
ತಿರುವನಂತಪುರಂ: ಕೇರಳದ ತಿರುವನಂತಪುರಂನಲ್ಲಿರುವ ಕಿಲಿಮನೂರ್‍ನ ಯುವತಿಯೊಬ್ಬಳಿಗೆ 1 ಕೋಟಿ ರೂ. ಮೊತ್ತದ ಬಂಪರ್ ಲಾಟರಿ ಹೊಡೆದಿದೆ.
ಕೇರಳ ರಾಜ್ಯದ 11ನೇ ‘ಸ್ತ್ರೀ ಶಕ್ತಿ’ ಲಾಟರಿ ಗೆದ್ದಿರುವ ನಬೀಸಾ ರಬ್ಬರ್ ಮರದಿಂದ ಅಂಟನ್ನು ಇಳಿಸುವ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡ್ತಾರೆ. ಇವರು ಕಡುಬಡವರಾಗಿದ್ದು ಇವರ ತಾಯಿ ಕಾಯಿಲೆಯಿಂದ ಹಾಸಿಗೆ ಹಿಡಿದರೆ ತಂಗಿ ಆಕ್ಸಿಡೆಂಟ್‍ವೊಂದರಲ್ಲಿ ಕಾಲು ಕಳೆದುಕೊಂಡಿದ್ದಾರೆ. ಇದೀಗ ಜಾಕ್‍ಪಾಟ್‍ನಿಂದ ಇವರ ಅದೃಷ್ಟ ಖುಲಾಯಿಸಿದಂತಾಗಿದೆ.
ನಬೀಸಾ ಈ ಹಿಂದೆಯೂ ಹಲವು ಬಾರಿ ಲಾಟರಿ ಟಿಕೆಟ್ ಖರೀದಿಸಿದ್ದು, ಎರಡು ಬಾರಿ 5 ಸಾವಿರ ರೂ ಬಹುಮಾನ ಹಾಗೂ ಸಾಕಷ್ಟು ಬಾರಿ 1 ಸಾವಿರ ರೂ ಬಹುಮಾನ ಗಿಟ್ಟಿಸಿದ್ದಾರಂತೆ. ಇದೀಗ ಬಂದಿರುವ 1 ಕೋಟಿ ರೂ. ಬಹುಮಾನದ ಹಣದಲ್ಲಿ ಸೈಟ್ ಖರೀದಿಸಿ ಒಂದು ಸಣ್ಣ ಮನೆ ಕಟ್ಟಿಸಬೇಕು. ಹಾಗೆ ತಂಗಿಗಾಗಿ ಸ್ಟೇಷನರಿ ಅಂಗಡಿ ತೆರೆಯಬೇಕು ಅಂತಿದ್ದಾರೆ ನಬೀಸಾ.
ಕೇರಳದ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಅನಾಥ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಹಣ ಸಂಗ್ರಹಿಸಲು ಇದೇ ವರ್ಷದ ಆರಂಭದಲ್ಲಿ ಈ ಲಾಟರಿಯನ್ನು ಆರಂಭಿಸಿತ್ತು. ಇದಕ್ಕೆ ಸ್ತ್ರೀ ಶಕ್ತಿ ಎಂದು ಮರುನಾಮಕರಣ ಮಾಡಿ ಟಿಕೆಟ್ ದರವನ್ನು 40 ರೂ. ನಿಂದ 50 ರೂ. ಗೆ ಏರಿಸಿತ್ತು. ಲಾಟರಿ ಟಿಕೆಟ್ ಮಾರಾಟದಿಂದ ಸಂಗ್ರಹವಾಗುವ ಹಣವನ್ನ ಸರ್ಕಾರ ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿಗಾಗಿ ಬಳಸಿಕೊಳ್ಳಲಿದೆ. ಈ ಲಾಟರಿಯಿಂದ ವರ್ಷಕ್ಕೆ 100 ಕೋಟಿ ರೂ. ಕ್ರೂಢೀಕರಿಸುವುದು ಈ ಯೋಜನೆಯ ಉದ್ದೇಶವಾಗಿದೆ.
Comments are closed.