ಕುಂದಾಪುರ: ಕುಂದಾಪುರ ತಾಲೂಕಿನ ಆಲೂರು ಗ್ರಾಮದ ಕಳಿಯಲ್ಲಿ ಡಾ. ರಾಜೇಶ್ ಬಾಯರಿ ಹಾಗೂ ಡಾ.ಅನುಲೇಖಾ ಬಾಯರಿ ದಂಪತಿ ನಡೆಸಿಕೊಂಡಿರುವ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯಕ್ಕೆ ಎನ್‌ಎಬಿಎಚ್ ಆಯುಷ್ ಮಾನದಂಡಗಳ ಪ್ರಕಾರ ಮೌಲ್ಯಮಾಪನ ಮಾಡಲ್ಪಟ್ಟಿರುವ ಚಿಕಿತ್ಸಾಲಯ ಎಂಬ ರಾಷ್ಟ್ರೀಯ ಮನ್ನಣೆ ಸಿಕ್ಕಿದೆ.
ದಿಲ್ಲಿಯ ರಾಷ್ಟ್ರೀಯ ಆಸ್ಪತ್ರೆಗಳು ಹಾಗೂ ಆರೋಗ್ಯ ಸೇವೆಗಳ ಮಾನ್ಯತಾ ಮಂಡಳಿ (ನ್ಯಾಶನಲ್ ಆಕ್ರೆಡರೇಷನ್ ಬೋರ್ಡ್ ಫಾರ್ ಹಾಸ್ಪಿಟಲ್ಸ್ ಹಾಗೂ ಹೆಲ್ತ್ ಕೇರ್ ಪ್ರೊವೈಡರ್ಸ್- ಎನ್‌ಎಬಿಎಚ್)ಯ ತಜ್ಞರ ತಂಡ ಆಲೂರಿನ ಚಿತ್ರಕೂಟ ಚಿಕಿತ್ಸಾಲಯಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದೆ. ಅದರಂತೆ ಇಲ್ಲಿ ಉತ್ತಮ ಗುಣಮಟ್ಟದ ಹಾಗೂ ಸುರಕ್ಷತಾ ರೀತಿಯ ಆರೋಗ್ಯ ಸೇವೆ ಕಲ್ಪಿಸುತ್ತಿರುವುದನ್ನು ಪರಿಗಣಿಸಿ ಗುಣಮಟ್ಟದ ಆಸ್ಪತ್ರೆ ಎಂದು ಮಂಡಳಿಯು ಈ ವಿಶೇಷ ಮಾನ್ಯತೆ ನೀಡಿದೆ.
2010ರಲ್ಲಿ ಒಂದು ಬೆಡ್‌ನಿಂದ ಆರಂಭಗೊಂಡ ಚಿಕಿತ್ಸಾಲಯದಲ್ಲಿ ಡಾ.ರಾಜೇಶ್ ಬಾಯರಿ & ಡಾ. ಅನುಲೇಖ ಬಾಯರಿ ದಂಪತಿಯ ವಿಶೇಷ ಕಾಳಜಿಯ ಚಿಕಿತ್ಸೆಯಿಂದಾಗಿ ಇಂದು ಈ ಚಿಕಿತ್ಸಾಲಯ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ರೋಗಿಗಳನ್ನು ಸೆಳೆಯುತ್ತಿದೆ. ಜಗತ್ತಿನ ಸುಮಾರು 25ಕ್ಕೂ ಅಧಿಕ ದೇಶಗಳ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಒಳ ರೋಗಿಗಳಾಗಿ ದಾಖಲಾಗುವ ರೋಗಿಗಳ ಅನುಕೂಲಕ್ಕೆ ಅನುಗುಣವಾಗಿ ಹಂತ ಹಂತವಾಗಿ ಎಲ್ಲಾ ಸೌಲಭ್ಯಗಳನ್ನು