ನವದೆಹಲಿ: ಕೇವಲ ಐದು ಪೈಸೆ ಹಣವನ್ನು ಲಂಚವಾಗಿ ಇಟ್ಟುಕೊಂಡ ಪ್ರಕರಣ ಸಂಬಂಧ ವ್ಯಕ್ತಿಯೊಬ್ಬ ಸುಮಾರು 41 ವರ್ಷಗಳಿಂದಲೂ ಕಾನೂನು ಹೋರಾಟ ನಡೆಸುತ್ತಿದ್ದಾರೆ.
1973 ರಲ್ಲಿ ರಣವೀರ್ ಸಿಂಗ್ ಯಾದವ್ ಎಂಬ ಬಸ್ ಕಂಡಕ್ಟರ್ ಮಹಿಳಾ ಪ್ರಯಾಣಿಕರೊಬ್ಬರಿಗೆ 15 ಪೈಸೆ ಟಿಕೆಟ್ ನೀಡುವ ಬದಲು, 10 ಪೈಸೆಯ ಟಿಕೆಟ್ ನೀಡಿ ಇನ್ನುಳಿದ ಐದು ಪೈಸೆಯನ್ನು ತಮ್ಮ ಜೇಬಿಗೆ ಹಾಕಿಕೊಂಡಿದ್ದರು.
ದುರಾದೃಷ್ಟವಶಾತ್ ಅವರ ಬಸ್ ನಲ್ಲಿ ತನಿಖೆ ಮಾಡಲು ಬಂದ ಫ್ಲೈಯಿಂಗ್ ಸ್ಕ್ಯಾಡ್ ಕಂಡಕ್ಟರ್ 5 ಪೈಸೆ ಹಣವನ್ನು ದುರುಪಯೋಗ ಮಾಡಿಕೊಂಡು ದೆಹಲಿ ಸಾರಿಗೆ ಇಲಾಖೆಗೆ ವಂಚನೆ ನಡೆಸುತ್ತಿದ್ದಾರೆ ಎಂದು ನಿರ್ಧರಿಸಿದರು.
ನಂತರ ಕಂಡಕ್ಟರ್ ವಿರುದ್ಧ ಇಲಾಖಾ ತನಿಖೆ ಕೈಗೊಳ್ಳಲಾಯಿತು. ನಂತರ 1976 ರಲ್ಲಿ ತನಿಖೆ ಮುಗಿದು ಸಾರಿಗೆ ಇಲಾಖೆಗೆ 5 ಪೈಸೆ ನಷ್ಟ ಉಂಟು ಮಾಡಿದ್ದಕ್ಕೆ ರಣವೀರ್ ಸಿಂಗ್ ಯಾದವ್ ಅವರನ್ನ ಕೆಲಸದಿಂದ ಅಮಾನತು ಮಾಡಲಾಯಿತು.
ಮತ್ತೊಂದು ಆಸಕ್ತಿದಾಯಕ ವಿಷಯ ಏನೆಂದರೆ ದೆಹಲಿ ಸಾರಿಗೆ ಇಲಾಖೆ ಮತ್ತು ರಣವೀರ್ ಸಿಂಗ್ ಯಾದವ್ ಕಾನೂನು ಹೋರಾಟಕ್ಕಾಗಿ ಇಬ್ಬರು ತಲಾ 5 ಲಕ್ಷ ಹಣ ಕಳೆದು ಕೊಂಡಿದ್ದಾರೆ.
ತಮ್ಮನ್ನು ಕಾನೂನು ಬಾಹಿರವಾಗಿ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಯಾದವ್ ದೆಹಲಿಯ ಲೇಬರ್ ಕೋರ್ಟ್ ಮೆಟ್ಟಿಲೇರಿದ್ದರು. ನಂತರ 1990 ರಲ್ಲಿ ದೆಹಲಿಯ ಲೇಬರ್ ಕೋರ್ಟ್ನಲ್ಲಿ ಯಾದವ್ ಕೇಸಿನಲ್ಲಿ ಜಯಗಳಿಸಿದರು.
ಯಾದವ್ ಪ್ರಯಾಣಿಕರಿಗೆ ಟಿಕೆಟ್ ರಹಿತ ಪ್ರಯಾಣಕ್ಕೆ ಅವಕಾಶ ನೀಡಿ ಸಂಸ್ಥೆಗೆ ವಂಚಿಸುತ್ತಿದ್ದಾರೆ ಎಂದು ದೆಹಲಿ ಸಾರಿಗೆ ಇಲಾಖೆ ದೆಹಲಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.
ನಮ್ಮ ನ್ಯಾಯಾಂಗ ವ್ಯವಸ್ಥೆ ನನ್ನ ಇಡೀ ಜೀವನವನ್ನು ಸರ್ವನಾಶ ಮಾಡಿತು. ನಾನು ಕೂಡಿಟ್ಟ ಎಲ್ಲಾ ಹಣವನ್ನು ಈ ಕಾನೂನು ಹೋರಾಟಕ್ಕೆ ಖರ್ಚು ಮಾಡಿದ್ದೇನೆ. ನನಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಕಳೆದುಕೊಂಡಿದ್ದೇನೆ. ನಾನು ತಪ್ಪು ಮಾಡಿಲ್ಲ ಎಂದು ನನ್ನ ಮಕ್ಕಳಿಗೆ ತಿಳಿಸಬೇಕು ಎಂದು ರಣ್ವೀರ್ ಸಿಂಗ್ ಯಾದವ್ ತಿಳಿಸಿದ್ದಾರೆ. ದೆಹಲಿ ಹೈಕೋರ್ಟ್ ಈ ವರ್ಷದ ಆರಂಭದಲ್ಲಿ ಯಾದವ್ ಅವರಿಗೆ 6 ಲಕ್ಷ ಹಣ ಹಾಗೂ ಇತರೆ ಸೌಲಭ್ಯಗಳನ್ನು ನೀಡುವಂತೆ ದೆಹಲಿ ಸಾರಿಗೆ ಇಲಾಖೆಗೆ ತಿಳಿಸಿದೆ.
Comments are closed.