ಇಟಾರ್ಸಿ: ವಲ್ಸದ್-ಕಾನ್ಪುರ ರೈಲಿನಲ್ಲಿ ಪ್ರಸವ ವೇದನೆಗೆ ಒಳಪಟ್ಟ ಹಿಂದು ಮಹಿಳೆಯ ನೆರವಿಗೆ ಧಾವಿಸಿದ ಮುಸ್ಲಿಂ ಮಹಿಳೆ ಸೂಸೂತ್ರವಾಗಿ ರೈಲಿನಲ್ಲಿ ಹೆರಿಗೆ ಮಾಡಿಸಿ ಮಾನವೀಯತೆಗೆ ಯಾವುದೇ ಜಾತಿಯಿಲ್ಲ ಎಂದು ಜಗತ್ತಿಗೆ ಸಂದೇಶ ಸಾರಿದ್ದಾಳೆ.
ಮಧ್ಯಪ್ರದೇಶದ ಇಟಾರ್ಸಿ ಸ್ಟೇಷನ್ ದಾಟಿದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕಾನ್ಪುರದ 25ರ ಹರೆಯದ ಮಹಿಳೆಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿತು. ಇದನ್ನರಿತ ಸಹ ಪ್ರಯಾಣಿಕರು ಕೂಡಲೇ ರೈಲಿನ ಸಿಬ್ಬಂದಿಗೆ ಸುದ್ದಿ ತಿಳಿಸಿದರು. ರೈಲು ಸಿಬ್ಬಂದಿ ಕೂಡಲೇ ಮುಂದಿನ ನಿಲ್ದಾಣವಾದ ಭೋಪಾಲ್ ರೈಲು ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಸ್ಥಿತಿ ಕುರಿತು ತಿಳಿಸಿದರು.
ಆದರೆ, ಸಹಿಸಲಾಗದ ನೋವಿನಿಂದ ನರಳುತ್ತಿದ್ದ ಆಕೆಯನ್ನು ನೋಡಿ ನಾಟಿ ಪ್ರಸೂತಿ ತಜ್ಞೆ ಶಕೀಲಾ ಹಿಂದೆ ಮುಂದೆ ನೋಡದೆ ಮಹಿಳೆಗೆ ನೆರವಾಗಿ ಹೆರಿಗೆ ಮಾಡಿಸಿದಳು. ಭೋಪಾಲ್ ಸ್ಟೇಷನ್ ಬರುತ್ತಿದ್ದಂತೆ ದೌಡಾಯಿಸಿದ ವೈದ್ಯರ ತಂಡ ತಾಯಿ ಮತ್ತು ಮಗು ಆರೋಗ್ಯಕರ ಸ್ಥಿತಿಯಲ್ಲಿರುವುದನ್ನು ಪರೀಕ್ಷೆ ಮೂಲಕ ದೃಢಪಡಿಸಿದರು. ಮಹಿಳೆಯ ಸ್ವಸ್ಥಳವಾದ ಕಾನ್ಪುರಕ್ಕೆ ಪ್ರಯಾಣ ಮುಂದುವರೆಸಬಹುದೆಂದು ಸಲಹೆ ಕೂಡ ನೀಡಿದರು. ಶಕೀಲಾರ ಸಮಯಪ್ರಜ್ಞೆ ಮತ್ತು ನಿಷ್ಪಕ್ಷಪಾತ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
Comments are closed.