ಕನ್ನಡ ವಾರ್ತೆಗಳು

ಕೊರ್ಗಿ ಮಾಲತಿ ಶೆಟ್ಟಿ ನಾಪತ್ತೆ ಪ್ರಕರಣ ಮೂರು ವಾರ ಕಳೆದರೂ ಇನ್ನೂ ನಿಗೂಢ..! ಕಂಗಾಲಾಗಿರುವ ಕುಟುಂಬ

Pinterest LinkedIn Tumblr

Korgi Malathi Shetty_Missing_Case. (1)

ಕುಂದಾಪುರ: ತಾಲೂಕು ತೆಕ್ಕಟ್ಟೆ ಸಮೀಪದ ಕೊರ್ಗಿ ಚಾರುಕೊಟ್ಟಿಗೆ ನಿವಾಸಿ ನಿವೃತ್ತ ಶಿಕ್ಷಕ ಭಾಸ್ಕರ ಶೆಟ್ಟಿ ಅವರ ಪತ್ನಿ ಮಾಲತಿ ಶೆಟ್ಟಿ (65) ನಾಪತ್ತೆಯಾಗಿ 22 ದಿನಗಳು ಕಳೆದರೂ ಕೂಡಾ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.

ಜೂ.24ರಂದು ಮಧ್ಯಾಹ್ನ 1.30ರ ಸುಮಾರಿಗೆ ತನ್ನ ಮನೆಯಿಂದ ಊಟ ಮಾಡಿ, ಮತ್ತೆ ಅಕ್ಕಿ ತೊಳೆದು ಅನ್ನಕ್ಕಿಟ್ಟು ಮನೆಯಿಂದ ಹೊರಗಡೆ ಬಂದಿರುವುದನ್ನು ನೋಡಿದವರಿದ್ದಾರೆ. ಸಮೀಪದ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಇವರು ಮತ್ತೆ ಮನೆಗೆ ಮರಳದೇ ನಿಗೂಢವಾಗಿ ನಾಪತ್ತೆಯಾಗಿದ್ದು ಅವರ ಸುಳಿವು ಇನ್ನೂ ಅಲಭ್ಯವಾಗಿದೆ. ಮಾಲತಿಯವರ ನಿಗೂಢ ಕಣ್ಮರೆಯಿಂದಾಗಿ ಅವರ ಕುಟುಂಬ ಕಂಗಾಲಾಗಿದೆ.

Korgi Malathi Shetty_Missing_Case Korgi Malathi Shetty_Missing_Case (2) Korgi Malathi Shetty_Missing_Case (7) Korgi Malathi Shetty_Missing_Case (3) Korgi Malathi Shetty_Missing_Case (5) Korgi Malathi Shetty_Missing_Case (6) Korgi Malathi Shetty_Missing_Case. Korgi Malathi Shetty_Missing_Case. (4) Korgi Malathi Shetty_Missing_Case. (3) Korgi Malathi Shetty_Missing_Case. (6) Korgi Malathi Shetty_Missing_Case. (7) Korgi Malathi Shetty_Missing_Case. (8) Korgi Malathi Shetty_Missing_Case. (2) Korgi Malathi Shetty_Missing_Case. (5) Korgi Malathi Shetty_Missing_Case (8) Korgi Malathi Shetty_Missing_Case (4) Korgi Malathi Shetty_Missing_Case (1) Korgi Malathi Shetty_Missing_Case. (9) Korgi Malathi Shetty_Missing_Case. (4)

ಲಕ್ಷಾಂತರ ಮೌಲ್ಯದ ಬಂಗಾರ ಧರಿಸಿದ್ದರು
ಕೊರ್ಗಿಯ ಮಾಲತಿ ಶೆಟ್ಟಿ ಅವರು ಅವರು ಮನೆಯಿಂದ ತೆರಳುವ ದಿನದಂದು ಕೂಡಾ ನಾಲ್ಕು ಚಿನ್ನದ ಬಳೆಗಳು, ಚಿನ್ನದ ಕರಿಮಣಿ, ಮೂಗೂತಿ, ಬೆಂಡೋಲೆ ಹಾಗೂ ಉಂಗುರ ಸೇರಿಂದತೆ ಅಂದಾಜು 3.5 ಲಕ್ಷ ಮೌಲ್ಯದ ಆಭರಣ ಧರಿಸಿದ್ದರು. ನಿತ್ಯವೂ ಮನೆಯಲ್ಲಿರುವಾಗ ಆಭರಣ ಧರಿಸುವ ಪರಿಪಾಠವನ್ನು ಇವರು ಇಟ್ಟುಕೊಂಡಿದ್ದರು. ಯಾರೋ ಆಗಂತುಕರು ಮಾಲತಿ ಶೆಟ್ಟಿಯವರು ಧರಿಸಿದ್ದ ಚಿನ್ನಕ್ಕಾಗಿ ಅವರನ್ನು ಅಪಹರಿಸಿರಬಹುದೇ ಎನ್ನುವ ಅನುಮಾನಗಳು ಕಾಡತೊಡಗಿವೆಯಾದರೂ ಎಲ್ಲೆಡೆ ಹುಡುಕಾಟ ನಡೆಸಿದರೂ ಕೂಡಾ ಮಾಲತಿ ಪತ್ತೆಯಾಗಿಲ್ಲ, ಕುರುಹು ಲಭ್ಯವಾಗಿಲಲ್ಲ.

