ಕರಾವಳಿ

ಅಕ್ರಮವಾಗಿ ವಲಸೆ ಬಂದು ಉಡುಪಿಯ ಮಲ್ಪೆಯಲ್ಲಿ ನೆಲೆಸಿದ್ದ 10 ಮಂದಿ ಬಾಂಗ್ಲಾ ಪ್ರಜೆಗಳಿಗೆ 2ವರ್ಷ ಜೈಲು ಶಿಕ್ಷೆ

Pinterest LinkedIn Tumblr

ಉಡುಪಿ: ಅಕ್ರಮವಾಗಿ ಭಾರತಕ್ಕೆ ಬಂದು ಮಲ್ಪೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದ 10 ಮಂದಿ ಬಾಂಗ್ಲಾ ವಲಸಿಗರಿಗೆ ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ನ್ಯಾಯಾಲಯ ಡಿ.8ರಂದು ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಬಾಂಗ್ಲಾ ದೇಶದ ಪ್ರಜೆಗಳಾದ ಹಕೀಮ್ ಆಲಿ, ಸುಜೋನ್ ಎಸ್.ಕೆ ಯಾನೆ ಫಾರೂಕ್, ಇಸ್ಮಾಯಿಲ್ ಎಸ್.ಕೆ., ಮುಹಮ್ಮದ್ ಇಸ್ಮಾಯಿಲ್ ಹಾಕ್, ಕರೀಮ್ ಎಸ್.ಕೆ ಯಾನೆ ಅಬ್ದುಲ್ ಕರೀಮ್, ಸಲಾಂ ಎಸ್‌.ಕೆ ಯಾನೆ ಅಬ್ದುಲ್ ಅಜೀಜ್, ರಾಜಿಕುಲ್‌ ಎಸ್‌.ಕೆ., ಮುಹಮ್ಮದ್ ಸೋಜಿಬ್ ಯಾನೆ ಎಂ.ಡಿ.ಅಲ್ಲಾಂ ಅಲಿ, ರಿಮೂಲ್ ಯಾನೆ ಅಬ್ದುಲ್ ರೆಹಮಾನ್, ಮುಹಮ್ಮದ್ ಇಮಾಮ್ ಶೇಖ್, ಮುಹಮ್ಮದ್ ಜಹಾಂಗಿರ್ ಆಲಂ ಶಿಕ್ಷೆಗೆ ಗುರಿಯಾದ ಆರೋಪಿಗಳು.

2024ರ ಅ.11ರಂದು ಸಂಜೆ ಮಲ್ಪೆ ವಡಭಾಂಡೇಶ್ವರ ಬಸ್‌ ನಿಲ್ದಾಣದ ಬಳಿ 7 ಮಂದಿ ಅನುಮಾನಸ್ಪದವಾಗಿ ಲಗೇಜ್ ಸಮೇತ ಒಡಾಡುತ್ತಿರುವುದನ್ನು ಕಂಡು ಅನುಮಾನಗೊಂಡು ಮಲ್ಪೆ ಪೊಲೀಸರು ವಿಚಾರಿಸಿದ್ದರು. ಆಗ ಇವರೆಲ್ಲ ಭಾರತ ದೇಶದ ಯಾವುದೇ ಅನುಮತಿ ದಾಖಲೆಗಳನ್ನು ಪಡೆಯದೇ ಅಕ್ರಮವಾಗಿ ನಕಲಿ ಆಧಾ‌ರ್ ಕಾರ್ಡ್ ದಾಖಲೆಗಳನ್ನು ಸೃಷ್ಟಿಸಿ, ಬಾಂಗ್ಲಾದೇಶದಿಂದ ಉಡುಪಿ ತಾಲೂಕಿನ ಪಡುತೋನ್ಸೆ ಗ್ರಾಮದ ಹೂಡೆಗೆ ಬಂದಿರುವುದು ತಿಳಿದುಬಂತು.

ಅದರಂತೆ ಬಾಂಗ್ಲಾ ದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದಿರುವ ಇವರನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಆಗಿನ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕರು ನಡೆಸಿದ್ದು, ಉಳಿದ 3 ಮಂದಿ ಅಕ್ರಮ ವಲಸಿಗರನ್ನು ಬಂಧಿಸಿದ್ದರು. ಒಟ್ಟು 10 ಮಂದಿ ಬಾಂಗ್ಲಾ ದೇಶದಿಂದ ಅಕ್ರಮವಾಗಿ ಉಡುಪಿಗೆ ಬಂದ ಆರೋಪಿಗಳ ವಿರುದ್ಧ ಉಡುಪಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 10 ಮಂದಿ ಆರೋಪಿಗಳಿಗೆ 2 ವರ್ಷಗಳ ಕಾಲ ಜೈಲುಶಿಕ್ಷೆ ಮತ್ತು ತಲಾ 10,000ರೂ. ದಂಡವನ್ನು ವಿಧಿಸಿ ಆದೇಶಿಸಿದೆ.

Comments are closed.