ಹೆಬ್ರಿ: ಮುನಿಯಾಲು ಸಾದು ಸಂತರು ತಪಸ್ಸು ಮಾಡಿದ ಸ್ಥಳವಾಗಿದ್ದು ಇಲ್ಲಿ ರಾಮಕೃಷ್ಣ ಆಚಾರ್ ನಾಗಮಂಡಲ ಹಮ್ಮಿಕೊಂಡಿದ್ದಾರೆ. ನಾಗನ ಆರಾಧನೆ ಅನಂತ ಕಾಲದಿಂದ ಬಂದಿದೆ. ಸಂತಾನ, ಸಂಸಾರಿಕ ಸುಖ, ಶಾಂತಿ, ನೆಮ್ಮದಿ ನಾಗನ ಸೇವೆಯಿಂದ ಲಭಿಸುತ್ತದೆ. ನಾಗನ ಆರಾಧನೆಯಿಂದ ಚರ್ಮ ರೋಗ ನಿವಾರಣೆಯಾಗುತ್ತದೆ. ಸಾಂಸಾರಿಕ ಹಾಗೂ ಕೌಟುಂಬಿಕ ಮನಸ್ತಾಪಗಳಿದ್ದಲ್ಲಿ ಅದು ದೂರವಾಗುತ್ತದೆ ಎಂದು ಮೂಡುಬಿದಿರೆ ಜೈನಮಠದ ಡಾ.ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನುಡಿದರು.

ಅವರು ಮುನಿಯಾಲು ಗೋದಾಮಿನಲ್ಲಿ ನಡೆಯುವ ಏಕಪವಿತ್ರ ಶ್ರೀಮನ್ನಾಗಮಂಡಲದ ಪೂರ್ವಭಾವಿಯಾಗಿ ನಡೆದ ಸಮಾಲೋಚನಾ ಸಭೆ, ಕಚೇರಿ ಉದ್ಘಾಟನೆ ಹಾಗೂ ಆಹ್ವಾನ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ರಾಮಕೃಷ್ಣ ಆಚಾರ್ಯರು ಪ್ರಕೃತಿಯಿಂದ ಪ್ರಕೃತಿಗೆ ಎಂಬ ಕಲ್ಪನೆಯಲ್ಲಿ ನಾಗ ಮಂಡಲ ಹಮ್ಮಿಕೊಂಡಿದ್ದಾರೆ. ಇಡೀ ಜಿಲ್ಲೆಗೆ ಮಾದರಿಯಾಗುವ ರೀತಿಯಲ್ಲಿ ಆಧುನಿಕತೆ, ವಿಜ್ಞಾನ, ಕೃಷಿ, ಪೃಕೃತಿ ಮತ್ತು ಆಧ್ಯಾತ್ಮ ಎಲ್ಲವನ್ನು ಗಮನದಲ್ಲಿರಿಸಿಕೊಂಡು ಅತ್ಯಂತ ಶ್ರದ್ಧೆಯಿಂದ ಅವರು ಸಿದ್ದತೆ ನಡೆಸುತ್ತಿದ್ದು ನಾಗಮಂಡಲ ಯಶಸ್ವಿಯಾಗಿ ನಡೆಯಲಿ ಎಂದು ಆಶೀರ್ವಚಿಸಿದರು.
ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ರಾಮಕೃಷ್ಣ ಆಚಾರ್ಯರು ಉದ್ಯಮವನ್ನು ಮಾಡಿ ಅಲ್ಲಿ ಯಶಸ್ಸು ಕಂಡು ನೆಮ್ಮದಿಗಾಗಿ ಸಾವಯವ ಕೃಷಿಯನ್ನು ಮಾಡುತ್ತಿದ್ದಾರೆ. ಗೋವುಗಳನ್ನು ಸಾಕುತ್ತಾ ತಮ್ಮ ಗೋದಾಮಿನ ಮೂಲಕ ಹತ್ತಾರು ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಅವರು ನಾಗಮಂಡಲ ಹಮ್ಮಿಕೊಂಡಿದ್ದು ಆ ನಾಗ ಮಂಡಲದಲ್ಲಿ ರೈತರನ್ನು ಪ್ರೋತ್ಸಾಹಿಸಬೇಕೆಂಬ ಉದ್ದೇಶದಲ್ಲಿ ರೈತ ಪೀಠ ಪ್ರಶಸ್ತಿ ಕೊಡುತ್ತಿದ್ದಾರೆ. ನಾಗ ಮಂಡಲವನ್ನು ದೊಂದಿ ಬೆಳಕಿನಲ್ಲಿ ಮಾಡಿಸುತ್ತಿದ್ದಾರೆ. ಸ್ಥಳಿಯರು ಸೇರಿದಂತೆ ಎಲ್ಲರೊಂದಾಗಿ ಈ ನಾಗಮಂಡಲಕ್ಕೆ ಬೆಂಬಲ ನೀಡೋಣ ಎಂದರು.