ಪೊಲೀಸರಿಂದ ಸತತ ಹುಡುಕಾಟ
ಮಾಲತಿ ಶೆಟ್ಟಿ ನಿಗೂಢ ಕಣ್ಮರೆ ಕುಂದಾಪುರ ಪೊಲೀಸರಿಗೂ ಕೂಡಾ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಶ್ವಾನದಳ ಆಗಮಿಸಿ ಹುಡುಕಾಟ ನಡೆಸಿದ್ದರು ಯಾವುದೇ ಪ್ರಯೋಜನವೂ ಆಗಿಲ್ಲ. ಕೊರ್ಗಿ ಪರಿಸರದ ಕಾಡು ಹಾಗೂ ನಿರ್ಜನ ಪ್ರದೇಶ ಸೇರಿದಂತೆ ವಿವಿದೆಡೆಯಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ಕುಟುಂಬಿಕರೊಂದಿಗೆ ಪೊಲೀಸರು ಸತತ ಹುಡುಕಾಟವನ್ನು ನಡೆಸಿದ್ದಾರೆ. ನಾಪತ್ತೆಯಾದ ಮಾಲತಿ ಶೆಟ್ಟಿಯವರ ಪೋಟೋ ಚಹರೆಯ ಪೋಸ್ಟರ್‌ಗಳನ್ನು ಎಲ್ಲೆಡೆ ಅಂಟಿಸಿದ್ದಾರೆ ಮತ್ತು ಮಾಧ್ಯಮಗಳಲ್ಲಿ ಮಾಲತಿ ಶೆಟ್ಟಿ ಪತ್ತೆ ಬಗ್ಗೆ ಪ್ರಕಟಣೆ ನೀಡಿದರೂ ಫಲಿತಾಂಶ ಮಾತ್ರ ಶೂನ್ಯವಾಗಿದೆ.

ಕೆರೆ ಬಾವಿಯಲ್ಲಿ ತೀವ್ರ ಹುಡುಕಾಟ
ಈಗಾಗಲೇ ಮನೆಯವರು, ಸ್ಥಳೀಯರು ಸುತ್ತ ಪರಿಸರ ಹಾಡಿ, ಕಾಡುಗಳನ್ನು ಹುಡುಕಾಟ ನಡೆಸಿದ್ದಾರೆ. ಸಮೀಪದ ಕೆರೆ, ಬಾವಿಗಳನ್ನು ತಡಕಾಡಿದ್ದಾರೆ. 22ನೇ ದಿನವಾದ ಸೋಮವಾರ ಅಗ್ನಿಶಾಮಕ ದಳದವರೇ ಖುದ್ಧಾಗಿ ಮನೆ ಸಮೀಪದ ಕೆರೆ, ಸಮೀಪದ ಬಾವಿಗಳನ್ನು ಶೋಧಿಸಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ದುಷ್ಕರ್ಮಿಗಳು ಚಿನ್ನಕ್ಕಾಗಿ ಅಪಹರಿಸಿದ್ದರೂ ಕೂಡಾ ಇಷ್ಟೊಂದು ದಿನದಲ್ಲಿ ಎಲ್ಲಿಯಾದರೂ ಪತ್ತೆ ಆಗಬೇಕಿತ್ತು. ಇನ್ನೂ ಪತ್ತೆ ಆಗದೇ ಇರುವುದು ಮನೆಯವರ ಆತಂಕ ಇನ್ನೂ ಹೆಚ್ಚಿದೆ.

