ದುಬೈ: ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಶತಮಾನೋತ್ಸವ ಆಚರಣೆಯ ಸ್ಮರಣಾರ್ಥ ಕೈಗೊಳ್ಳಲಾಗುವ ದೇವಾಡಿಗ ಕೌಶಲ್ಯ ಶಿಕ್ಷಣ ಸಂಸ್ಥೆಯ ಸ್ಥಾಪನೆಯ ಉದ್ದೇಶಕ್ಕೆ ದುಬೈ ನಿವಾಸಿಗಳಿಂದ ಅದ್ಭುತ ಬೆಂಬಲ ವ್ಯಕ್ತವಾಗಿದೆ.

ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಶತಮಾನೋತ್ಸವ ಸಮಿತಿಯ ಗೌರವಾಧಕ್ಷರಾದ ದುಬೈ ಉದ್ಯಮಿ ಹರೀಶ್ ದೇವಾಡಿಗ ಅವರ ನೇತೃತ್ವದಲ್ಲಿ, ಎಸ್.ಡಿ.ಎಂ ಕಾಲೇಜಿನ ನಿವೃತ್ತ ಪ್ರಾಶುಪಾಲರಾದ ಡಾ. ದೇವರಾಜ್ ಕೆ. ಅವರ ಮಾರ್ಗದರ್ಶನದಲ್ಲಿ, ಸಂಘದ ಪದಾಧಿಕಾರಿಗಳಾದ ಕರುಣಾಕರ ಎಂ.ಎಚ್ ಹಾಗೂ ವೀಣಾ ಅವರನ್ನೊಳಗೊಂಡ ತಂಡವು ಜ.18ರಂದು ದುಬೈನ ಫಾರ್ಚುನ್ ಪ್ಲಾಜಾ ಹೋಟೇಲ‌್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಶತಮಾನೋತ್ಸವ ಹಾಗೂ ವಿಷನ್ ಮಂಗಳ- ದೇವಾಡಿಗ ಕೌಶಲ್ಯ ಶಿಕ್ಷಣ ಸಂಸ್ಥೆಯ ಸ್ಥಾಪನೆಯ ಧ್ಯೇಯೋದ್ದೇಶಗಳನ್ನು ವಿವರಿಸಿ, ದಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಈ ಕಾರ್ಯಕ್ರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಜಯ ಟೈಮ್ಸ್ ಸುದ್ದಿವಾಹಿನಿಯ ಮುಖ್ಯ ಸಂಪಾದಕಿ ಹಾಗೂ ಸೃಷ್ಟಿ ಮೀಡಿಯಾ ಅಕಾಡೆಮಿಯ ಅಧ್ಯಕ್ಷೆ ವಿಜಯಲಕ್ಷ್ಮಿ ಶಿಬರೂರು ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಶಿಕ್ಷಣ ಸಮುದಾಯದ ಶಕ್ತಿಯಾದರೆ ಮಾತ್ರ ಸಮಾಜ ಔನ್ನತ್ಯದತ್ತ ಸಾಗಬಹುದು. ಶಿಕ್ಷಣವು ದೇವಾಡಿಗ ಸಮುದಾಯದ ಏಳಿಗೆಯ ಸಂಜೀವಿನಿಯಾಗಲಿ. ಆದಷ್ಟು ಬೇಗ ದೇವಾಡಿಗರ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗಲಿ, ಮುಂದಿನ ಪೀಳಿಗೆಯ ಬಾಳ ದೀಪವಾಗಲಿ ಎಂದು ಹಾರೈಸಿದರು.
ದುಬೈ ದೇವಾಡಿಗ ಸಂಘದ ಇತಿಹಾಸವನ್ನು ವಿವರಿಸುತ್ತಾ ಸಂಘವು ನಡೆಸಿದ ಸಾಮಾಜಿಕ ಕಾರ್ಯಗಳು ಹಾಗೂ ಸಂಘದ ಧ್ಯೇಯಗಳನ್ನು ದುಬೈ ದೇವಾಡಿಗ ಸಂಘದ ಅಧ್ಯಕ್ಷರಾದ ದಿನೇಶ್ ದೇವಾಡಿಗ ಸಭೆಗೆ ತಿಳಿಸಿದರು.
ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಶತಮಾನೋತ್ಸವದ ಪ್ರಯುಕ್ತ ವಿಷನ್ ಮಂಗಳ ಯೋಜನೆಯ ರೂಪರೇಷೆಗಳು ಹಾಗೂ ಉದ್ದೇಶವನ್ನು ಯೋಜನೆಯ ಗೌರವಾಧ್ಯಕ್ಷರೂ, ಎಸ್ ಡಿ ಎಂ ಕಾಲೇಜಿನ ಮಾಜಿ ಪ್ರಾಂಶುಪಾಲರು, ನಿರ್ದೇಶಕರಾದ ದೇವರಾಜ್ ಕೆ. ವಿವರಿಸಿದರು.
ದೇವಾಡಿಗ ಜನಾಂಗ ಸಮಾಜದಲ್ಲಿ ಇತರ ಜಾತಿ ಸಂಘಗಳಂತೆ ಮುಂದುವರಿದು ಇತರರಿಗೆ ಹೇಗೆ ಮಾದರಿಯಾಗಬಹುದು ಎಂಬುದನ್ನು ವಿವರಿಸುತ್ತಾ ಶತಮಾನೋತ್ಸವದಲ್ಲಿ ದುಬೈ ದೇವಾಡಿಗ ಸಂಘದ ಕೊಡುಗೆಯ ಕುರಿತು ದುಬೈ ದೇವಾಡಿಗ ಸಂಘದ ಮಾಜಿ ಅಧ್ಯಕ್ಷರು, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಹರೀಶ್ ಶೇರಿಗಾರ್ ವಿವರಿಸಿದರು.
ಅನುಭವಿಗಳು ಹಾಗೂ ದೇವಾಡಿಗ ಸಮುದಾಯದ ಕೊಡುಗೈ ದಾನಿಗಳಾದ ನಾರಾಯಣ ದೇವಾಡಿಗ ಅವರು ಶಿಕ್ಷಣ ಸಂಸ್ಥೆಯು ಟ್ರಸ್ಟ್ ಮುಖಾಂತರ ನಡೆದಾಗ ಮಾತ್ರ ಪಾರದರ್ಶಕತೆ ಹಾಗೂ ಸಮಾಜೋಪಯೋಗಿಯಾಗಲು ಸಹಕಾರಿಯಾಗುವುದಲ್ಲದೆ ವಿವಿಧ ವಾಣಿಜ್ಯ ಸಂಸ್ಥೆಗಳ ನಿಧಿಗಳನ್ನು ಸಂಘಟಿಸಲು ಸುಲಭ ಸಾಧ್ಯ ಎಂದರು.
ಸುರೇಶ್ ದೇವಾಡಿಗ ಡಿ.ಎಚ್.ಎಲ್ ಅವರು ಸಂಘಟನೆಯು ಪ್ರಾದೇಶಿಕ ಎಲ್ಲೆಗಳನ್ನು ಮೀರಿ ಸಾಗಬೇಕು ಸಮುದಾಯದ ಅಭಿವೃದ್ಧಿಯೇ ಪ್ರತಿಯೊಬ್ಬರ ಮೂಲಮಂತ್ರವಾಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಹರೀಶ್ ಶೇರಿಗಾರ್ ಅವರ ಶಿಸ್ತುಬದ್ಧ ಯೋಜನೆ ಹಾಗೂ ದೇವಾಡಿಗ ಸಮಾಜಕ್ಕಾಗಿ ಸಮರ್ಪಣ ಮನೋಭಾವ, ದೇವರಾಜ್ ಕೆ ಅವರ ಪ್ರೋತ್ಸಾಹದ ಮಾತುಗಳೊಂದಿಗೆ ಧನಾತ್ಮಕ ಚಿಂತನೆ ಹಾಗೂ ವಿಜಯಲಕ್ಷ್ಮಿ ಅವರ ಪ್ರೇರಣಾದಾಯಿ ಭಾಷಣವು ದುಬೈ ನಗರಿಯ ಸಮಾಜ ಬಾಂಧವರಲ್ಲಿ ಶತಮಾನೋತ್ಸವ ಆಚರಣೆಯ ಬಗ್ಗೆ ಉತ್ಸಾಹ ಮೂಡಿಸುವಂತೆ ಮಾಡಿತು.
