಬಿಯಸ್‌ ಕಾರ್ಪಸ್‌
ಹೇಬಿಯಸ್ ಕಾರ್ಪಸ್ ಎನ್ನುವುದು ರಿಟ್‌ ಅರ್ಜಿ ಅಥವಾ ಕಾನೂನು ಪ್ರಕ್ರಿಯೆಯಾಗಿದೆ. ಭಾರತದ ಸಂವಿಧಾನ ವ್ಯವಸ್ಥೆಯಲ್ಲಿರುವ ಐದು ರಿಟ್ ಅರ್ಜಿಗಳ ಪೈಕಿ ಹೇಬಿಯಸ್ ಕಾರ್ಪಸ್ ಕೂಡ ಒಂದಾಗಿದೆ. ಪರಿಚ್ಚೇದ 226ರ ಅಡಿಯಲ್ಲಿ ಇದನ್ನು ಉಚ್ಚನ್ಯಾಯಾಲಯ (ಹೈ ಕೋರ್ಟ್)ದಲ್ಲಿ ಈ ರಿಟ್ ಅರ್ಜಿಯನ್ನು ನೊಂದವರು ಸಲ್ಲಿಸಬಹುದಾಗಿದೆ. ನಾಪತ್ತೆಯಾದ ವ್ಯಕ್ತಿ ಸಿಗದಿರುವುದು, ಕಿಡ್ನಪ್, ಅಕ್ರಮ ಬಂಧನ ಮೊದಲಾದ ಪ್ರಕರಣಗಳಲ್ಲಿ ಯವುದೇ ನ್ಯಾಯ ಸಿಗದ ಪಕ್ಷದಲ್ಲಿ ಈ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನ್ಯಾಯ ವ್ಯವಸ್ಥೆಯಿಂದ ಅಥವಾ ವ್ಯಕ್ತಿಗಳಿಂದ ಕಷ್ಟಕ್ಕೀಡಾಗುವುದನ್ನು ಈ ಹೇಬಿಯಸ್ ಕಾರ್ಪಸ್ ದಾವೆಯು ತಪ್ಪಿಸುತ್ತದೆ.

ಪೊಲೀಸರು ಏನು ಮಾಡಬೇಕು?
ಹೇಬಿಯಸ್ ಕಾರ್ಪಸ್ ಅರ್ಜಿ ತರುವಾಯ ಕೋರ್ಟ್ ಸಂಬಂದಪಟ್ಟ ಇಲಾಖೆಗೆ ವಿವರ ಕೇಳುತ್ತದೆ. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಅಥವಾ ತನಿಖೆ ನಡೆಸುವ ತನಿಖಾಧಿಕಾರಿ ಪ್ರಕರಾದ ಕುರಿತು ಎಲ್ಲಾ ಸಾಕ್ಷ್ಯಗಳೊಂದಿಗೆ ಕೋರ್ಟಿಗೆ ಹಾಜರಾಗಬೇಕು. ಮಾಲತಿ ಶೆಟ್ಟಿ ಪ್ರಕರಣದಲ್ಲಿ ಕೇಸು ದಾಖಲಿಸಿಕೊಂಡ ದಿನದಿಂದ ಆರಂಭಿಸಿ ಐದು ತಿಂಗಳುಗಳ ಸಂಪೂರ್ಣ ಬೆಳವಣಿಗೆಗಳು, ತನಿಖೆಯ ಹಾದಿ, ತನಿಖೆ ನಡೆಸಿದವರ, ವಿಚಾರಣೆಗೊಳಪಡಿಸಿದವರ ವಿವರವನ್ನು ನ್ಯಾಯಾಲಯದ ಮುಂದಿಡಬೇಕಿದೆ.

ವರದಿ- ಯೋಗೀಶ್ ಕುಂಭಾಸಿ

ಇದನ್ನೂ ಓದಿ

ಕೊರ್ಗಿ ಮಾಲತಿ ಶೆಟ್ಟಿ ನಾಪತ್ತೆ ಪ್ರಕರಣ ಮೂರು ವಾರ ಕಳೆದರೂ ಇನ್ನೂ ನಿಗೂಢ..! ಕಂಗಾಲಾಗಿರುವ ಕುಟುಂಬ

ಕೊರ್ಗಿ ಮಾಲತಿ ಶೆಟ್ಟಿ ನಿಗೂಢ ನಾಪತ್ತೆ ; ಹುಡುಕಿಕೊಟ್ಟವರಿಗೆ 1 ಲಕ್ಷ ಬಹುಮಾನ

Malathi Shetty missing case: SP Annamalai visits house of Malathi Shetty, gathers information.

ನಿಗೂಢವಾಗಿ ನಾಪ್ತತೆಯಾದ ಕೊರ್ಗಿ ಮಾಲತಿ ಶೆಟ್ಟಿ ಮನೆಗೆ ಉಡುಪಿ ಎಸ್ಪಿ ಅಣ್ಣಾಮಲೈ ಭೇಟಿ

Write A Comment