ಮಂಗಳೂರು, ಜು.23: ಭಾರತೀಯ ವಾಯುಪಡೆಗೆ ಸೇರಿದ ಎಎನ್-32 ವಿಮಾನ ನಿನ್ನೆ ಬೆಳಿಗ್ಗೆ ಚೆನ್ನೈನಿಂದ ಪೋರ್ಟ್‌ಬ್ಲೇರ್‌ಗೆ ತೆರಳುತ್ತಿದ್ದ ವೇಳೆ ನಾಪತ್ತೆಯಾಗಿದ್ದು, ನಿಗೂಢವಾಗಿ ಕಣ್ಮರೆಯಾಗಿರುವ ವಾಯುಸೇನೆಯ 29 ಮಂದಿ ಯೋಧರ ಪೈಕಿ ಬೆಳ್ತಂಗಡಿ ಮೂಲದ ಏಕನಾಥ ಶೆಟ್ಟಿ ಕೂಡಾ ಸೇರಿದ್ದಾರೆಂದು ತಿಳಿದುಬಂದಿದೆ. ಗುರುವಾಯನಕೆರೆ ಹವ್ಯಕ ಭವನದ ಎದುರುಮನೆಯ ನಿವಾಸಿ ಏಕನಾಥ ಶೆಟ್ಟಿ ನಾಪತ್ತೆಯಾದವರು.
ಈ ಬಗ್ಗೆ ಕುಟುಂಬದವರಿಗೆ ವಾಯುಸೇನೆ ಅಧಿಕಾರಿಗಳು ದೂರವಾಣಿ ಮೂಲಕ ಮಾಹಿತಿಯನ್ನು ರವಾನಿಸಿದ್ದಾರೆ. ಸೇನಾ ವಿಮಾನದಲ್ಲಿ ಏಕನಾಥ ಶೆಟ್ಟಿ ಅವರು ಪೋರ್ಟ್‌ಬ್ಲೇರ್‌ಗೆ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ಅನಾರೋಗ್ಯಕ್ಕೆ ತುತ್ತಾಗಿದ್ದ ಏಕನಾಥ ಶೆಟ್ಟಿ ಅವರಿಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಸಣ್ಣ ಶಸ್ತ್ರಚಿಕಿತ್ಸೆ ನಡೆಯಲಿದ್ದು, ಈ ನಿಟ್ಟಿನಲ್ಲಿ ತಾನು ಶುಕ್ರವಾರ ಪೋರ್ಟ್ ಬ್ಲೇರ್‌ಗೆ ಪ್ರಯಾಣಿಸುವುದಿಲ್ಲ ಎಂಬುದಾಗಿ ತಮಗೆ ತಿಳಿಸಿದ್ದರು ಎಂದು ಮನೆಮಂದಿ ಹೇಳಿದ್ದಾರೆ. ಸೇನಾ ವಿಮಾನ ನಾಪತ್ತೆಯ ಬಳಿಕ ಅವರ ಮೊಬೈಲ್ ಸಂಪರ್ಕಕ್ಕೆ ಸಿಗದ ಕಾರಣ ಮನೆಮಂದಿ ಕಂಗಾಲಾಗಿದ್ದಾರೆ.
ಏಕನಾಥ ಶೆಟ್ಟಿ ಹಿಂದೆ ಭೂಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಳಿಕ ವಾಯುಸೇನೆಗೆ ಸೇರ್ಪಡೆಗೊಂಡಿದ್ದರು. ಸೇನೆಯ ಡಿಫೆನ್ಸ್ ಸರ್ವಿಸ್ ಕಾರ್ಪ್ಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ರಜೆಯಲ್ಲಿ ಊರಿಗೆ ಬಂದಿದ್ದ ಇವರು ಮೂರು ದಿನಗಳ ಹಿಂದಷ್ಟೇ ಮರಳಿ ದೇಶಸೇವೆಗೆ ತೆರಳಿದ್ದರು. ಪತ್ನಿ ಉಜಿರೆಯ ಎಸ್‌ಡಿಎಂ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ನಾಪತ್ತೆಯಾಗಿರುವ ಸೇನಾ ವಿಮಾನದಲ್ಲಿ ತಮ್ಮ ಪತಿಯೂ ಇದ್ದರು ಎಂಬ ಮಾಹಿತಿ ತಿಳಿದ ಬಳಿಕ ದು:ಖತಪ್ತರಾಗಿದ್ದಾರೆ.
ಎಂದಿನಂತೆ ಚೆನ್ನೈನ ತಾಂಬರಂ ವಾಯುನೆಲೆಯಿಂದ ಸರಕು ಹೇರಿಕೊಂಡು ಬೆಳಿಗ್ಗೆ 8.30ಕ್ಕೆ ಹಾರಾಟ ಆರಂಭಿಸಿದ್ದ ವಿಮಾನ 11.30ಕ್ಕೆ ಪೋರ್ಟ್‌ಬ್ಲೇರ್‌ನಲ್ಲಿ ಇಳಿಯಬೇಕಿತ್ತು. ಆದರೆ ಟೇಕ್ ಆಫ್ ಆದ 16 ನಿಮಿಷಗಳಲ್ಲಿ ವಿಮಾನ ರಾಡಾರ್ ಸಂಪರ್ಕ ಕಳೆದುಕೊಂಡು ನಿಗೂಢವಾಗಿ ನಾಪತ್ತೆಯಾಗಿದೆ. ವಿಮಾನದಲ್ಲಿ ಆರು ವಿಮಾನ ಸಿಬ್ಬಂದಿ, ಇಬ್ಬರು ಪೈಲಟ್ ಹಾಗೂ ಒಬ್ಬ ದಿಕ್ಸೂಚಕ, ವಾಯುಸೇನೆಯ ಇಬ್ಬರು, ಕರಾವಳಿ ಕಾವಲು ಪಡೆಯ ಓರ್ವ ಭದ್ರತಾ ಸಿಬ್ಬಂದಿ ಹಾಗೂ ನೌಕಾಪಡೆಯ 9 ಮಂದಿ ಸೇರಿ 29 ಮಂದಿ ಇದ್ದರು. ನಾಪತ್ತೆಯಾಗಿರುವ ವಿಮಾನಕ್ಕಾಗಿ ಹಗಲಿರುಳು ಶೋಧ ಕಾರ್ಯ ಮುಂದುವರಿದಿದ್ದು, ಯೋಧನ ಮನೆಯವರು ತಮ್ಮ ಮನೆಮಗ ಮರಳಿ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
Comments are closed.