ಬೀದರ್: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷ, ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆಯವರ ತಂದೆ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರು ವಯೋಸಹಜ ಅನಾರೋಗ್ಯದಿಂದ ಬೀದರ್ನ ನಿನ್ನೆ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 102 ವರ್ಷ ವಯಸ್ಸಾಗಿತ್ತು.

ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರಿಗೆ ಮಲ್ಟಿ ಸ್ಪೆಷಾಲಿಟಿ ಆ್ಯಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಕೆಲವು ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಕಾರಣ ಅವರನ್ನು ಮನೆಗೆ ಕರೆದುಕೊಂಡು ಬಂದು ಆರೈಕೆ ಮಾಡುತ್ತಿದ್ದು ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಭೀಮಣ್ಣ ಖಂಡ್ರೆ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ ಇಂದೇ ನಡೆಯಲಿದೆ ಎಂದು ಅವರ ಪುತ್ರರಾಗಿರುವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಭಾಲ್ಕಿಯ ಗಾಂಧಿ ಗಂಜ್ನಲ್ಲಿರುವ ಸ್ವಗೃಹದ ಆವರಣದಲ್ಲಿ ಸನಿವಾರ ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
1927ರ ಜನವರಿ 8ರಂದು ಶಿವಲಿಂಗಪ್ಪ ಖಂಡ್ರೆ ಮತ್ತು ಶ್ರೀಮತಿ ಪಾರ್ವತಿ ದಂಪತಿಯ ಪುತ್ರನಾಗಿ ಜನಿಸಿದ ಭೀಮಣ್ಣ ಖಂಡ್ರೆ ಭಾಲ್ಕಿ ಹಿರೇಮಠದಲ್ಲಿ ಕನ್ನಡ ಶಿಕ್ಷಣ ಪಡೆದು ಶರಣತತ್ವದ ದೀಕ್ಷೆ ಪಡೆದ ಅವರು, ಬಾಲ್ಯದಲ್ಲಿಯೇ ಶಿಸ್ತಿನ ಬದುಕಿಗೆ ಪೂರಕವಾದ ಮೌಲ್ಯಗಳನ್ನು ಅಳವಡಿಸಿಕೊಂಡರು. ಭಾಲ್ಕಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಬೀದರ್ನಲ್ಲಿ ಪ್ರೌಢ ಶಿಕ್ಷಣ ಪಡೆದರು. ಮುನ್ಪಿ–ಫಾಜಲ್ ಪರೀಕ್ಷೆಯಲ್ಲಿ ಇಡೀ ಹೈದರಾಬಾದ್ ಪ್ರಾಂತ್ಯದಲ್ಲೇ ಪ್ರಥಮ ಸ್ಥಾನ ಪಡೆದು ತಮ್ಮ ಪ್ರತಿಭೆಯನ್ನು ಮೆರೆದರು. ನಂತರ ಹೈದರಾಬಾದ್ನ ಉಸ್ಮಾನಿಯಾ ಕಾಲೇಜಿನಲ್ಲಿ ವಕಾಲತ್ ಅಧ್ಯಯನ ಪೂರ್ಣಗೊಳಿಸಿದರು. ಕನ್ನಡದ ಜೊತೆಗೆ ಉರ್ದು, ಪಾರಸಿ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದರು.
1953ರಲ್ಲಿ ಭಾಲ್ಕಿ ಪುರಸಭೆಯ ಪ್ರಥಮ ಚುನಾಯಿತ ಅಧ್ಯಕ್ಷರಾಗುವ ಮೂಲಕ ರಾಜಕೀಯ ಜೀವನಕ್ಕೆ ಪ್ರವೇಶಿಸಿದ್ದ ಭೀಮಣ್ಣ ಖಂಡ್ರೆ ಅವರು 1962ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದರು. 4 ಬಾರಿ ಶಾಸಕರಾಗಿ, 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಎಂ.ವೀರಪ್ಪ ಮೊಯ್ಲಿ ಅವರ ಸಚಿವ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಭೀಮಣ್ಣ ಅವರ ಸಾಧನೆ: ಸಹಕಾರಿ ಧುರೀಣರಾಗಿ ಮತ್ತು ರೈತರ ಕಲ್ಯಾಣದ ಬಗ್ಗೆ ಕಳಕಳಿ ಹೊಂದಿದ್ದ ಭೀಮಣ್ಣ ಖಂಡ್ರೆ ಅವರು ಹಳ್ಳಿಖೇಡ್ನಲ್ಲಿ ಇರುವ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಹುಣಜಿಯಲ್ಲಿರುವ ಮಹಾತ್ಮಾ ಗಾಂಧೀ ಸಕ್ಕರೆ ಕಾರ್ಖಾನೆಯ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ನಾರಂಜಾ ಮತ್ತು ಕಾರಂಜಾ ನೀರಾವರಿ ಯೋಜನೆಗಳ ಅನುಷ್ಠಾನದಲ್ಲೂ ಭೀಮಣ್ಣ ಖಂಡ್ರೆ ಅವರು, ಪ್ರಮುಖ ಪಾತ್ರ ವಹಿಸಿದ್ದರು.
ಎಂ. ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, 1992 ರಿಂದ 1994ರವರೆಗೆ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ ಡಾ. ಭೀಮಣ್ಣ ಖಂಡ್ರೆ, ಆಡಳಿತದಲ್ಲಿ ಶಿಸ್ತು, ಪಾರದರ್ಶಕತೆ ಮತ್ತು ಜನಪರ ನಿಲುವಿಗೆ ಹೆಸರಾಗಿದ್ದರು.
ಸಹಕಾರಿ ಧುರೀಣರಾಗಿ ಮತ್ತು ರೈತರ ಕಲ್ಯಾಣದ ಬಗ್ಗೆ ಕಳಕಳಿ ಹೊಂದಿದ್ದ ಭೀಮಣ್ಣ ಖಂಡ್ರೆ ಅವರು ಹಳ್ಳಿಖೇಡ್ನಲ್ಲಿ ಇರುವ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಹುಣಜಿಯಲ್ಲಿರುವ ಮಹಾತ್ಮಾ ಗಾಂಧೀ ಸಕ್ಕರೆ ಕಾರ್ಖಾನೆಯ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ನಾರಂಜಾ ಮತ್ತು ಕಾರಂಜಾ ನೀರಾವರಿ ಯೋಜನೆಗಳ ಅನುಷ್ಠಾನದಲ್ಲೂ ಭೀಮಣ್ಣ ಖಂಡ್ರೆ ಅವರು, ಪ್ರಮುಖ ಪಾತ್ರ ವಹಿಸಿದ್ದರು.
ಸ್ವಾತಂತ್ರ್ಯ ಸೇನಾನಿಯಾಗಿ, ಹೈದ್ರಾಬಾದ್ ವಿಮೋಚನೆಯ ಹೋರಾಟಗಾರರಾಗಿ ರಜಾಕಾರರ ದೌರ್ಜನ್ಯ ಪ್ರತಿಭಟಿಸಿದ್ದ ಅವರು, ಏಕೀಕರಣದ ಸಂದರ್ಭದಲ್ಲಿ ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲಿಯೇ ಉಳಿಸಲು ಶ್ರಮಿಸಿದ್ದರು. ಅವರ ತಮ್ಮ ಈ ಕೊಡುಗೆಗಾಗಿ ಸುವರ್ಣ ಏಕೀಕರಣ ರಾಜ್ಯ ಪ್ರಶಸ್ತಿಗೂ ಅವರು ಭಾಜನರಾಗಿದ್ದರು.
Comments are closed.