ಕ.ರಾ.ದೇ ಸಂಘದ ಉಪಾಧ್ಯಕ್ಷರಾದ ಕರುಣಾಕರ್ ಎಂ.ಎಚ್ ಶತಮಾನೋತ್ಸವದ ತಯಾರಿ ಬಗ್ಗೆ ವಿವರಿಸಿದರು. ಪ್ರಧಾನ ಕಾರ್ಯದರ್ಶಿ ವೀಣಾ ಗಣೇಶ್ ವಿಷನ್ ಮಂಗಳ ಯೋಜನೆಯ ಅನಿವಾರ್ಯತೆಯನ್ನು ತಿಳಿಸುತ್ತಾ, ಯಶಸ್ಸಿನ ಸಹಾಯಹಸ್ತಕ್ಕಾಗಿ ವಿನಂತಿಸಿದರು. ದೀಪಕ್ ಮರೋಳಿ ಕಾರ್ಯಕ್ರಮವನ್ನು ಸಂಯೋಜಿಸಿದರು.
ಹರೀಶ್ ಶೇರಿಗಾರ್, ನಾರಾಯಣ ದೇವಾಡಿಗ, ದಿನೇಶ್ ದೇವಾಡಿಗ, ಸುರೇಶ್. ಸಿ. ದೇವಾಡಿಗ, ವಿನೀತ್ ದೇವಾಡಿಗ, ಭರತ್ ದೇವಾಡಿಗ, ಮುಂಬೈನ ಧರ್ಮಪಾಲ್ ದೇವಾಡಿಗ, ವಿಶ್ವಾಸ್ ಅತ್ತಾವರ್, ಭಾಸ್ಕರ್ ಶೇರಿಗಾರ್ ಯು.ಎಸ್.ಎ, ಸುಧೀರ್ ಎಲ್. ಕದ್ರಿ ಟ್ರಸ್ಟ್‌ನ ಸದಸ್ಯರಾಗುವುದಾಗಿ ಒಪ್ಪಿದರು. ಹಾಗೆಯೇ ಉಪಸ್ಥಿತಿರಿದ್ದ ಸಮಾಜ ಬಾಂಧವರು ಟ್ರಸ್ಟಿಗಳಾಗುವ ಬಗ್ಗೆ ಆಶಯ ವ್ಯಕ್ತಪಡಿಸಿದ್ದಲ್ಲದೆ, ತಮ್ಮ ಕೊಡುಗೆಗಳನ್ನು ಘೋಷಿಸುತ್ತಾ ಶತಮಾನೋತ್ಸವದ ಯಶಸ್ಸಿಗೆ ಶುಭಹಾರೈಸಿದರು.
ಎಪ್ರಿಲ್ 25-26ಕ್ಕೆ ಕಾರ್ಯಕ್ರಮ: ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಶತಮಾನೋತ್ಸವ ಕಾರ್ಯಕ್ರಮವು ಎಪ್ರಿಲ್ 25 ಹಾಗೂ 26 ರಂದು ನಡೆಯಲಿದೆ. ಎಪ್ರಿಲ್ 25 ರಂದು ಮಂಗಳೂರು ಮಣ್ಣಗುಡ್ಡೆಯಲ್ಲಿರುವ ದೇವಾಡಿಗ ಸಭಾಭವನ, ಎ.26 ರಂದು ಮಂಗಳೂರಿನ ಟಿ.ಎಂ.ಎ ಪೈ ಕನ್ವೆಶ್ನನ್ ಸೆಂಟರ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಎಲ್ಲೆಡೆ ದೇಶ, ವಿದೇಶ, ರಾಜ್ಯ, ಹೊರರಾಜ್ಯ, ಜಿಲ್ಲೆ, ತಾಲೂಕುಗಳಲ್ಲಿ ನೆಲೆಸಿರುವ ದೇವಾಡಿಗ ಬಂಧುಗಳನ್ನು ಒಗ್ಗೂಡಿಸುವ ಇಚ್ಚಾಶಕ್ತಿಯ ಕಾರ್ಯಕ್ರಮ ಇದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
Comments are closed.