ಸಂಜೀವಿನಿ ಫಾರ್ಮ್ ಗೋದಾಮದ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್ಯ ಮಾತನಾಡಿ, ನಾವೆಲ್ಲ ಸೈಟು, ಪ್ಲಾಟು, ಬ್ಯುಸಿನೆಸ್ ಎಂದು ಹಣದ ಹಿಂದೆ ಹೋಗಿದ್ದೇವೆ. ಪೃಕೃತಿಯನ್ನು ಹಾಳು ಮಾಡಿದ್ದು ಮುಂದೆ ಅದೇ ನಮಗೆ ಶಾಪವಾಗಿ ಪರಿಣಮಿಸಲಿದೆ. ಪೃಕೃತಿಯೇ ದೇವರು ಎಂಬುದನ್ನು ನಾವು ಮರೆಯಬಾರದು. ನಮ್ಮ ಮಕ್ಕಳಿಗೆ ಪೃಕೃತಿಯನ್ನು ಬೆಳೆಸುವ, ಆರಾಧಿಸುವ ಬಗ್ಗೆ ತಿಳಿ ಹೇಳಬೇಕು. ಗೋ ಆಧಾರಿತ ಕೃಷಿಯ ಬಗ್ಗೆಯೂ ಹೇಳಬೇಕು. ಮನುಷ್ಯರ ಜೀವನ ಶೈಲಿ ಹಾಳಾಗಿದ್ದು ಅದನ್ನು ಸರಿಪಡಿಸಿಕೊಳ್ಳಬೇಕು. ಪ್ರಕೃತಿಯ ಆರಾಧನೆಯ ಭಾಗವಾಗಿ ಕೊರಂಗ್ರಪಾಡಿಯ ವಿದ್ವಾನ್ ಕೆ.ಪಿ.ಕುಮಾರಗುರು ತಂತ್ರಿಗಳ ಮಾರ್ಗದರ್ಶನದಲ್ಲಿ ಏಕಪವಿತ್ರ ನಾಗ ಮಂಡಲ ಹಮ್ಮಿಕೊಂಡಿದ್ದು ಇದಕ್ಕೆ ಎಲ್ಲರೂ ಬೆಂಬಲ ನೀಡಿ ಪ್ರೋತ್ಸಾಹಿಸುವಂತೆ ಕೋರಿಕೊಂಡರು.
ವೇದಿಕೆಯಲ್ಲಿ ಶ್ರೀಮತಿ ಸವಿತಾ ರಾಮಕೃಷ್ಣ ಆಚಾರ್, ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಕೇಶ್ ಶೆಟ್ಟಿ, ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಅಮೀನ್ ಉಪಸ್ಥಿತರಿದ್ದರು. ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ ಸಾಣೂರುಗುತ್ತು ದೇವಿ ಪ್ರಸಾದ್ ಶೆಟ್ಟಿ ನಾಗಮಂಡಲ ಉಪ ಸಮಿತಿಗಳ ವಿವರ ನೀಡಿ ವಂದಿಸಿದರು. ಶ್ರೀಕಾಂತ್ ಶೆಟ್ಟಿ ಸ್ವಾಗತಿಸಿ, ಪುರೋಹಿತ್ ದಾಮೋದರ ಶರ್ಮಾ ನಿರೂಪಿಸಿದರು.
Comments are closed.