ಇಲ್ಲಿ ನೀಡಲಾಗಿದೆ. ಪಂಚಕರ್ಮ, ವಿರೇಚನ, ಗ್ಯಾಸ್‌ಸೈಟ್ರಿಸ್, ಮಾನಸಿಕ ಒತ್ತಡ, ಮೊಣಕಾಲು ನೋವು, ಬೆನ್ನು ನೋವು, ತಲೆನೋವು, ಸೋರ್ಯಾಸಿಸ್, ಕಾಸ್ಮೆಟಿಕ್ಸ್ & ಸ್ಕಿನ್ ಚಿಕಿತ್ಸೆ, ಯೋಗ ಹಾಗೂ ದ್ಯಾನ ಕುಟೀರಗಳಲ್ಲಿ ದ್ಯಾನ ಮಾಡಲು ಸೇರಿದಂತೆ ಎಲ್ಲಾ ವಿಧದ ಆಯುರ್ವೇದದ ಚಿಕಿತ್ಸೆಗೆ ಇಲ್ಲಿ ಅವಕಾಶವಿದೆ. 35ಕ್ಕೂ ಅಧಿಕ ಸಿಬ್ಬಂದಿಗಳು ಇಲ್ಲಿ ಸೇವೆ ಒದಗಿಸುತ್ತಿದ್ದು ಒಂದು ಅತ್ಯುತ್ತಮ ಆಯುರ್ವೇದ ಚಿಕಿತ್ಸಾಲಯವಾಗಿ ಬೆಳೆದು ನಿಂತಿದೆ. ಇಂತಹ ಚಿಕಿತ್ಸಾಲಯಕ್ಕೆ ಇತ್ತೀಚೆಗೆ ಎನ್‌ಎಬಿಎಚ್ ನ ತಂಡ ಆಗಮಿಸಿ ಇಲ್ಲಿನ ಚಿಕಿತ್ಸಾ ಕ್ರಮ, ಔಷಧ, ರೋಗಿಗಳಿಗೆ ಕಲ್ಪಿಸಿರುವ ಸುಸಜ್ಜಿತ ವ್ಯವಸ್ಥೆ, ಸುರಕ್ಷತೆ, ಗುಣಮಟ್ಟ ಸಹಿತ ಎಲ್ಲ ವ್ಯವಸ್ಥೆಗಳನ್ನು ಪರಿಶೀಲಿಸಿತ್ತು. ಒಟ್ಟಾರೆ ಸುಮಾರು 280ಕ್ಕೂ ಮಿಕ್ಕಿ ವಿವಿಧ ರೀತಿಯ ಮಾನದಂಡಗಳನ್ನೆಲ್ಲ ಪರಿಶೀಲಿಸಿದ ನಂತರವೇ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯಕ್ಕೆ ಈ ರಾಷ್ಟ್ರೀಯ ಮಾನ್ಯತೆ ನೀಡಲಾಗಿದೆ.
ದೇಶ- ವಿದೇಶ ಹಾಗೂ ಸ್ಥಳೀಯ ರೋಗಿಗಳನ್ನು ಒಳ ದಾಖಲಾತಿ ಮಾಡಿಕೊಂಡು ಚಿಕಿತ್ಸೆ ನೀಡುವ ಆಯುರ್ವೇದ ಚಿಕಿತ್ಸಾಲಯಗಳ ಪೈಕಿ ಉಡುಪಿ ಜಿಲ್ಲೆಯಲ್ಲಿ ಉದ್ಯಾವರದ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಗೆ ಈ ಮಾನ್ಯತೆ ಹಿಂದೆ ದೊರಕಿತ್ತು. ಅದನ್ನು ಹೊರತುಪಡಿಸಿದರೆ ಈ ರಾಷ್ಟ್ರೀಯ ಗೌರವ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯಕ್ಕೆ ಮಾತ್ರ ದೊರಕಿರುವುದು ವಿಶೇಷವಾಗಿದೆ.

Comments are closed.