ಪಾಟ್ನಾ: ನೆಚ್ಚಿನ ನಟ ಅಥವಾ ನಟಿಯನ್ನ ಒಂದು ಬಾರಿಯಾದ್ರೂ ಭೇಟಿಯಾಗಬೇಕು ಅನ್ನೋ ಆಸೆ ಸಿನಿ ಅಭಿಮಾನಿಗಳಿಗೆ ಇದ್ದೇ ಇರುತ್ತದೆ. ಆದ್ರೆ ಆ ಅಭಿಮಾನ ಯಾವ ಮಟ್ಟಕ್ಕೆ ತಲುಪಬಹುದು ಅನ್ನೋದಕ್ಕೆ ಈ ಘಟನೆಯೇ ಉದಾಹರಣೆ. ಪಶ್ಚಿಮ ಬಂಗಾಳ ಮೂಲದ ನಾಲ್ವರು ಬಾಲಕರು ನೆಚ್ಚಿನ ನಟ ಶಾರೂಖ್ ಖಾನ್‍ರನ್ನು ಭೇಟಿಯಾಗಲು ಮನೆ ಬಿಟ್ಟು ಬಂದು ಈಗ ಬಿಹಾರದ ಆಶ್ರಯ ತಾಣದಲ್ಲಿದ್ದಾರೆ.
ಪಶ್ಚಿಮ ಬಂಗಾಳದ ಅಸನ್‍ಸೋಲ್ ಜಿಲ್ಲೆಯ ಸಮೀರ್ ಅನ್ಸಾರಿ(5), ಕೈಶಿಲ್ ಅವಾದ್(9), ಆಕಿರ್ ಅನ್ಸಾರಿ(4) ಹಾಗೂ ಅರ್‍ಮಾನ್(5) ಶನಿವಾರ ಬೆಳಿಗ್ಗೆ ಗಯಾ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರಿಗೆ ಸಿಕ್ಕಿದ್ದಾರೆ. ನಂತರ ಅವರನ್ನ ಚೈಲ್ಡ್‍ಲೈನ್ ಅನ್ನೋ ಸಂಸ್ಥೆಗೆ ಒಪ್ಪಿಸಲಾಗಿದೆ. ಸದ್ಯಕ್ಕೆ ಬಾಲಕರ ಪೋಷಕರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದ್ದು, ಅವರನ್ನು ಮತ್ತೆ ಅವರವರ ಮನೆಗಳಿಗೆ ಕಳಿಸಲು ಸಿದ್ಧತೆ ನಡೆಸಲಾಗಿದೆ.
ಈ ನಾಲ್ವರು ಬಾಲಕರು ಶುಕ್ರವಾರ ಸಂಜೆ ಮನೆ ಬಿಟ್ಟು ಬಂದಿದ್ದು ಮುಂಬೈ ರೈಲಿನಲ್ಲಿ ಪ್ರಯಾಣ ಮಾಡಿದ್ದರು. ಶನಿವಾರ ಬೆಳಿಗ್ಗೆ ಗಯಾ ರೈಲ್ವೆ ನಿಲ್ದಾಣದಲ್ಲಿ ಬಂದಿಳಿದು ಪ್ಲಾಟ್‍ಫಾರ್ಮ್‍ನಲ್ಲಿ ಓಡಾಡುತ್ತಿದ್ರು. ಬಾಲಕರನ್ನ ನೋಡಿ ಅನುಮಾನಗೊಂಡ ರೈಲ್ವೆ ಪೊಲೀಸರು ವಿಚಾರಣೆ ಮಾಡಿದಾಗ ಶಾರೂಖ್ ಖಾನ್‍ರನ್ನು ಭೇಟಿಯಾಗಲು ಬಂದೆವು ಎಂದು ಬಾಲಕರು ಹೇಳಿದ್ದಾರೆ.
ದಿಲ್‍ವಾಲೆ ಸಿನಿಮಾ ನೋಡಿ ಈ ನಿರ್ಧಾರ: ಈ ಬಾಲಕರು ಶಾರೂಖ್ ಖಾನ್‍ರ ಅಪ್ಪಟ ಅಭಿಮಾನಿಗಳಾಗಿದ್ದು ಪೊಲೀಸರ ವಿಚಾರಣೆ ವೇಳೆ ಶಾರೂಕ್ ಖಾನ್ ಶೈಲಿಯಲ್ಲೇ ಡೈಲಾಗ್ ಹೊಡೆದು ಹಾಡು ಹೇಳಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ಟಿವಿಯಲ್ಲಿ ಇತ್ತೀಚೆಗಷ್ಟೆ ದಿಲ್‍ವಾಲೆ ಸಿನಿಮಾ ನೋಡಿದ ನಂತರ ಶಾರೂಖ್ ಖಾನ್‍ರನ್ನ ಭೇಟಿಯಾಗಲೇ ಬೇಕು ಅಂತ ನಿರ್ಧರಿಸಿದೆವು ಅಂತ ಹೇಳಿದ್ದಾರೆ.
Comments are closed.