ನಿಮ್ಮ ತಾಯಿ ಬೆಂಗಳೂರಿನಲ್ಲಿದ್ದಾರೆ- ದಾರಿ ತಪ್ಪಿಸಿದ ಕಿಡಿಗೇಡಿ
ನಿಮ್ಮ ತಾಯಿ ಬೆಂಗಳೂರಿನಲ್ಲಿದ್ದಾರೆ, ನೀವು ಬೇಗನೇ ಬಂದು ಕರೆದುಕೊಂಡು ಹೋಗಿಯೆಂದು ವ್ಯಕ್ತಿಯೋರ್ವ ಮಾಲತಿ ಶೆಟ್ಟಿ ಪುತ್ರ ಸತೀಶ ಶೆಟ್ಟಿಗೆ ಬುಧವಾರ ಬೆಳಿಗ್ಗೆ ಕರೆ ಮಾಡಿದ್ದು ಮಾಲತಿ ಕುಟುಂಬಿಕರನ್ನು ದಾರಿತಪ್ಪಿಸುವ ಯತ್ನ ನಡೆಸಿದ್ದಾನೆ. ತಾಯಿಯ ನಿಗೂಢ ಕಣ್ಮರೆಯಿಂದ ಚಿಂತಾಕ್ರಾಂತರಾದ ಸತೀಶ ಶೆಟ್ಟಿ ಬುಧವಾರ ಬೆಳಿಗ್ಗೆ ಉಡುಪಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ತಾಯಿಯ ಪತ್ತೆಯ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟಣೆ ಕೋರಲು ಹೊರಟಿದ್ದರು. ಆದರೇ ಬೆಂಗಳೂರು ಮೂಲದ ವ್ಯಕ್ತಿಯೆನ್ನಲಾದ ಕಿಡಿಗೇಡಿಯೋರ್ವ ಕರೆ ಮಾಡಿ ಮಾಲತಿ ಶೆಟ್ಟಿ ಪ್ತತೆಯಾಗಿದ್ದಾರೆಂದು ತಿಳಿಸಿದ್ದು ಸಂತಸಗೊಂಡ ಸತೀಶ ಶೆಟ್ಟಿ ಅವರ ಬೆಂಗಳೂರು ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸುವಂತೆ ಕೋರಿದಾಗ ಕಿಡಿಗೇಡಿ ಹೇಳಿದ ವಿಚಾರ ಸುಳ್ಳು ಎಂದು ತಿಳಿದಿದೆ. ಮನೆಯವರು ಕಷ್ಟ ಹಾಗೂ ಆತಂಕದಲ್ಲಿರುವಾಗಲೂ ತಮ್ಮ ಬೇಳೆಬೇಯಿಸಿಕೊಳ್ಳುವ ಇಂತಹ ಕಿಡಿಗೇಡಿ ವರ್ತನೆ ಮಾಲತಿ ಶೆಟ್ಟಿ ಕುಟುಂಬಿಕರಲ್ಲಿ ಮತ್ತಷ್ಟು ಬೇಸರವನ್ನುಂಟು ಮಾಡಿದೆ.

ತಾಯಿ ಪತ್ತೆಗೆ ಊರಿಗೆ ಬಂದ ಅಮೇರಿಕಾದಲ್ಲಿರುವ ಮಗ
ಅಮೇರಿಕದಲ್ಲಿರುವ ಮಾಲತಿ ಶೆಟ್ಟಿಯವರ ಸತೀಶ್ ಶೆಟ್ಟಿ ತಕ್ಷಣ ತುರ್ತು ಊರಿಗೆ ಬಂದು, ಹುಡುಕಾಟ ತೀವ್ರಗೊಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈಯವರ ಜೊತೆ ಮಾತನಾಡಿ, ತಾಯಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಮಾಲತಿ ಶೆಟ್ಟಿಯವರು ದೇವಸ್ಥಾನಗಳಿಗೆ ತೆರಳಿರಬಹುದು ಎನ್ನುವ ಸಂದೇಹದೊಂದಿಗೆ ಧರ್ಮಸ್ಥಳ, ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡುಗಳಿಗೆ ತೆರಳಿ ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳ ವೀಕ್ಷಣೆ ಮಾಡಲಾಗಿದೆ. ಡಿವೈ‌ಎಸ್ಪಿ ಮಂಜುನಾಥ ಶೆಟ್ಟಿ ಅವರ ಮಾರ್ಗದರ್ಶನದಂತೆ, ಎಸ್ಸೈ ನಾಸೀರ್ ಹುಸೇನ್ ನೇತೃತ್ವದಲ್ಲಿ ಸತತ ಹುಡುಕಾಟವನ್ನು ನಡೆಸುತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ.

