ಕರಾವಳಿ

ಉಡುಪಿ ಜಿಲ್ಲಾದ್ಯಂತ ಬಸ್‌ಗಳು, ಕಲ್ಲು-ಮರಳು ಸಾಗಾಟದ ಲಾರಿಗಳ ತಪಾಸಣೆ: ನಿಯಮ ಪಾಲಿಸದವರ ಮೇಲೆ ಕೇಸು ದಾಖಲಿಸಿದ ಪೊಲೀಸರು!

Pinterest LinkedIn Tumblr

ಉಡುಪಿ: ಜಿಲ್ಲಾ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಬಾಗಿಲು ಅಳವಡಿಸದ ಬಸ್‌ಗಳು ಹಾಗೂ ವೇಗನಿಯಂತ್ರಕ (ಸ್ಪೀಡ್ ಗವರ್ನರ್) ಅಳವಡಿಸದ ಲಾರಿಗಳ ವಿರುದ್ಧ ಉಡುಪಿ ಜಿಲ್ಲಾದ್ಯಂತ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು ನಿಯಮ ಪಾಲಿಸದ ಹಲವು ವಾಹನಗಳಿಗೆ ದಂಡ ವಿಧಿಸಲಾಗಿದೆ.

ಬಸ್‌ಗಳಿಗೆ ಬಾಗಿಲು ಅಳವಡಿಸುವಂತೆ ಹಾಗೂ ಮರಳು ಸಾಗಾಟದ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸುವ ಬಗ್ಗೆ ಗಡುವು ನೀಡಲಾಗಿತ್ತು. ಇದೀಗ ಈ ಅವಧಿ ಮುಗಿದ ಹಿನ್ನೆಲೆಯಲ್ಲಿ ಪೊಲೀಸರು ಈ ವಿಶೇಷ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಅದರಂತೆ ಬುಧವಾರ ಜಿಲ್ಲೆಯ ವಿವಿಧೆಡೆ ಪೊಲೀಸರು ಕಾರ್ಯಾಚರಣೆ ನಡೆಸಿ, ಒಟ್ಟು 1100 ಬಸ್‌ಗಳನ್ನು ಪರಿಶೀಲನೆ ನಡೆಸಿದರು. ಇದರಲ್ಲಿ ಬಾಗಿಲು ಅಳವಡಿಸದಿರುವುದು ಸೇರಿದಂತೆ ವಿವಿಧ ನಿಯಮ ಉಲ್ಲಂಘನೆ ಮಾಡಿರುವ ಸುಮಾರು 108 ಬಸ್‌ಗಳಿಗೆ ದಂಡ ವಿಧಿಸಲಾಗಿದೆ ಎಂದು ಎಸ್ಪಿ ಹರಿರಾಂ ಶಂಕ‌ರ್ ತಿಳಿಸಿದ್ದಾರೆ.

ಹಾಗೆಯೇ ಮರಳು, ಕಲ್ಲು ಮಣ್ಣು ಸಾಗಾಟ ಮಾಡುವ ಒಟ್ಟು 1352 ವಾಹನಗಳನ್ನು ಪರಿಶೀಲನೆ ನಡೆಸಿದ್ದು, ಇದರಲ್ಲಿ ಓವ‌ರ್ ಲೋಡ್, ವೇಗ ನಿಯಂತ್ರಕಗಳನ್ನು ಅಳವಡಿಸದಿರುವುದು ಸೇರಿದಂತೆ ವಿವಿಧ ನಿಯಮ ಉಲ್ಲಂಘನೆ ಮಾಡಿರುವ ಸುಮಾರು 56 ವಾಹನಗಳಿಗೆ ದಂಡ ವಿಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜ.29ರಂದು ಮಧ್ಯಾಹ್ನ 3 ಗಂಟೆಗೆ ನಗರ ಬಸ್‌ ಮಾಲೀಕರೊಂದಿಗೆ ಬಸ್ ಸಮಯದ ವಿಚಾರ ಹಾಗೂ ಇತರ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಕರೆದಿದ್ದಾರೆ.

ರಸ್ತೆ ಸಾರಿಗೆ ಪ್ರಾಧಿಕಾರ ಹಾಗೂ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯಿಂದ ತೆಗೆದುಕೊಳ್ಳಲಾದ ತೀರ್ಮಾನಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬಸ್‌ ಹಾಗೂ ಲಾರಿಗಳ ವಿರುದ್ಧ ಕಾರ್ಯಾಚರಣೆಗಳನ್ನು ಹಂತ ಹಂತವಾಗಿ ಮುಂದುವರಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

Comments are closed.