ಕೆರೆ ಶೋಧ-ಜ್ಯೋತಿಷಿ ಮಾತು ಹುಸಿ
ಮಾಲತಿ ಶೆಟ್ಟಿ ನಿಗೂಢ ಕಣ್ಮರೆಯಾಗಿ ಮೂರು ವಾರಗಳ ನಂತರ ಯಾವುದೇ ಸುಳಿವು ಅಲಭ್ಯವಾಗದ ಹಿನ್ನೆಲೆಯಲ್ಲಿ ಇವರ ಕುಟುಂಬ ಜ್ಯೋತಿಷಿಯೊಬ್ಬರ ಮೊರೆ ಹೋಗಿದೆ. ಜ್ಯೋತಿಷಿ ಮನೆ ಸಮೀಪದ ಕೆರೆ ಶೋಧಿಸಿ ಎಂದು ತಿಳಿಸಿದ ಬೆನ್ನಲ್ಲೇ ಅಗ್ನಿ ಶಾಮಕ ದಳದವರನ್ನು ಕರೆಸಿ ಸಮೀಪದ ಕೆರೆಯನ್ನು ಶೋಧಿಸಲಾಗಿದೆ. 5-6 ಅಡಿ ಅಷ್ಟೇ ನೀರು ಇರುವ ಗದ್ದೆ ಅಂಚಿನ ಕೆರೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆರ್ಧಗಂಟೆ ಶೋಧ ಕಾರ್ಯ ನಡೆಸಿ, ಬರಿಗೈಯಲ್ಲಿ ಮೇಲೆ ಬಂದಿದ್ದಾರೆ. ನಂತರ ಪಕ್ಕದ ಇನ್ನೊಂದು ಸಣ್ಣ ಕೆರೆಯಲ್ಲೂ ಶೋಧ ನಡೆಸಲಾಯಿತು. ಮನೆ ಎದುರು ಇರುವ ಬಾವಿಯಲ್ಲಿ ಕೂಡಾ ಶೋಧ ನಡೆಯಿತಾದರೂ ಯಾವುದೇ ಪ್ರಯೋಜನ ಆಗಿಲ್ಲ.

ಮಾಲತಿ ಶೆಟ್ಟಿ ನಿಗೂಢವಾಗಿ ನಾಪತ್ತೆಯಾಗಿ ಇಂದಿಗೆ ಮೂರುವಾರಗಳು ಮೇಲಾಗಿದೆ. ಹಣಕ್ಕಾಗಿ ಸ್ಕೆಚ್ ಹಾಕಿದ ದುಷ್ಕರ್ಮಿಗಳು ಚಿನ್ನಕ್ಕಾಗಿ ಅಪಹರಿಸಿರಬಹುದು ಎಂಬ ಸಂಶಯಗಳು ಈಗ ಎಲ್ಲರನ್ನೂ ಕಾಡುತ್ತಿದೆ. ನಿತ್ಯ ಮನೆಯವರು ಇವರ ಹುಡುಕಾಟದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಒಟ್ಟಿನಲ್ಲಿ ಮಾಲತಿ ಶೆಟ್ಟಿ ಎಲ್ಲೇ ಇದ್ದರೂ ಸುರಕ್ಷಿತವಾಗಿ ಮರಳಿ ಮನೆಗೆ ಬರಲಿ ಎಂಬುದು ನಮ್ಮ ಹಾರೈಕೆ.

ಮಾಲತಿ ಶೆಟ್ಟಿಯವರ ಚಹರೆ:
65 ವರ್ಷ ಪ್ರಾಯ, 5.5 ಅಡಿ ಎತ್ತರ ಇದ್ದಾರೆ. ಬಿಳಿ ಮೈಬಣ್ಣ, ಬಿಳಿಕಪ್ಪು ತಲೆ ಕೂದಲು, ದುಂಡು ಮುಖ, ಸಾಧಾರಣ ಮೈಕಟ್ಟು, ಕ್ರೀಮ್ ಬಿಳಿ ಬಣ್ಣದ ಸೀರೆ, ಬೇಬಿ ಪಿಂಕ್ ಬಣ್ಣದ ರವಿಕೆ ಧರಿಸಿದ್ದಾರೆ. ಕುಂದಾಪುರ ಕನ್ನಡ ಭಾಷೆ ಮಾತನಾಡುತ್ತಾರೆ. ಕಾಲಿನ ಎರಡು ಬೆರಳುಗಳು ಮೇಲ್ಮುಖವಾಗಿ ಇವೆ.

Write A Comment